
- "ನಫ್ರತ್ ಚೋಡೋ, ಭಾರತ್ ಜೋಡೋ" ಮುಖ್ಯ ಘೋಷಣೆ
- "ಮಹಾತ್ಮ ಗಾಂಧಿ ಮೌಲ್ಯ ಪುನರುಜ್ಜೀವನಗೊಳಿಸಬೇಕಾಗಿದೆ"
ದೇಶದಲ್ಲಿ ಪ್ಯಾಸಿಸ್ಟ್ ಶಕ್ತಿಗಳು ಆಡಳಿತ ಮಾಡುತ್ತಿದ್ದು, ಸಮಾನತೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಭಾರತಕ್ಕೆ ಹೊಸ ಚಳವಳಿಯ ಅಗತ್ಯವಿದೆ ಎಂದು ಹಿರಿಯ ಆರ್ಥಿಕ ತಜ್ಞ ನಿವೃತ್ತ ಪ್ರೊ. ಎಚ್ ಎಂ ದೇಸರ್ದಾ ಅಭಿಪ್ರಾಯಪಟ್ಟರು.
ಅರ್ಥಶಾಸ್ತ್ರಜ್ಞ, ಮಹಾರಾಷ್ಟ್ರ ರಾಜ್ಯ ಯೋಜನಾ ಆಯೋಗದ ಮಾಜಿ ಸದಸ್ಯ, ದೀರ್ಘಕಾಲ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೀತಿ ನಿರೂಪಣಾ ಸಂಸ್ಥೆಗಳ ಸದಸ್ಯರಾಗಿದ್ದ ಪ್ರೊ. ಎಚ್ ಎಂ ದೇಸರ್ದಾ ಅವರು, ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
"ಬಿಜೆಪಿ ದೇಶದಲ್ಲಿ ಧ್ರುವೀಕರಣ ತಂತ್ರ ಅನುಸರಿಸುತ್ತಿದ್ದು, ಅದನ್ನು ವಿರೋಧಿಸುವ ವಿರೋಧ ಪಕ್ಷಗಳು ಮತ್ತು ಜನಾಂದೋಲನಗಳು ಗಾಂಧಿ-ಪೆರಿಯಾರ್- ಅಂಬೇಡ್ಕರ್ ದೃಷ್ಟಿಕೋನ, ಸಂವಿಧಾನ ಪ್ರತಿಪಾದಿಸುವ ಜಾತ್ಯಾತೀತ, ಸಮಾನತೆ ಹಾಗೂ ಪ್ರಜಾಸತ್ತೆಯನ್ನು ಒಪ್ಪಿಕೊಳ್ಳುವ ಎಲ್ಲರೂ ಒಂದಾಗಬೇಕು" ಎಂದು ತಿಳಿಸಿದರು.
"ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳ ನೀತಿಗಳು ಮತ್ತು ಆಡಳಿತ ಮಾದರಿ ಉಳಿಗಮಾನ್ಯ, ವಸಾಹತುಶಾಹಿ ಪರವಾಗಿದೆ. ಆರ್ಥಿಕ ಅಸಮಾನತೆ, ಸಾಮಾಜಿಕ, ಧಾರ್ಮಿಕ ವೈಷಮ್ಯ ಹೆಚ್ಚಾಗುತ್ತಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿದ್ದ, ಮೋದಿ ಸರ್ಕಾರ 8 ವರ್ಷ ಕಳೆದರೂ ಸೃಷ್ಟಿ ಮಾಡಲಿಲ್ಲ. ಹೊಸ ಉದ್ಯೋಗಕ್ಕೆ ಬದಲಾಗಿ ಸುಮಾರು 12 ಕೋಟಿ ಜನ ಇಂದು ನಿರುದ್ಯೋಗಿಗಳಾಗಿದ್ದಾರೆ" ಎಂದರು.
ಈ ಸುದ್ದಿ ಓದಿದ್ದೀರಾ?; ಮುರುಘಾ ಶ್ರೀ ಪ್ರಕರಣ | ಶಿವಮೂರ್ತಿ ಶ್ರೀಗಳ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ
"ನಫ್ರತ್ ಚೋಡೋ, ಭಾರತ್ ಜೋಡೋ" ಯಾತ್ರೆಯ ಮುಖ್ಯ ಘೋಷಣೆಯಾಗಿದೆ. ಮೋದಿ ಸರ್ಕಾರದ ನೋಟು ಅಮಾನ್ಯೀಕರಣ, ರೈತ, ಕಾರ್ಮಿಕ, ಮಹಿಳಾ ವಿರೋಧಿ, ದಲಿತ ವಿರೋಧಿ ನೀತಿಗಳಂತಹ ದಿವಾಳಿತನದ ನೀತಿಗಳನ್ನು ವಿರೋಧಿಸಲು ಕಾಂಗ್ರೆಸ್ ಪಕ್ಷ ಮತ್ತು ನಾಗರಿಕ ಸಂಘಟನೆಗಳು ಜಂಟಿಯಾಗಿ ಯಾತ್ರೆಯನ್ನು ಆಯೋಜಿಸಿವೆ" ಎಂದು ತಿಳಿಸಿದರು.
"ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕೆಲವೇ ಅಂಬಾನಿ ಮತ್ತು ಆದಾನಿಗಳಂತಹ ಕೈಗಾರಿಕಾ ಗುಂಪುಗಳು ಪರ ಒಲವು ಹೊಂದಿದೆ. ಅವರು ದೇಶದ ಸಂಪನ್ಮೂಲ ಮತ್ತು ಪರಿಸರ ವ್ಯವಸ್ಥೆಯನ್ನು ನಾಶ ಪಡಿಸುತ್ತಿದ್ದು, ಲೂಟಿ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
"ಕಾಂಗ್ರೆಸ್ ಪಕ್ಷ ಸಂಪೂರ್ಣ ಬದಲಾಗಿ, ರಾಷ್ಟ್ರೀಯ ಚಳವಳಿಯಾಗಬೇಕು. ದೇಶದಲ್ಲಿರುವ ಪ್ಯಾಸಿಸ್ಟ್ ಮತ್ತು ಯಥಾಸ್ಥಿತಿವಾದಿಗಳನ್ನು ಎದುರಿಸಲು ಯಾತ್ರೆಯಲ್ಲಿ ಜನ ಸಾಮಾನ್ಯರನ್ನು ಒಗ್ಗೂಡಿಸಬೇಕು. ಇದು ಹೊಸ ಸ್ವಾತಂತ್ರ್ಯ ಚಳವಳಿಯಾಗಿದ್ದು, ಗಾಂಧಿ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಹಾಗಾಗಿ ನಮ್ಮಂತಹ ತಜ್ಞರು ಚಳವಳಿಯ ಭಾಗವಾಗುತ್ತಿದ್ದೇವೆ" ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯ ಸಂಚಾಲಕ ಅರವಿಂದ ದಳವಾಯಿ ಇದ್ದರು.