ಇದು ನಮ್ಮ ಸಾಮರಸ್ಯ| ಬೆಂಗಳೂರು ಕರಗ ಮತ್ತು ಮಸ್ತಾನ್ ಸಾಬ್ ದರ್ಗಾ ನಂಟು

ಆ ಕಾಲದಲ್ಲಿ ಕರಗವನ್ನು ಹೊತ್ತಿದ್ದವರೊಬ್ಬರು, ಸೂಫಿ ಸಂತರ ಮುಂದೆ ನಿಂತು ತಲೆಯ ಮೇಲಿನ ಕರಗ ಬೀಳದಂತೆ ಹರಸಿ ಎಂದು ಕೇಳಿದರೆಂದೂ, ಅದಕ್ಕೆ ಸಂತರು ಕರಗ ಬೀಳದಂತೆ ಹಾರೈಸಿದರು ಎಂಬ ಐತಿಹ್ಯವಿದೆ. ಆ ಹರಕೆ ಮತ್ತು ಹಾರೈಕೆಯ ಭಾಗವಾಗಿ ಇಂದಿಗೂ ಕರಗ ಪೂಜೆಯ 3 ದಿವಸ ಮುಂಚೆ ಮತ್ತು ಕರಗದ ದಿನ ದರ್ಗಾಕ್ಕೆ ಭೇಟಿ ನೀಡಲಾಗುತ್ತದೆ. ಕರಗವನ್ನು ಹೊತ್ತು, ದರ್ಗಾವನ್ನು 3 ಬಾರಿ ಪ್ರದಕ್ಷಿಣೆ ಹಾಕಲಾಗುತ್ತದೆ. 
Bangalore Karaga

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಇನ್ನೇನು ಕೆಲವೇ ತಾಸಿನಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. 

ಕೊವೀಡ್ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿಯ ಬೆಂಗಳೂರು ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 9 ದಿನಗಳ ಕಾಲ ನಡೆಯೋ ಉತ್ಸವದಲ್ಲಿ ನಿತ್ಯ ಹಲವು ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ. ಇಂದು (ಏ.16) ಮಧ್ಯರಾತ್ರಿ ಕರಗ ಶಕ್ತ್ಯೋತ್ಸವ ಜರುಗಲಿದೆ. 

Eedina App

ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆ ದಿನ ಕರಗ ಉತ್ಸವ ನಡೆಯುತ್ತದೆ. ಬೆಂಗಳೂರು ಮಧ್ಯಭಾಗದಲ್ಲಿರುವ ತಿಗಳರ ಪೇಟೆಯ ಧರ್ಮರಾಯ ದೇವಸ್ಥಾನದಲ್ಲಿ ದ್ರೌಪದಿ ಕರಗ ಉತ್ಸವವನ್ನು ಆಚರಿಸಲಾಗುತ್ತದೆ.

ಈ ಬಾರಿ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್, ಹಲಾಲ್ ಕಟ್ ಮತ್ತಿತರ ಮುಸ್ಲಿಂ ವಿರೋಧಿ ಅಭಿಯಾನ ಸೇರಿದಂತೆ ಕೋಮು ಸಂಘರ್ಷ ಆರಂಭವಾದ ಹಿನ್ನೆಲೆಯಲ್ಲಿ ದರ್ಗಾಕ್ಕೆ ಕರಗ ಮೆರವಣಿಗೆ ಕೊಂಡೊಯ್ಯುವ ವಿರುದ್ಧ ಕೆಲವರು ಆಕ್ಷೇಪವೆತ್ತಿದ್ದರು. ಹಿಂದೂ ಪರ ಸಂಘಟನೆ ಹೆಸರಲ್ಲಿ, ಕರಗ ಮೆರವಣಿಗೆ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ಕೊಡಬಾರದು ಎಂದು ವಿರೋಧಿಸಿದ್ದರು.

AV Eye Hospital ad

ಇದನ್ನು ಓದಿದ್ದೀರಾ? ಬೆಂಗಳೂರಿನ ಐತಿಹಾಸಿಕ ಕರಗ ಶಕ್ತ್ಯುತ್ಸವಕ್ಕೆ ಕ್ಷಣಗಣನೆ

ಆದರೆ ಇದಕ್ಕೆ ಸೊಪ್ಪು ಹಾಕದ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನ ಸಮಿತಿ ಮತ್ತು ಮಸ್ತಾನ ಸಾಬ್ ದರ್ಗಾ ಮೌಲ್ವಿಗಳು ಕರಗ ಉತ್ಸವವನ್ನು ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಸೌಹಾರ್ದತೆ ಕಾಪಾಡಿಕೊಂಡು ಹೋಗುವುದಾಗಿ ಹೇಳಿದ್ದಾರೆ.

ಸುಮಾರು 800 ವರ್ಷಗಳಿಂದಲೂ ಬೆಂಗಳೂರಿನಲ್ಲಿ ಕರಗ ಮಹೋತ್ಸವ ನಡೆದುಕೊಂಡು ಬಂದಿದೆ. ಬೆಂಗಳೂರು ಕಟ್ಟಿದ ಕೆಂಪೇಗೌಡರ ಕಾಲದಿಂದಲೂ ನಗರದ ಸಾಂಪ್ರದಾಯಿಕ ಆಚರಣೆಯಾಗಿ ಇದು ಜಾರಿಯಲ್ಲಿದೆ. ಆ ಕಾಲದಿಂದಲೂ ಚಿಕ್ಕಪೇಟೆಯ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸುವುದು ಕರಗದ ಅವಿಭಾಜ್ಯ ಅಂಗವಾಗಿ ಬಂದಿದೆ.

ಇದನ್ನು ಓದಿದ್ದೀರಾ? ಸಂಪಿಗೆ ರಸ್ತೆ ವೈಟ್ ಟಾಪಿಂಗ್| ತಿಂಗಳು ಕಳೆದರೂ ಮುಗಿಯದ ಗೋಳು, ವ್ಯಾಪಾರಿ-ಗ್ರಾಹಕರಿಗೆ ಸಂಕಷ್ಟ

ಈ ಬಗೆಗೆ ಈ ದಿನ.ಕಾಂ ಜೊತೆ ಮಾತನಾಡಿದ ಉತ್ಸವದ ಉಸ್ತುವಾರಿ ವಹಿಸುವ ವೀರ ಕುಮಾರ ಮುಖಂಡ ಚಲಕರಿ ನಾರಾಯಣಸ್ವಾಮಿ, "ಈ ಬಾರಿ ಕರಗವನ್ನು ಎ.ಜ್ಞಾನೇಂದ್ರ ಎಂಬುವವರು ಹೊರಲಿದ್ದಾರೆ. ಕರಗಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ಅಥವಾ ಸಂಘರ್ಷಕ್ಕೆ ಆಸ್ಪದ ಮಾಡಿಕೊಡುವುದಿಲ್ಲ. ಪ್ರತಿ ವರ್ಷದ ಸಂಪ್ರದಾಯದಂತೆ ಹಿಂದೂ-ಮುಸ್ಲಿಂ ಬಾಂಧವ್ಯದಲ್ಲಿ ಕರಗ ನೆರವೇರಲಿದೆ. ಇದಕ್ಕೆ ಯಾರೇ ಅಡ್ಡಗಾಲು ಹಾಕಿದರು ಕೇಳುವುದಿಲ್ಲ. ಪಿತೂರಿ ಮಾಡುವ ಜನರ ಮಾತಿಗೆ ಬೆಲೆ ಕೊಡುವುದಿಲ್ಲ" ಎಂದರು.

ಹಾಗಾಗಿ, ಹಿಂದೂ ಮುಸ್ಲಿಮರ ನಡುವಿನ ಸೌಹಾರ್ದಕ್ಕೆ ಕೊಳ್ಳಿ ಇಡುವ ಪ್ರಯತ್ನಗಳು ನಡೆದರೂ, ಅಂತಹ ಕಿಡಿಗೇಡಿ ಕೃತ್ಯಗಳಿಗೆ ಅವಕಾಶವಿಲ್ಲದಂತೆ ಕರಗ ಸಮಿತಿ ದೃಢ ನಿರ್ಧಾರ ಕೈಗೊಂಡಿದೆ. ಯಾರು ಏನೇ ಮಾಡಿದರೂ, ಹಿಂದೂ ಮುಸ್ಲಿಂ ಭಾವೈಕ್ಯದ ಆಚರಣೆಯಾದ ಕರಗ ಉತ್ಸವ ಎಂದಿನ ಪಾರಂಪರಿಕ ರೀತಿಯಲ್ಲೇ ನಡೆಯುತ್ತದೆ. ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಕರಗ ಮಹೋತ್ಸವದಲ್ಲಿ ಧರ್ಮ ಸಂಘರ್ಷದ ಬಗ್ಗೆ ವಿಷ ಬೀಜ ಬಿತ್ತುವವರ ಬಗ್ಗೆ ತಲೆಕೆಡಿಸಿಕೊಳ್ಳದೆ. ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಕರಗ ಉತ್ಸವ ನೆರವೇರಿಸಲಾಗುವುದು ಎಂದು ಖಡಾಖಂಡಿತವಾಗಿ ಹೇಳಿದರು.

ಇದನ್ನು ಓದಿದ್ದೀರಾ? ಬಂಜಾರ ಮುಖಂಡ ಗುರು ಚವಾಣ್‌ ಎಎಪಿ ಸೇರ್ಪಡೆ

ಕರಗ ಮತ್ತು ಮಸ್ತಾನ್‌ ಸಾಬ್‌ ದರ್ಗಾದ ನಡುವಿನ ನಂಟಿನ ಕುರಿತು ಈ ದಿನ.ಕಾಂ ಜೊತೆ ಮಾತನಾಡಿದ ಮಸ್ತಾನ್ ಸಾಬ್ ದರ್ಗಾದ ಮುಜಾಹಿರ್ ಪರ್ವೀಝ್ ಅಹ್ಮದ್, "ಕೋಮು ಸಂಘ‍ರ್ಷದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ವಿಷ ಬೀಜ ಬಿತ್ತುವರು ಇದ್ದೇ ಇರುತ್ತಾರೆ. ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವನ್ನು ಕೈ ಬಿಡುವುದಿಲ್ಲ. ಕರಗವನ್ನು ಬರಮಾಡಿಕೊಳ್ಳಲು ದರ್ಗಾ ಸಿದ್ಧವಾಗಿದೆ. ಕರಗ ಬಂದ ನಂತರ ಹೂವಿನ ಮಾಲೆ ಹಾಕಿ ಪ್ರಾರ್ಥನೆ ಸಲ್ಲಿಸಲಾಗುವುದು. ನಂತರ ಕರಗ ಮೂರು ಸುತ್ತು ದರ್ಗಾ ಪ್ರದಕ್ಷಿಣೆ ಹಾಕುತ್ತದೆ. ಕರಗ ನಿಮಿತ್ತ ಜನರಿಗೆ ಪಾನೀಯ ಮತ್ತು ತಿಂಡಿತಿನಿಸು ವ್ಯವಸ್ಥೆ ಮಾಡಲಾಗಿದೆ. ಕರಗ ಉತ್ಸವ ನಮ್ಮ ಹಬ್ಬ" ಎಂದರು.

ಕರಗ ಮತ್ತು ದರ್ಗಾ ನಂಟು

ಕರಗ ಮೆರವಣಿಗೆಯು ಸಾಗುತ್ತ ಕಾಟನ್‌ಪೇಟೆಯಲ್ಲಿರುವ ಮಸ್ತಾನ್ ಸಾಬ್ ದರ್ಗಾ ಮುಂದೆ ಹಾದು ಬರುತ್ತದೆ. ದರ್ಗಾಕ್ಕೂ ಮತ್ತು ಕರಗಕ್ಕೂ ನೂರಾರು ವರ್ಷಗಳ ಪ್ರತೀತಿ ಇದೆ. 18ನೇ ಶತಮಾನದಲ್ಲಿ ಹಜರತ್ ತವಕಲ್ ಮಸ್ತಾನ್ ಶಾ ಎಂಬ ಸೂಫಿಸಂತರೊಬ್ಬರಿದ್ದರು. ಅವರಿದ್ದ ಕಾಲದಲ್ಲಿ ಕರಗವನ್ನು ಹೊತ್ತಿದ್ದವರೊಬ್ಬರು, ಸಂತರ ಮುಂದೆ ನಿಂತು ತಲೆಯ ಮೇಲಿನ ಕರಗ ಬೀಳದಂತೆ ಹರಸಿ ಎಂದು ಕೇಳಿದರೆಂದೂ, ಅದಕ್ಕೆ ಸಂತರು ಕರಗ ಬೀಳದಂತೆ ಹಾರೈಸಿದರು ಎಂಬ ಐತಿಹ್ಯವಿದೆ.

ಅದೇ ಆ ಹರಕೆ ಮತ್ತು ಹಾರೈಕೆಯ ಭಾಗವಾಗಿ ಇಂದಿಗೂ ಕರಗ ಪೂಜೆಯ 3 ದಿವಸ ಮುಂಚೆ ಮತ್ತು ಕರಗದ ದಿನ ದರ್ಗಾಕ್ಕೆ ಭೇಟಿ ನೀಡಲಾಗುತ್ತದೆ. ಕರಗವನ್ನು ಹೊತ್ತು, ದರ್ಗಾವನ್ನು 3 ಬಾರಿ ಪ್ರದಕ್ಷಿಣೆ ಹಾಕಲಾಗುತ್ತದೆ. 

ಮಸ್ತಾನ ಸಾಬ್ ದರ್ಗಾ
ಮಸ್ತಾನ್ ಸಾಬ್ ದರ್ಗಾ

ಬೆಂಗಳೂರು ಕರಗ ಸಂಭ್ರಮ

ತಿಗಳರು ಎಂಬ ತಮಿಳು ಮಾತನಾಡುವ ತೋಟಗಾರರ ಸಮುದಾಯವು ಪ್ರಾರಂಭಿಸಿದ ಮತ್ತು ಉಳಿಸಿಕೊಂಡ ಸಂಪ್ರದಾಯ ಕರಗ ಉತ್ಸವ.  ಪ್ರತಿವರ್ಷ ಮಾರ್ಚ್ ಮತ್ತು ಏಪ್ರಿಲ್ ನಡುವಿನ ಕರಗದ ದಿನದಂದು ಮುಸ್ಸಂಜೆಯ ನಂತರ, ಸ್ತ್ರೀ ಉಡುಪನ್ನು ಧರಿಸಿದ ಪೂಜಾರಿಯೊಬ್ಬರು ಧೋತಿಯುಟ್ಟ, ಬೆರಗುಗೊಳಿಸುವ ಕತ್ತಿ ಆಟದೊಂದಿಗೆ ಪಕ್ಕವಾದ್ಯದಲ್ಲಿ ಅದ್ಭುತ ಮೆರವಣಿಗೆ ನಡೆಸುತ್ತಾರೆ. ಕರಗದ ಒಂದು ವಿಶಿಷ್ಟ ಲಕ್ಷಣವೆಂದರೆ 18ನೇ ಶತಮಾನದ ಮುಸ್ಲಿಂ ಸಂತನ ಸಮಾಧಿಗೆ ಭೇಟಿ ನೀಡುವುದು ಮುರಿಯಲಾಗದ ಸಂಪ್ರದಾಯವಾಗಿದೆ.

ಒಂಬತ್ತು ದಿನಗಳ ಉತ್ಸವ

ಧ್ವಜಾರೋಹಣಗೊಂಡ ನಂತರ ಎಂಟು ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 9ನೇ ದಿನಕ್ಕೆ ನಡೆಯುವುದೇ ಹೂವಿನ ಮಹೋತ್ಸವ. ಇದನ್ನು ಕರಗ ಶಕ್ತ್ಯೋತ್ಸವ ಎಂದು ಕರೆಯುತ್ತಾರೆ. ಮುಂಜಾನೆ ಅರ್ಚಕರು ಹಾಗೂ ವೀರಕುಮಾರರು ಧರ್ಮರಾಯ ದೇವಸ್ಥಾನದಿಂದ ಕರಗದ ಕುಂಟೆಗೆ ಗಂಗೆ ಪೂಜೆ ಮಾಡಿ, ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವರು. ಈ ವೇಳೆ ದೇವಾಲಯದ ಮುಂದೆ ಭಾರೀ ಪ್ರಮಾಣದ ಕರ್ಪೂರ ಉರಿಸಲಾಗುತ್ತದೆ.

ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನ
ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನ

ಕಲ್ಯಾಣಪುರಿ ಎಂದೂ ಹೇಳಲಾಗುವ ಬೆಂಗಳೂರಿನ ತಿಗಳರಪೇಟೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕರಗ ಮಹೋತ್ಸವ ಬಹಳ ಪ್ರಸಿದ್ಧಿ ಪಡೆದಿದೆ. 

ಕರಗ ಆಚರಣೆ ಹಿನ್ನಲೆ

ಮಹಾಭಾರತದ ಸಮಯದಲ್ಲಿ, ಪಂಚ ಪಾಂಡವರ ಪತ್ನಿ ದ್ರೌಪದಿ ಕಿರು ಸೈನ್ಯವನ್ನು ರಚಿಸಲು ಮತ್ತು ರಾಕ್ಷಸ ತಿಮಿರಾಸುರನನ್ನು ಸೋಲಿಸಲು ಹಲವಾರು ವೀರ ಕುಮಾರರನ್ನು ಸೃಷ್ಟಿಸಿದಳು. ಆಕೆಯ ಸಾವಿನ ಸಮಯದಲ್ಲಿ, ಈ ವೀರ ಕುಮಾರರು ದ್ರೌಪದಿಗೆ ಅವರನ್ನು ಬಿಟ್ಟು ಹೋಗದಂತೆ ಬೇಡಿಕೊಂಡರು. ದ್ರೌಪದಿ ಪ್ರತಿ ವರ್ಷ ಚೈತ್ರ ಮಾಸ (ತಿಂಗಳು) ಹುಣ್ಣಿಮೆಯ ದಿನದಂದು ಹಿಂದಿರುಗುವ ಭರವಸೆ ನೀಡಿದಳು. ಆದಿಶಕ್ತಿ ರೂಪದಲ್ಲಿ ದ್ರೌಪದಿ ಮರಳಿದ ನೆನಪಾಗಿ ಪ್ರತಿ ವರ್ಷ ಕರಗ ಹಬ್ಬವನ್ನು ಆಚರಿಸಲಾಗುತ್ತದೆ.

ಕರಗ ವಿಜೃಂಭಣೆಗೆ ಕ್ಷಣಗಣನೆ

ಏ.4ರಂದು ರಥೋತ್ಸವ ಮತ್ತು ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಉತ್ಸವದ ಕೇಂದ್ರ ಬಿಂದುವಾದ ಕರಗ ಶಕ್ತ್ಯುತ್ಸವ ಏ.16ರಂದು ರಾತ್ರಿ 12.30ಕ್ಕೆ ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಹಾಗೂ ದ್ರೌಪದಮ್ಮ ದೇವಿಯ ಕರಗೋತ್ಸವದೊಂದಿಗೆ ನಡೆಯಲಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app