
- ರಾಹುಲ್ ಗಾಂಧಿ ಅವರು ಭ್ರಷ್ಟ ಸರ್ಕಾರ ಎಂದು ಹೇಳಿರುವ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯೆ
- ಕಾಂಗ್ರೆಸ್ಸಿನ ಕೆಲ ನಾಯಕರು ಜಾಮೀನಿನ ಮೇಲಿದ್ದಾರೆ; ಅದೊಂದು 'ಬೇಲ್ ಪಾರ್ಟಿ': ಬೊಮ್ಮಾಯಿ
ಭಾರತ್ ಜೋಡೋ ಯಾತ್ರೆ ಎಂಬುದು ದುರುದ್ದೇಶದ ಆಂದೋಲನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಬೆಂಗಳೂರಿನ ಭಾನುವಾರ ವಿಧಾನಸೌಧ ಮತ್ತು ವಿಕಾಸಸೌಧ ಮಧ್ಯೆ ಇರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ರಾಹುಲ್ ಗಾಂಧಿ ಭ್ರಷ್ಟ ಸರ್ಕಾರ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಗಾಂಧಿ ಜಯಂತಿಯ ಈ ಸಂದರ್ಭದಲ್ಲಿ ನಕಲಿ ಗಾಂಧಿಗಳ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಇಡೀ ಪಕ್ಷ ಜಾಮೀನಿನ ಮೇಲಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಜಾಮೀನಿನ ಮೇಲಿದ್ದು, ಅದೊಂದು ಬೇಲ್ ಪಾರ್ಟಿ” ಎಂದು ಕುಟುಕಿದರು.
“ಕೆಪಿಸಿಸಿ ಅಧ್ಯಕ್ಷರು ಪಾದಯಾತ್ರೆಗೆ ಬಹಳ ಕಷ್ಟಪಡುತ್ತಿದ್ದಾರೆ. 2-3 ವರ್ಷಗಳಿಂದ ಪ್ರಕರಣ ನಡೆಯುತ್ತಿದೆ. ಹಿಂದೆ ಅವರಿಗೆ ಕರ್ನಾಟಕ ಎಟಿಎಂ ಆಗಿತ್ತು. ಈಗಿಲ್ಲ ಎಂಬ ಕೊರಗಿರಬಹುದು. ಇಲ್ಲಿ 40% ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಯಾರಾದರೂ, ಎಲ್ಲಾದರೂ ಹೀಗೆ ನಡೆದಿದೆ ಎಂದು ದಾಖಲೆ ನೀಡಿದರೆ ತನಿಖೆ ಮಾಡಿಸುವೆ” ಎಂದರು.
ಈ ಸುದ್ದಿ ಓದಿದ್ದೀರಾ? ಅಕ್ರಮ ಆಸ್ತಿ ಪ್ರಕರಣ ಸಿಬಿಐಗೆ ವಹಿಸಿ, ರಾಜಕೀಯವಾಗಿ ಕಿರುಕುಳ ನೀಡಲಾಗುತ್ತಿದೆ: ಡಿ ಕೆ ಶಿವಕುಮಾರ್
ಅಭಿವೃದ್ಧಿಯಲ್ಲಿ ರಾಜಕಾರಣ ಬೆರೆಸಕೂಡದು
“ಚನ್ನಪಟ್ಟಣದ ಗಲಾಟೆಯ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಸರ್ಕಾರದ ಕಾರ್ಯಕ್ರಮ ಹಾಗೂ ಅಭಿವೃದ್ಧಿಯಲ್ಲಿ ರಾಜಕಾರಣ ಬೆರೆಸದೇ ಶಿಷ್ಟಾಚಾರ, ಕಾನೂನು ಅನುಸರಿಸಬೇಕು. ನಾವೆಲ್ಲ ಬಹಳ ದೂರ ಬಂದಿದ್ದೇವೆ, ಪ್ರಬುದ್ಧರಾಗಿದ್ದೇವೆ. ಅದೇ ರೀತಿ ನಡೆದುಕೊಳ್ಳುವುದು ಬಹಳ ಮುಖ್ಯ. ಇಲ್ಲಿ ಹಿಂಸೆಗೆ ಅವಕಾಶವಿಲ್ಲ” ಎಂದರು.