
- ಹೋರಾಟಗಾರರನ್ನು ಜೈಲಿಗೆ ಕಳುಹಿಸುವ ಹುನ್ನಾರ
- ಕಾರಣವಿಲ್ಲದೇ ಎಸ್ಡಿಪಿಐ ನಾಯಕರ ಬಂಧನ
ಎಸ್ಡಿಪಿಐ ಸಂಘಟನೆ ಮುಖಂಡರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಾಳಿ ಮಾಡಿದ್ದು, ಎಸ್ಡಿಪಿಐ ನಾಯಕರನ್ನು ಬಂಧಿಸಿದೆ. ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸಿರಗುಪ್ಪದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ಡಿಪಿಐನ ಜಿಲ್ಲಾ ಮುಖಂಡ ಸೈಯದ್ ಗಯಾಸ್ ಉದ್ದೀನ್, “ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮನ ಬಂದಂತೆ ಕೆಲಸ ಮಾಡುತ್ತಿವೆ. ಸರ್ಕಾರಗಳ ಜನವಿರೋಧಿ ಧೋರಣೆಗಳ ವಿರುದ್ದ ಹೋರಾಟ ಮಾಡಿದರೆ, ಹೋರಾಟಗಾರನ್ನೇ ಜೈಲಿಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಿಜೆಪಿ ಸರ್ಕಾರ ಸಾರ್ವಜನಿಕರ ಮೇಲೆ ಸಂಘಪರಿವಾರದ ಸಿದ್ಧಾಂಥಗಳನ್ನು ಹೇರುತ್ತಿದೆ. ನಮ್ಮ ನಾಯಕರನ್ನು ಯಾವುದೇ ಕಾರಣವಿಲ್ಲದಿದ್ದರೂ ಬಂಧಿಸಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು" ಎಂದು ಆಗ್ರಹಿಸಿದರು.
ಪ್ರತಿಭಟನೆ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ʼಪ್ರತಿಭಟನೆ ನಡೆಸಲು ನಿಮಗೆ ಅನುಮತಿ ನೀಡಿದ್ದು ಯಾರು?ʼ ಎಂದು ಪ್ರಶ್ನಿಸಿದ್ದಾರೆ. ಪೊಲೀಸರ ನಡೆ ವಿರುದ್ಧ ಕಿಡಿಕಾರಿದ ಪ್ರತಿಭಟನಾಕಾರರು, "ನಮ್ಮ ಭಾರತ ದೇಶಕ್ಕೆ ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಬಾಬಾ ಸಾಹೇಬ್ ಅಂಬೇಡ್ಕರ್ ಇನ್ನೂ ಹಲವಾರು ಗಣ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದಾರೆ. ಅಂದು ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡುವಾಗ ಯಾರೊಬ್ಬರೂ ಅವರ ಅನುಮತಿ ತೆಗೆದುಕೊಂಡು ಪ್ರತಿಭಟನೆ ಮಾಡಲಿಲ್ಲ" ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜನರು ಮೌಢ್ಯಗಳನ್ನು ತೊರೆದು ಬದುಕಬೇಕು: ದಾದಾಪೀರ್ ನವಿಲೆಹಾಳ್
"ಪ್ರತಿಭಟನೆಗೆ ಪರ್ಮಿಷನ್ ಕೇಳುತ್ತಾ ಕುಳಿತಿದ್ದರೆ ಇಂದು ನಮಗೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಯಾರಿಗೂ ನ್ಯಾಯ ಸಿಗುತ್ತಿರಲಿಲ್ಲ" ಎಂದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಜಿಲ್ಲಾ ಮುಖಂಡ ಇನಾಯತುಲ್ಲ, ಸಿರಗುಪ್ಪ ಮುಖಂಡ ಎಸ್ ಶಬ್ಬೀರ, ಸೈಯದ್ ನಿಜಾಮುದ್ದೀನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.