ಬಳ್ಳಾರಿ | ಎಸ್‌ಸಿ-ಎಸ್‌ಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ: ಜೆಸ್ಕಾಂ

  • ಅರ್ಹ ಫಲಾನುಭವಿಗಳ ಮಾಸಿಕ ಬಳಕೆಯು 250 ಯೂನಿಟ್‍ಗಿಂತ ಕಡಿಮೆ ಇರಬೇಕು
  • 2022ನೇ ಏ.30ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕವನ್ನು ಸಂಪೂರ್ಣ ಪಾವತಿಸಿರಬೇಕು

ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಮಾಸಿಕ 75 ಯೂನಿಟ್‍ಗಳವರೆಗೆ ಗೃಹ ಬಳಕೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಗೃಹ ಬಳಕೆಯ ಮಾಸಿಕ 75 ಯೂನಿಟ್‍ಗಳವರೆಗಿನ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯೋಜನೆ ಸೌಲಭ್ಯ ಪಡೆಯುವ ಫಲಾನುಭವಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿರಬೇಕು. ಜಾತಿ ಪ್ರಮಾಣ ಪತ್ರ ಹೊಂದಿರಬೇಕು. ಬಿಪಿಎಲ್‌ ಕಾರ್ಡ್‌ ಮತ್ತು ಆಧಾರ್ ಕಾರ್ಡ್ ಹೊಂದಿದ್ದು, ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರಬೇಕು ಎಂದು ತಿಳಿಸಿದೆ.

ಅರ್ಹ ಫಲಾನುಭವಿಗಳ ವಿದ್ಯುತ್ ಸ್ಥಾವರಗಳಿಗೆ ಕಡ್ಡಾಯವಾಗಿ ಮಾಪಕವನ್ನು ಅಳವಡಿಸಲಾಗುವುದು ಹಾಗೂ ಪ್ರತಿ ತಿಂಗಳು ಮಾಪಕ ಓದುವುದು ಕಡ್ಡಾಯವಾಗಿರುತ್ತದೆ. ಈ ಸೌಲಭ್ಯಕ್ಕೆ ಅರ್ಹರಾಗುವ ಗ್ರಾಹಕರುಗಳು ಮಾಸಿಕ ವಿದ್ಯುತ್ ಬಿಲ್ಲನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಪಾವತಿಸುವುದು. ಅರ್ಹ ವಿದ್ಯುತ್ ಗ್ರಾಹಕರುಗಳು 2022ನೇ ಏ.30ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಬೇಕು. ಮಾಸಿಕ ಬಳಕೆಯು 250 ಯೂನಿಟ್‍ಗಳಿಗಿಂತ ಹೆಚ್ಚುವರಿಯಾದ್ದಲ್ಲಿ ಈ ಯೋಜನೆಗೆ ಆರ್ಹರಾಗಿರುವುದಿಲ್ಲ ಎಂದು ತಿಳಿಸಿದೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಟುಂಬಗಳ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯ ಅರ್ಜಿ ಪಡೆಯಲು ಅರ್ಹ ಫಲಾನುಭವಿಗಳು ಕರ್ನಾಟಕ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಆರಂಭದಿಂದ ಅಂತ್ಯದವರೆಗಿನ ಸೇವೆಗಳಿಗೆಗಾಗಿರುವ “ಸುವಿಧಾ” suvidha.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

suvidha.karnataka.gov.inಗೆ ಭೇಟಿ ನೀಡಿ “ಇತರೆ” ಯೋಜನೆಗಳಡಿಯಲ್ಲಿ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಆಯ್ಕೆ ಮಾಡಿ, ಕರ್ನಾಟಕ ನಿವಾಸಿ ಎಂಬುದನ್ನು ಖಚಿತಪಡಿಸಿ, ಲಿಂಗವನ್ನು ನಮೂದಿಸಿ ಮುಂದುವರೆಯಿರಿ. ವಯಸ್ಸಿನ ಗುಂಪನ್ನು ಆಯ್ಕೆ ಮಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿರುವುದು, ಬಡತನದ ರೇಖೆಗಿಂತ ಕೆಳಗಿರುವುದರ ಕುರಿತು ಸೂಕ್ತ ಆಯ್ಕೆ ಮಾಡಬೇಕು.

ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ನಮೂದಿಸಿ ಅದಕ್ಕೆ ಬರುವ ಒಟಿಪಿ(OTP) ಸಲ್ಲಿಸಿರಿ. ನಿಮ್ಮ ಆಧಾರ್ ಸಂಖ್ಯೆ, ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ, ಬಾಡಿಗೆ ಒಪ್ಪಂದ ಪ್ರಮಾಣ ಪತ್ರ, ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಇವೆಲ್ಲ ಅವಶ್ಯ ದಾಖಲಾತಿಗಳನ್ನು ಜೊತೆಗಿರಿಸಿಕೊಂಡು ಅರ್ಜಿ ಸಲ್ಲಿಸುವುದನ್ನು ಮುಂದುವರಿಸಬೇಕು.

ಅರ್ಜಿದಾರರ ತಾಲೂಕು, ಆರ್ಥಿಕ ಸ್ಥಿತಿಗತಿ, ಜಾತಿ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ಮತ್ತು ಬಿಪಿಎಲ್ ಪಡಿತರ ಕಾರ್ಡ್‍ನಲ್ಲಿರುವಂತೆ ಕುಟುಂಬದ ಸದಸ್ಯರ ವಿವರ, ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವಿದ್ಯುತ್ ಸಂಪರ್ಕದ ಖಾತೆ ಐಡಿ (GESCOM ELECTRICITY CONNECTION ID), ಬಿಲ್ಲಿನಲ್ಲಿರುವ ಗ್ರಾಹಕರ ಹೆಸರು, ಹಿಂದಿನ ತಿಂಗಳಿನ ಬಿಲ್ಲಿನ ಸ್ಥಿತಿಗತಿ, ವಿದ್ಯುತ್ ಸಂಪರ್ಕ ನಿಮ್ಮ ಹೆಸರಿನಲ್ಲಿದೆಯೇ ಎಂಬುವುದನ್ನು ಖಚಿತ ಪಡಿಸಿ CAPTCHAವನ್ನು ನಮೂದಿಸಿ ಮುಂದುವರಿಯಬೇಕು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಆಗಸ್ಟ್‌ 17 ಮತ್ತು 18ರಂದು ಹಲವೆಡೆ ವಿದ್ಯುತ್ ವ್ಯತ್ಯಯ

ನಂತರ ಎಲ್ಲ ವಿವರಗಳು ಸರಿಯಾಗಿರುವುದನ್ನು ಮತ್ತೊಮ್ಮೆ ಖಚಿತಪಡಿಸಿ ಮುಂದೆ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ವಿವರಗಳನ್ನು ಇ-ಸೈನ್ (e-sign) ಮಾಡಿ ಸಲ್ಲಿಸಬೇಕು. ಬಳಿಕ ಪೂರ್ಣಗೊಂಡ ಅರ್ಜಿಯನ್ನು ವೀಕ್ಷಿಸಬಹುದು ಮತ್ತು ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.

ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ನಂಬರ್‌ಗೆ ಬಂದಿರುವ ಒಟಿಪಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿರುವುದರಿಂದ ಈಗಾಗಲೇ ಅರ್ಹ ಗ್ರಾಹಕರು ಉಪವಿಭಾಗದಲ್ಲಿ ಅರ್ಜಿ ನೀಡಿದ್ದಲ್ಲಿ ಸದರಿ ಗ್ರಾಹಕರು ಇನ್ನೊಮ್ಮೆ ಆನ್‌ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು ಎಂದು ಜೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್