
- ರೈತರ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡಿ
- ಜಿಂದಾಲ್ ಪವರ್ ಪಾಯಿಂಟ್; ಭೂಮಿ ಬಿಟ್ಟವರಿಗೆ ಉದ್ಯೋಗ ಕೊಡಿ
ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಎರಡನೇ ಬೆಳೆ (ಹಿಂಗಾರು ಬೆಳೆ)ಗೆ ನೀರು ಬಿಡುವ ಬಗ್ಗೆ ಗಮನ ಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತರು, "ಮಳೆಗೆ ತತ್ತರಿಸಿದ್ದ ಮೆಣಸಿನಕಾಯಿ ಗಿಡ ಕಿತ್ತು, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳನ್ನು ಮರು ಬಿತ್ತನೆ ಮಾಡಿದ್ದಾರೆ. ಹಾಗಾಗಿ 2023ರ ಮಾರ್ಚ್ ವರೆಗೂ ನೀರು ಕೊಡಿ" ಎಂದು ಒತ್ತಾಯಿಸಿದರು.
"ಕ್ವಿಂಟಾಲ್ ತೊಗರಿಗೆ ₹7000, ಜೋಳ ₹3000 ಹಾಗೂ ಮೆಕ್ಕೆಜೋಳಕ್ಕೆ ₹2500 ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡಬೇಕು. ತುಂಗಭದ್ರಾ ಜಲಾಶಯದಿಂದ ಹೂಳು ತೆಗೆಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತಾದರೂ ಈ ತನಕ ಆ ಪ್ರಕ್ರಿಯೆ ಆಗಿಲ್ಲ. ಉಸ್ತುವಾರಿ ಸಚಿವ ಶ್ರೀರಾಮುಲು ಈ ಬಗ್ಗೆ ಗಮನಹರಿಸಿ ಸರ್ಕಾರದಿಂದ ಹೂಳೆತ್ತಿಸಬೇಕು. ಇಲ್ಲವೇ ಸ್ವತಃ ರೈತರೇ ಹಣ ಖರ್ಚು ಮಾಡಿ ಹೂಳೆತ್ತಿದರೆ ಅದನ್ನು ತಮ್ಮ ಹೊಲ-ಗದ್ದೆಗಳಿಗೆ ಬಳಸಲು ಸರ್ಕಾರ ಅನುಮತಿ ನೀಡಬೇಕು" ಎಂದು ರೈತ ಮುಖಂಡರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಜಿಲ್ಲೆಯಲ್ಲಿ ನಿಲ್ಲದ ಮೆಣಸಿನಕಾಯಿ ಕಳ್ಳತನ; ಹೊಲ ಕಾಯುವಲ್ಲಿ ನಿರತರಾದ ರೈತರು
ಭೂಮಿ ಕಳೆದುಕೊಂಡವರಿಗಿಲ್ಲ ಉದ್ಯೋಗ
ಕುಡುತಿನಿ ಜಿಂದಾಲ್ ಪವರ್ ಪಾಯಿಂಟ್ಗಾಗಿ ರೈತರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಭೂಮಿ ಕಳೆದುಕೊಂಡವರಿಗೆ ಈ ತನಕ ಉದ್ಯೋಗ ನೀಡಿಲ್ಲ. ಬದಲಾಗಿ ಹೊರಗಿನವರಿಗೆ ಕೆಲಸ ಕೊಡಲಾಗಿದೆ. ಹಾಗಾಗಿ ವಿದ್ಯಾವಂತ ನಿರುದ್ಯೋಗಿ ಯುವಕರು ಕೆಲಸಕ್ಕಾಗಿ ವಲಸೆ ಹೋಗಿದ್ದಾರೆ. ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.