ದೇವನಹಳ್ಳಿ | ಸ್ವಾತಂತ್ರ್ಯ ದಿನದಂದೇ ರೈತರ ಮೇಲೆ ಪೊಲೀಸರ ದರ್ಪ

Formers Protest
  • ತಡರಾತ್ರಿ 4 ಗಂಟೆಗೆ ಧರಣಿ ನಿರತರ ಮೇಲೆ ಪೊಲೀಸರ ದಾಳಿ
  • ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿ ಆತಂಕ; ರೈತರ ಬಂಧನ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ) ಭೂ ಸ್ವಾಧೀನ ವಿರೋಧಿಸಿ, ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಪೊಲೀಸರು ರಾತ್ರೋರಾತ್ರಿ ದಾಳಿ ನಡೆಸಿ 15ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ಆಗಸ್ಟ್ 15ರಂದು ದೇವನಹಳ್ಳಿ ಪಟ್ಟಣದಲ್ಲಿ ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಲು ರೈತರು ಮುಂದಾಗಿದ್ದರು. ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ದೇವನಹಳ್ಳಿ ಪಟ್ಟಣದಲ್ಲಿ ನಡೆಯುತ್ತಿರುವ ಕಾರಣ, ಪ್ರತಿಭಟನೆ ನಡೆಸದಂತೆ ಪೊಲೀಸರು ರೈತರ ಮನವೊಲಿಸುವ ಕೆಲಸ ಮಾಡಿದ್ದರು.

“ನಾವು ಧರಣಿ ನಡೆಸುತ್ತಿಲ್ಲ, ಸ್ವಾತಂತ್ರ್ಯೋತ್ಸವಕ್ಕೆ ನಮ್ಮಿಂದ ಯಾವುದೇ ತೊಂದರೆ ಆಗಲ್ಲ, ನಮಗೂ ನಮ್ಮ ದೇಶದ ಬಗ್ಗೆ ಗೌರವ ಇದೆ. ದೇಶಕ್ಕೆ ಅನ್ನ ಹಾಕುವ ನಾವು ದೇಶಕ್ಕೆ ಅಗೌರವ ತರುವ ಕೆಲಸ ಮಾಡುವುದಿಲ್ಲ. ನಮ್ಮ ಪ್ರತಿರೋಧವನ್ನಷ್ಟೇ ನಾವು ತೋರುತ್ತೇವೆ” ಎಂದು ರೈತರು ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ತಿಳಿಸಿದ್ದರು.

ಆ.13ರಂದು ನಡೆದ  ಮಾತುಕತೆ ನಂತರವೂ, ಬೆಂಗಳೂರು ಗ್ರಾಮಂತರ ಪೊಲೀಸರು ಆ.15ರ ಮುಂಜಾನೆ 4 ಗಂಟಗೆ ಧರಣಿ ಸ್ಥಳದಲ್ಲಿ ಮಲಗಿದ್ದ 15ಕ್ಕು ಹೆಚ್ಚು ರೈತರನ್ನು ಬಂಧಿಸಿದ್ದಾರೆ.

ಚೀಮಾಚನಹಳ್ಳಿ ಗ್ರಾಮದ ಬಂಧಿತ ಯುವ ರೈತ ರಮೇಶ್ ಮಾತನಾಡಿ, “ಧರಣಿ ಸ್ಥಳದಲ್ಲಿ ಮಲಗಿದ್ದ ನಮ್ಮನ್ನು ಬೆಳಿಗ್ಗೆ ನಾಲ್ಕು ಗಂಟೆಗೆ ನನ್ನನ್ನೂ ಸೇರಿದಂತೆ 15 ಜನರನ್ನು ಬಂಧಿಸಿ ರಾಜಾನುಕುಟಂಟೆ ಪೊಲೀಸ್ ಠಾಣೆಯಲ್ಲಿಟ್ಟಿದ್ದರು. ಕೆಲವರನ್ನು ವಿಜಯಪುರ ಪೊಲೀಸ್ ಠಾಣೆಗೂ ಕರೆದೊಯ್ದಿದ್ದಾರೆ” ಎಂದು ಮಾಹಿತಿ ನಿಡಿದರು.

Image
ಪೊಲೀಸರಿಂದ ಹಲ್ಲೆಗೊಳಗಾದ ರೈತ

“ಪ್ರತಿಭಟನಾ ಸ್ಥಳದಲ್ಲಿ ಮಲಗಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದ ಪೊಲೀಸರು ಬಂಧಿಸಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣೆಯಿಂದ ಈಗ ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಮ್ಮ ರೈತ ಮುಖಂಡರಾದ ಮಾರೇಗೌಡ ಅವರು ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೇವನಹಳ್ಳಿ ಪೊಲೀಸರು ಅವರನ್ನು ಅಕ್ಷರಶಃ ಎಳೆದುಕೊಂಡು ಹೋಗಿದ್ದಾರೆ. ಕಪ್ಪು ಬಟ್ಟೆ ಪ್ರದರ್ಶಿಸುವ ಉದ್ದೇಶ ನಮಗಿರಲಿಲ್ಲ. ನಾವು ನಮ್ಮ ಪ್ರತಿರೋಧವನ್ನಷ್ಟೇ ಪ್ರದರ್ಶನ ಮಾಡುವ ಉದ್ದೇಶದಲ್ಲಿದ್ದೆವು” ಎಂದು ಹೇಳಿದರು.

1777 ಎಕರೆ ಭೂಮಿ ಸ್ವಾಧೀನವನ್ನು ವಿರೋಧಿಸಿ, ‘ಭೂ ಸ್ವಾಧೀನ ವಿರೋಧಿ ಸಮಿತಿ” ವತಿಯಿಂದ ಕಳೆದ 134 ದಿನಗಳಿಂದ ಚನ್ನರಾಯಪಟ್ಟಣದ ನಾಡ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್