ಭಾರತ್‌ ಜೋಡೋ ಯಾತ್ರೆ | ದ್ವೇಷ, ಹಿಂಸಾಚಾರದ ವಿರುದ್ಧ ಹೋರಾಡುವುದೇ ಪಾದಯಾತ್ರೆ ಉದ್ದೇಶ: ರಾಹುಲ್‌ ಗಾಂಧಿ

Rahul Gandhi
  • ರಾಜ್ಯ ಪ್ರವೇಶಿಸಿದ ಭಾರತ್‌ ಜೋಡೋ ಯಾತ್ರೆಗೆ ಗುಂಡ್ಲುಪೇಟೆಯಲ್ಲಿ ಚಾಲನೆ
  • 'ಭಾರತದ ಧ್ವನಿಯ ಯಾತ್ರೆ'ಯನ್ನು ತಡೆಯಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯ ಉದ್ದೇಶ ಬಿಜೆಪಿ ಹಾಗೂ ಆರ್‌ಎಸ್ಎಸ್ ವಿಚಾರಧಾರೆಗಳಿಂದ ದೇಶದಲ್ಲಿ ಹಬ್ಬುತ್ತಿರುವ ದ್ವೇಷ ಹಾಗೂ ಹಿಂಸಾಚಾರದ ವಿರುದ್ಧ ಹೋರಾಡುವುದಾಗಿದೆ" ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿಳಿಸಿದರು.

ರಾಜ್ಯ ಪ್ರವೇಶಿಸಿದ ಭಾರತ್‌ ಜೋಡೋ ಪಾದಯಾತ್ರೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ಅವರು ಮಾತನಾಡಿ, “ಈ ಯಾತ್ರೆ ಸಂವಿಧಾನದ ರಕ್ಷಣೆಯ ಯಾತ್ರೆ. ಸಂವಿಧಾನದ ಹೊರತಾಗಿ ಈ ನಮ್ಮ ತಿರಂಗಾಕ್ಕೆ ಬೆಲೆ ಇರುವುದಿಲ್ಲ. ಈ ಯಾತ್ರೆಯಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೂ ನಾವು ಹೆಜ್ಜೆ ಹಾಕುತ್ತೇವೆ” ಎಂದರು.

Eedina App

“ಯಾತ್ರೆಯಲ್ಲಿ ಕೆಲವೊಮ್ಮೆ ಮಳೆ ಬೀಳುತ್ತದೆ. ಮತ್ತೆ ಕೆಲವೊಮ್ಮೆ ಸುಡು ಬಿಸಿಲು ಬರುತ್ತದೆ ಆದರೂ ನಾವು ನಿರಂತರವಾಗಿ ಹೆಜ್ಜೆ ಹಾಕುತ್ತೇವೆ. ನಾನು ಒಬ್ಬನೇ ಸಾಗುವುದಿಲ್ಲ, ನನ್ನ ಜತೆಗೆ ಲಕ್ಷಾಂತರ ಜನರು ಹೆಜ್ಜೆ ಹಾಕುತ್ತಿದ್ದಾರೆ” ಎಂದರು. 

“ಯಾತ್ರೆಯಲ್ಲಿ ದ್ವೇಷ, ಹಿಂಸೆ ಕಾಣುವುದಿಲ್ಲ. ಎಲ್ಲ ಧರ್ಮ, ಜಾತಿ, ಭಾಷಿಗರು ಒಟ್ಟಿಗೆ ಹೆಜ್ಜೆ ಹಾಕುತ್ತಾರೆ. ಈ ಪಾದಯಾತ್ರೆ ಸಾಗುವಾಗ ಯಾರಾದರೂ ಬಿದ್ದರೆ ಉಳಿದವರೆಲ್ಲರೂ ಸೇರಿ ಅವರನ್ನು ಮೇಲೆತ್ತುತ್ತಾರೆ. ಆಗ ಯಾರೊಬ್ಬರೂ ನಿಮ್ಮ ಧರ್ಮ, ಜಾತಿ, ಭಾಷೆ ಯಾವುದು ಎಂದು ಯಾರೂ ಕೇಳುವುದಿಲ್ಲ. ಇದೇ ನಮ್ಮ ಪ್ರೀತಿಯ, ಶಾಂತಿಯ, ಭ್ರಾತೃತ್ವದ ಭಾರತ” ಎಂದರು.

AV Eye Hospital ad

“ಈ ಯಾತ್ರೆಯನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ. ಕಾರಣ, ಇದು ಭಾರತದ ಧ್ವನಿಯ ಯಾತ್ರೆಯಾಗಿದೆ. ನಾವು 7-8 ಗಂಟೆಗಳ ಕಾಲ ಬೆಳಗ್ಗೆಯಿಂದ ಸಂಜೆವರೆಗೂ ಹೆಜ್ಜೆ ಹಾಕುತ್ತೇವೆ. ಈ ಸಮಯದಲ್ಲಿ ದಾರಿಯುದ್ದಕ್ಕೂ ಜನ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ, ಬೆಲೆ ಏರಿಕೆ, ನಿರುದ್ಯೋಗ, ರೈತರ ಮೇಲಿನ ದೌರ್ಜನ್ಯ, ಸಾರ್ವಜನಿಕ ಉದ್ಯೋಗ ಖಾಸಗೀಕರಣದ ಬಗ್ಗೆ, ಇಡೀ ದೇಶದ ಜನ ತಮ್ಮ ನೋವು ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಎಲ್ಲೂ ದೊಡ್ಡ ಭಾಷಣಗಳು ಇರುವುದಿಲ್ಲ” ಎಂದರು.

Bharath Jodo Yatre

“ಈ ಪಾದಯಾತ್ರೆ ನಮ್ಮ ಅಭಿಪ್ರಾಯ ಹೇಳುವುದಕ್ಕಿಂತ ನಿಮ್ಮ ಸಮಸ್ಯೆಗಳನ್ನು ಆಲಿಸಲು ಮಾಡಲಾಗುತ್ತಿದೆ. ಜನ ಪ್ರಶ್ನೆ ಕೇಳಬಹುದು; ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಡೆಯುವುದೇಕೆ? ಪ್ರಜಾಪ್ರಭುತ್ವದಲ್ಲಿ ಹಲವು ಸಂಸ್ಥೆಗಳಿವೆ. ಮಾಧ್ಯಮ, ಸಂಸತ್ತುಗಳಿವೆ. ಇವೆಲ್ಲವೂ ವಿರೋಧ ಪಕ್ಷಗಳಿಗೆ ಬಂದ್ ಮಾಡಲಾಗಿದೆ. ಮಾಧ್ಯಮಗಳಲ್ಲಿ ನಮ್ಮ ವಿಚಾರ ಬರುವುದಿಲ್ಲ, ಮಾಧ್ಯಮಗಳನ್ನು ಸರ್ಕಾರ ನಿಯಂತ್ರಿಸುತ್ತಿದೆ” ಎಂದು ಆರೋಪಿಸಿದರು. 

ಈ ಸುದ್ದಿ ಓದಿದ್ದೀರಾ? ಭಾರತ್ ಜೋಡೋ ಯಾತ್ರೆ | ಸಂವಿಧಾನದ ಪೀಠಿಕೆ ನೀಡಿ ರಾಹುಲ್ ಗಾಂಧಿ ಸ್ವಾಗತಿಸಿದ ದೇವನೂರ ಮಹಾದೇವ

“ಸಂಸತ್ತಿನಲ್ಲಿ ನಾವು ಏನಾದರೂ ಹೇಳಲು ಹೋದರೆ ಅದಕ್ಕೆ ಅವಕಾಶ ನೀಡುವುದಿಲ್ಲ, ವಿರೋಧ ಪಕ್ಷದವರನ್ನು ಬಂಧಿಸಲಾಗುತ್ತದೆ. ಹೀಗಾಗಿ ನಮ್ಮ ಮುಂದೆ ಬೇರೆ ದಾರಿ ಇಲ್ಲದೆ ಪಾದಯಾತ್ರೆ ಮಾಡುತ್ತಿದ್ದೇವೆ. ಜನರ ಜತೆ ಸಾವಿರಾರು ಕಿ.ಮೀ ಹೆಜ್ಜೆ ಹಾಕುವುದೊಂದೇ ವಿರೋಧ ಪಕ್ಷಗಳ ಮುಂದೆ ಉಳಿದಿರುವ ದಾರಿ. ಈ ದಾರಿಯಲ್ಲಿ ನಡೆಯುವುದನ್ನು ಯಾರೂ ಕೂಡ ತಡೆಯಲಾಗುವುದು. ಕಾರಣ, ಇಲ್ಲಿ ನಾವು ನಡೆಯುತ್ತಿಲ್ಲ, ದೇಶದ ಜನ ನಡೆಯುತ್ತಿದ್ದಾರೆ” ಎಂದು ಹೇಳಿದರು.

“ಭಾರತೀಯರ ಧ್ವನಿಯನ್ನು ಅಡಗಿಸುವ ಸಾಮರ್ಥ್ಯ ಯಾವುದೇ ಶಕ್ತಿಗಳಿಗೆ ಇಲ್ಲ. ಇಂದು ಇಷ್ಟು ಬಿಸಿಲಿನಲ್ಲಿ ನನ್ನ ಮಾತು ಕೇಳಲು ಬಂದಿರುವ ನಿಮ್ಮೆಲ್ಲರಿಗೂ ನಾನು ಧನ್ಯವಾದಗಳನ್ನು ಅಪಿಸುತ್ತೇನೆ. ಮುಂದಿನ 21 ದಿನ ನೀವು ನನ್ನೊಂದಿಗೆ ಈ ಉರಿ ಬಿಸಿಲಿನಲ್ಲಿ ಹೆಜ್ಜೆ ಹಾಕಬೇಕು, ಕರ್ನಾಟಕ ರಾಜ್ಯದ ನೋವನ್ನು ನಾವು ಆಲಿಸುತ್ತೇವೆ. ಕರ್ನಾಟಕದಲ್ಲಿನ ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳನ್ನು ಆಲಿಸುತ್ತೇವೆ. ನಿಮ್ಮೆಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು” ಎಂದು ಎಲ್ಲ ಸಹಯಾತ್ರಿಗಳಿಗೆ ಹುರುಪು ತುಂಬಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app