ಭಾರತ್‌ ಜೋಡೋ ಯಾತ್ರೆ | ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಯಶಸ್ವಿಗೊಳಿಸಿ: ಸಿದ್ದರಾಮಯ್ಯ ಕರೆ

Siddaramaiah B K Hariprasad
  • ʼದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ ಈಗ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧವಾಗಬೇಕುʼ
  • ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ನಕಲಿ ದೇಶಭಕ್ತರ ಹಾವಳಿ ಹೆಚ್ಚಾಗಿದೆ: ಬಿ ಕೆ ಹರಿಪ್ರಸಾದ್

ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆ (ಭಾರತ ಐಕ್ಯತಾ ಯಾತ್ರೆ) ರಾಜ್ಯದಲ್ಲಿ 21 ದಿನ ನಡೆಯಲಿದ್ದು, ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಯಶಸ್ವಿಗೊಳಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಭಾರತ್ ಜೋಡೋ ಯಾತ್ರೆ ಕುರಿತ ಕೆಪಿಸಿಸಿ ಪದಾಧಿಕಾರಿಗಳು, ನಾನಾ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಸಮನ್ವಯಕಾರರು, ಹಿರಿಯ ಮುಖಂಡರ ಸಭೆಯಲ್ಲಿ ಮಾತನಾಡಿದರು.

“ದೇಶದಲ್ಲಿ ಜನಸಾಮಾನ್ಯರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಯುವಕರ ಭವಿಷ್ಯ ದಿನೇ ದಿನೇ ಹಾಳಾಗುತ್ತಿದೆ. ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ ಈಗ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧವಾಗಬೇಕು” ಎಂದರು.

“ಕಾಂಗ್ರೆಸ್ ಈ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ಸುಮಾರು 600 ಸಂಸ್ಥಾನಗಳನ್ನು ಒಂದುಗೊಡಿಸಿದೆ. ಆದರೆ ಬಿಜೆಪಿ ದೇಶವನ್ನು ಒಡೆಯುತ್ತಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ದಲ್ಲಿ ಬಿಜೆಪಿಯವರಿಗೆ ನಂಬಿಕೆ ಇಲ್ಲ. ರಾಜ್ಯಗಳ ಒಕ್ಕೂಟವೇ ಅವರಿಗೆ ಬೇಡವಾಗಿದೆ. ಹಿಟ್ಲರ್ ಆಡಳಿತ ಅವರಿಗೆ ಬೇಕಿದೆ” ಎಂದು ಟೀಕಿಸಿದರು.

AV Eye Hospital ad

“ದೇಶದಲ್ಲಿ ಅಸಮಾನತೆ ಮುಂದುವರಿದಿದೆ. ಸಾಮರಸ್ಯ ಹಾಳು ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ರಾಹುಲ್‌ ಗಾಂಧಿಯವರ ಈ ಪಾದಯಾತ್ರೆ ಮತ್ತೊಂದು ಸ್ವಾತಂತ್ರ್ಯ ಹೋರಾಟವಾಗಲಿದೆ. ಎಲ್ಲರೂ ತಾಯಿ ಮಕ್ಕಳಂತೆ ಬದುಕಬೇಕು ಎಂಬುದು ಈ ಪಾದಯಾತ್ರೆಯ ಉದ್ದೇಶ. ದೇಶದ ಹಿತದೃಷ್ಟಿಯಿಂದ ಯಾತ್ರೆಯಲ್ಲಿ ಭಾಗಿಯಾಗಿ” ಎಂದರು.

ಈ ಸುದ್ದಿ ಓದಿದ್ದೀರಾ? ಭಾರತ್‌ ಜೋಡೋ ಯಾತ್ರೆ | ಸ್ವಂತ ಖರ್ಚಿನಲ್ಲಿ ಐದು ಸಾವಿರ ಜನರನ್ನು ಕರೆತರುವುದು ಕಡ್ಡಾಯ: ಡಿ ಕೆ ಶಿವಕುಮಾರ್‌ ಸೂಚನೆ

ಹೆಚ್ಚಾದ ನಕಲಿ ದೇಶಭಕ್ತರ ಹಾವಳಿ

ಮೋದಿ ಪ್ರಧಾನಿಯಾದ ಮೇಲೆ ಜನಸಾಮಾನ್ಯರ ಬದುಕು ಕವಲು ದಾರಿಯಲ್ಲಿದೆ. ನಕಲಿ ದೇಶಭಕ್ತರ ಹಾವಳಿ ಹೆಚ್ಚಾಗಿದೆ. ಎಲ್ಲ ಕಡೆಯೂ ಭಯದ ವಾತಾವರಣ ನಿರ್ಮಾಣವಾಗಿದ್ದು, ಜನರಿಗೆ ಧೈರ್ಯ ತುಂಬಲು ಕನ್ಯಾಕುಮಾರಿಯಿಂದ ಕಾಶ್ಮೀರವರೆಗೂ ಭಾರತ್‌ ಜೋಡೋ ಯಾತ್ರೆ ನಡೆಯಲಿದೆ ಎಂದು ಯಾತ್ರೆಯ ಸಂಯೋಜಕ ಮತ್ತು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ತಿಳಿಸಿದರು.

“ಪ್ರತಿದಿನ 7 ಗಂಟೆಗೆ ಪಾದಯಾತ್ರೆ ನಡೆಯಲಿದ್ದು, ಮಧ್ಯಾಹ್ನ ಬಿಡುವಿನ ವೇಳೆಯಲ್ಲಿ 2 ಗಂಟೆ ವೇಳೆಗೆ ರಾಹುಲ್ ವಿಭಿನ್ನ ಕ್ಷೇತ್ರಗಳ ಜನರ ಜೊತೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 3.30 ಗೆ ಪಾದಯಾತ್ರೆ ಮುಂದುವರಿಯಲಿದೆ. ಮತ್ತೆ ಜನರ ಜೊತೆ ರಾಹುಲ್ ಮಾತುಕತೆ ನಡೆಯಲಿದೆ. ಅದರಲ್ಲಿ ಹಿಂದೂ,ಮುಸ್ಲಿಂ ಸೇರಿದಂತೆ ಇನ್ನಿತರ ಸಮುದಾಯದವರು ಭಾಗಿಯಾಗಲಿದ್ದಾರೆ. ರೈತರ ಜೊತೆಯೂ ಚರ್ಚೆ ನಡೆಸಲಿದ್ದಾರೆ” ಎಂದರು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app