ಬೀದರ್ | ಅಂಗನವಾಡಿ ಕೇಂದ್ರಕ್ಕಿಲ್ಲ ಸ್ವಂತ ಕಟ್ಟಡ; ಸಮುದಾಯ ಭವನದಲ್ಲೇ ಪಾಠ

Bidar
  • ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಒತ್ತಾಯ
  • ಸಮರ್ಪಕ ಚರಂಡಿಯಿಲ್ಲದೆ ರಸ್ತೆಯಲ್ಲೇ ನಿಲ್ಲುವ ಕೊಳಚೆ ನೀರು

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೇತಿ ಮೇಳಕುಂದಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಭಾಟಸಂಗಾವಿ ಗ್ರಾಮದ ಅಂಗನವಾಡಿ ಕೇಂದ್ರವು ಶಿಥಿಲಾವಸ್ಥೆಯಲ್ಲಿದೆ. ಸ್ವಂತ ಕಟ್ಟಡವಿಲ್ಲದೆ, ಗ್ರಾಮದ ಸಮುದಾಯದ ಭವನದಲ್ಲೇ ಅಂಗನವಾಡಿ ಕೇಂದ್ರ ನಡೆಸುವ ಪರಿಸ್ಥಿತಿ ಬಂದಿದೆ.

ಭಾಟಸಂಗಾವಿ ಗ್ರಾಮದಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳಿವೆ. ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಮರೀಚಿಕೆಯಾಗಿದೆ. ಅಂಗನವಾಡಿ ಕೇಂದ್ರ ಸೇರಿದಂತೆ ಮೂಲಭೂತ ಸೌಕರ್ಯ ಇಲ್ಲದೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ದಲಿತ ಬಡಾವಣೆಯಲ್ಲಿ ಸಮರ್ಪಕ ಚರಂಡಿ, ಸಿಸಿ ರಸ್ತೆ ಇಲ್ಲದ ಕಾರಣ ಮನೆಗಳಿಂದ ಬರುವ ಕೊಚ್ಚೆ ನೀರು ರಸ್ತೆ ಮೇಲೆ ಸಂಗ್ರಹವಾಗುತ್ತದೆ. ಮಳೆಗಾಲದಲ್ಲಿ ಮಳೆ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಉತ್ತರ ಕನ್ನಡ | ಸಿದ್ದಿ ಮಹಿಳೆಯರು ನಡೆಸಲಿದ್ದಾರೆ ಪರಿಸರ ಪ್ರವಾಸೋದ್ಯಮ

ಈ ಬಗ್ಗೆ ಈ ದಿನ.ಕಾಮ್‌ ಜೊತೆ ಮಾತನಾಡಿದ ಗ್ರಾಮಸ್ಥ ಲಕ್ಷ್ಮಣ ಸಿಂಗಾರೆ, ”ಗ್ರಾಮದ ದಲಿತ ಓಣಿಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲದಂತಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಬಡಾವಣೆಯ ಅವ್ಯವಸ್ಥೆ ಸರಿಪಡಿಸುವಂತೆ ಪಿಡಿಒ ಸೇರಿದಂತೆ ಪಂಚಾಯತ್‌ ಸದಸ್ಯರಿಗೆ ಅನೇಕ ಸಲ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ದಲಿತ ಓಣಿಯ ಸಮಸ್ಯೆ ಸೇರಿದಂತೆ ಗ್ರಾಮದಲ್ಲಿರುವ ಇತರೆ ಸಮಸ್ಯೆಗಳು ಬಗೆಹರಿಸಬೇಕು” ಎಂದು ಒತ್ತಾಯಿಸಿದರು.

Image
Bidar

ದಲಿತ ಓಣಿಯ ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲಗೊಂಡಿದ್ದು, ಅದನ್ನು ನೆಲಸಮಗೊಳಿಸಿ ಹೊಸ ಅಂಗನವಾಡಿ ಕೇಂದ್ರ ನಿರ್ಮಿಸಬೇಕು. ದಲಿತ ಸ್ಮಶಾನ ಭೂಮಿಗೆ ಸುತ್ತುಗೋಡೆ ಹಾಗೂ ಸ್ಮಶಾನಕ್ಕೆ ಹೋಗಲು ರಸ್ತೆ ನಿರ್ಮಿಸಬೇಕು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯದಂತೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ

ಮಾಸ್‌ ಮೀಡಿಯಾ ಕಲ್ಬುರ್ಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180