
- ಕಾಂಗ್ರೆಸ್ ಪಕ್ಷ ಎಂದಿಗೂ ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ
- ಪಕ್ಷಕ್ಕೆ ಜನ ತೋರಿಸುತ್ತಿರುವ ಅಭಿಮಾನ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ
ಕಾಂಗ್ರೆಸ್ ಪಕ್ಷ ಎಂದಿಗೂ ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಭ್ರೂಣದಲ್ಲಿರುವ ಮಕ್ಕಳಿಗೆ ಒಂದು ಕಾರ್ಯಕ್ರಮ ಕೊಟ್ಟರೆ, ಹುಟ್ಟಿದ ನಂತರ ಮತ್ತೊಂದು ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಒಂದು ಕಾರ್ಯಕ್ರಮ ಸೇರಿದಂತೆ ಕಾಂಗ್ರೆಸ್ ಪಕ್ಷ ಸಾಮಾಜಿಕ ಬದ್ಧತೆ ಹೊಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ಸಾಣೆಕೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಭಾರತ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಮಕ್ಕಳ ಆಯೋಗದವರು ದೂರು ದಾಖಲಿಸಿದ್ದಾರೆ. ಈಗಾಗಲೇ ನಮ್ಮ ರಾಷ್ಟ್ರೀಯ ವಕ್ತಾರರು ಈ ವಿಚಾರವಾಗಿ 50 ಪುಟಗಳ ವರದಿ ನೀಡಿದ್ದಾರೆ. ಬಿಜೆಪಿ ಸ್ನೇಹಿತರು ಒಂದು ವಿಚಾರ ಅರ್ಥಮಾಡಿಕೊಳ್ಳಬೇಕು. ಭಾರತ ಐಕ್ಯತಾ ಯಾತ್ರೆ ಒಂದು ಚಳವಳಿ. ಇದಕ್ಕೆ ಪಕ್ಷ, ವರ್ಗ ಯಾವುದೂ ಇಲ್ಲ. ಯಾರು ಬೇಕಾದರೂ ಈ ಯಾತ್ರೆಯಲ್ಲಿ ಭಾಗವಹಿಸಬಹುದು” ಎಂದರು.
“ಬಿಜೆಪಿ ಸರ್ಕಾರ ಆಯೋಗದ ಮೂಲಕ ದೂರು ದಾಖಲಿಸಿದೆ. ಇದಕ್ಕೆ ಯಾವುದೇ ಆಧಾರವಿಲ್ಲ. ಜನ ಕಾಂಗ್ರೆಸ್ ಪಕ್ಷಕ್ಕೆ ತೋರಿಸುತ್ತಿರುವ ಪ್ರೀತಿ ವಿಶ್ವಾಸ ಅಭಿಮಾನ ಕಂಡು ಅಸೂಯೆಯಿಂದ ಈ ದೂರು ಕೊಡಿಸಿದೆ. ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಇಂದಿರಾಗಾಂಧಿ ಅವರ ಮೊಮ್ಮಗ ಇಂದು ಇಷ್ಟು ದೂರ ಹೆಜ್ಜೆ ಹಾಕುತ್ತಿದ್ದಾರೆ ಎಂದು ಮಕ್ಕಳನ್ನು ಕರೆ ತಂದು ತೋರಿಸುತ್ತಿದ್ದಾರೆ. ಹೀಗಾಗಿ ಹಳ್ಳಿಗಳಿಂದ ಜನ ಬರುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಜತೆ ತಮ್ಮ ಕಷ್ಟ, ಸಂತೋಷ ಹಂಚಿಕೊಂಡಿದ್ದಾರೆ” ಎಂದರು.

10 ಲಕ್ಷ ರೂಪಾಯಿ ಘೋಷಣೆ
“ಸೋಮವಾರ ನಮ್ಮ ಕಾರ್ಯಕರ್ತ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಬರುತ್ತಿರುವಾಗ ದುರ್ಘಟನೆಯಲ್ಲಿ ಮೃತಪಟ್ಟಿದ್ದಾನೆ. ಇಂದು ಆತನ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸುವ ಕೆಲಸವನ್ನು ಸ್ಥಳೀಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಮುಂದೆ ನಾನು ಅವರ ಕುಟುಂಬವನ್ನು ಭೇಟಿ ಮಾಡಿ, ಕೆಪಿಸಿಸಿ ವತಿಯಿಂದ ಆತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಘೋಷಿಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಸವರಾಜ ಬೊಮ್ಮಾಯಿಯವರಿಗೆ ಒಗ್ಗದ ‘ಧಮ್, ತಾಕತ್’ ವರಸೆ | ಬಿಜೆಪಿಗೆ ಬಿಸಿ ತುಪ್ಪವಾದ ಸಿಎಂ ಬದಲಾವಣೆ
“ಎಐಸಿಸಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಅ.17ರಂದು ಎಲ್ಲ ಪ್ರದೇಶ ಕಾಂಗ್ರೆಸ್ ಸದಸ್ಯರು, ಮತ ಚಲಾಯಿಸಲಿದ್ದಾರೆ. ಭಾರತ ಯಾತ್ರಿಗಳು ಎಲ್ಲಿ ಯಾತ್ರೆ ತಂಗಿರುತ್ತದೆಯೋ ಅಲ್ಲಿಂದಲೇ ಪ್ರತ್ಯೇಕ ಬೂತ್ನಲ್ಲಿ ಮತ ಹಾಕಲಿದ್ದಾರೆ. ರಾಹುಲ್ ಗಾಂಧಿ ಅವರು ಸೇರಿದಂತೆ 40 ಜನ ಭಾರತ ಯಾತ್ರಿಗಳು ಅಲ್ಲಿಂದಲೇ ಮತ ಚಲಾಯಿಸಲಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಚುನಾವಣಾ ಅಧಿಕಾರಿಗಳ ಅನುಮತಿ ಪಡೆದಿದ್ದೇವೆ. ಉಳಿದಂತೆ ನಾವೆಲ್ಲರೂ ಕೆಪಿಸಿಸಿ ಕಚೇರಿಯಲ್ಲಿ ಹೋಗಿ ಮತ ಚಲಾಯಿಸುತ್ತೇವೆ. ರಾಜ್ಯದಲ್ಲಿ 479 ಮಂದಿ ಮತ ಚಲಾಯಿಸಲಿದ್ದಾರೆ” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಜೈರಾಮ್ ರಮೇಶ್, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.