
- ಗುರುವಾರ ಸಂಜೆ ಮಂತ್ರಾಲಯಕ್ಕೆ ಭೇಟಿ ನೀಡಿ, ವೃಂದಾವನ ದರ್ಶನ ಮಾಡಲಿರುವ ರಾಹುಲ್
- ಭಾರತ್ ಜೋಡೋ ಯಾತ್ರೆ ಭಾಗವಾಗಿ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿಗೆ ತೆರಳುತ್ತಿರುವ ರಾಹುಲ್
ಭಾರತ್ ಜೋಡೋ ಯಾತ್ರೆ ರಾಯಚೂರು ಗಡಿ ಪ್ರವೇಶಿಸುವ ಮೊದಲೇ ರಾಹುಲ್ ಗಾಂಧಿ ಅವರು ಗುರುವಾರ ಸಂಜೆ ಮಂತ್ರಾಲಯಕ್ಕೆ ಭೇಟಿ ನೀಡಲಿದ್ದಾರೆ.
ರಾಹುಲ್ ಗಾಂಧಿ ಅವರ ಈ ಅಪರೂಪದ ಭೇಟಿಯೊಂದಿಗೆ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಕುಟುಂಬದ ಮೊದಲ ವ್ಯಕ್ತಿಯೊಬ್ಬರು ರಾಯರ ದರ್ಶನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಸಾಗಿಬರುತ್ತಿರುವ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಅಪಾರ ಜನ ಮನ್ನಣೆ ಪಡೆದಿದೆ. ಯಾತ್ರೆಯಲ್ಲಿ ದೇಶದ ಪ್ರಸಿದ್ಧ ಧಾರ್ಮಿಕ ತಾಣಗಳಿಗೆ ರಾಹುಲ್ ಗಾಂಧಿ ಭೇಟಿ ನೀಡುತ್ತಿದ್ದಾರೆ. ರಾಜ್ಯದ ಆರಂಭದ ಯಾತ್ರೆಯಲ್ಲಿ ಆದಿಚುಂಚನಗಿರಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಈಗ ಮಂತ್ರಾಲಯದ ರಾಯರ ದರ್ಶನ ಪಡೆಯಲು ರಾಹುಲ್ ಗಾಂಧಿ ಉತ್ಸುಕರಾಗಿದ್ದಾರೆ.

ಅಕ್ಟೋಬರ್ 20ರಂದು ಆಂಧ್ರಪ್ರದೇಶದ ಯಮನೂರು ಮಾರ್ಗದಿಂದ ಮಂತ್ರಾಲಯಕ್ಕೆ ಸಂಜೆ 7 ಗಂಟೆಗೆ ರಾಹುಲ್ ತಲುಪಲಿದ್ದಾರೆ. ನಂತರ ರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನ ಪಡೆಯಲಿದ್ದಾರೆ. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಅವರ ಆಶೀರ್ವಾದ ಪಡೆಯಲಿದ್ದಾರೆ ಎನ್ನಲಾಗಿದೆ.
ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದ ಹೊರಾಂಗಣ ಮತ್ತು ಪ್ರಾಕಾರದಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಹಿರಿಯ ನಾಯಕರು ಈಗಾಗಲೇ ಮಠದ ಆಡಳಿತಾಧಿಕಾರಿಗಳು ಮತ್ತು ಮಠದ ಪೀಠಾಧಿಪತಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾರತ್ ಜೋಡೋ ಯಾತ್ರೆ | ಗಣಿನಾಡಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ರಣಕಹಳೆ: 'ಬಿಜೆಪಿ ಮುಕ್ತ ಭಾರತ' ಸಂಕಲ್ಪ
ಪಾದಯಾತ್ರೆ ಸಾಗಿಬರುತ್ತಿರುವ ಪ್ರತಿ 25 ಕಿಲೋ ಮೀಟರ್ ಅಂತರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದು, ಮಂತ್ರಾಲಯದಲ್ಲಿ ವಾಸ್ತವ್ಯ ಒದಗಿ ಬಂದಿದೆ. ಮಂತ್ರಾಲಯಕ್ಕೆ ಹೊಂದಿಕೊಂಡು ರಾಯಚೂರು ಮಾರ್ಗದ ಅಭಯ ಆಂಜನೇಯ ಮೂರ್ತಿ ಎದುರಿನ ಬಯಲಿನಲ್ಲೇ ವಾಸ್ತವ್ಯಕ್ಕಾಗಿ ಸಿದ್ಧತೆ ಮಾಡಲಾಗಿದೆ.
ಕರ್ನಾಟಕದಲ್ಲಿ ಬಹು ಭಾಗ ಸಂಚರಿಸಿರುವ ಭಾರತ್ ಜೋಡೋ ಯಾತ್ರೆ, ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಮುಗಿಸಿಕೊಂಡು ಆಂಧ್ರಪ್ರದೇಶದಲ್ಲಿ ಸಾಗುತ್ತಿದೆ. ರಾಯಚೂರು ತಾಲೂಕಿನಲ್ಲಿ ಅಕ್ಟೋಬರ್ 21 ರಿಂದ ಅಕ್ಟೋಬರ್ 23 ರವರೆಗೆ ಪಾದಯಾತ್ರೆ ಮತ್ತೆ ರಾಜ್ಯದಲ್ಲಿ ಮುಂದುವರಿಯಲಿದೆ.