ಬೀದರ್ | ಬಿಜೆಪಿಯ ಕೇಂದ್ರ ಸಚಿವ ಹಾಗೂ ಶಾಸಕರ ಮಧ್ಯೆ ಜಟಾಪಟಿ

Bidar
  • ತಿರಂಗಾ ಯಾತ್ರೆಗೆ ಬಿಜೆಪಿ ಶಾಸಕನಿಗೆ ಆಹ್ವಾನ ನೀಡದ್ದಕ್ಕೆ ಆಕ್ರೋಶ
  • ಸ್ವಪಕ್ಷದ ಮುಖಂಡರ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ

ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ, ಬೀದರ್ ಸಂಸದ ಭಗವಂತ ಖೂಬಾ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಬೆಂಬಲಿಗರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಶನಿವಾರ (ಆಗಸ್ಟ್‌ 13) ಕಿತ್ತಾಟ ನಡೆದಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಕೇಂದ್ರ ಸಚಿವ ಭಗವಂತ ಖೂಬಾ ಅವರ ನೇತೃತ್ವದಲ್ಲಿ ‘ತಿರಂಗಾ ಯಾತ್ರೆ’ ಕಾರ್ಯಕ್ರಮ ಜರುಗಿತು. ಕಮಲನಗರ ತಾಲೂಕಿನ ಸಂಗಮ ಕ್ರಾಸ್‌ನಿಂದ  ಕಾರು ಜಾಥಾದ ಮೂಲಕ ಆರಂಭವಾದ ತಿರಂಗಾ ಯಾತ್ರೆಯು ಭಾಲ್ಕಿ, ಬೀದರ್, ಹುಮನಾಬಾದ್ ಮಾರ್ಗವಾಗಿ ಬಸವಕಲ್ಯಾಣ ನಗರಕ್ಕೆ ತಲುಪಿದ ವೇಳೆ ಸ್ವಪಕ್ಷದವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಕಿತ್ತಾಟ ನಡೆದಿದ್ದು ಏಕೆ?  

ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರು ಜಾಥಾದ ತಿರಂಗಾ ಯಾತ್ರೆಗೆ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ ಅವರಿಗೆ ಆಹ್ವಾನ ನೀಡಲಿಲ್ಲ.

ಇದರಿಂದಾಗಿ ಶರಣು ಸಲಗರ ಅವರ ಬೆಂಬಲಿಗರು ಸಚಿವ ಭಗವಂತ ಖೂಬಾ ಅವರ ಬೆಂಬಲಿಗರ ನಡುವೆ ತಳ್ಳಾಟ ಆರಂಭವಾಗಿ ಪರ-ವಿರೋಧ ಘೋಷಣೆ ಕೂಗಿದರು. ಸ್ಥಳೀಯ ಶಾಸಕರ ಕಡೆಗಣಿಸಿದ ಕೇಂದ್ರ ಸಚಿವರ ವಿರುದ್ಧ ಆಕ್ರೋಶಗೊಂಡ ಶಾಸಕ ಶರಣು ಸಲಗರ ಬೆಂಬಲಿಗರು ಖೂಬಾ ಅವರ ಕಾರಿನ ಹಿಂಬದಿಯ ನಂಬರ್ ಪ್ಲೇಟ್‌ಗೆ ಹೊಡೆದು ಹಾನಿಗೊಳಿಸಿದರು.

ಶಾಸಕ ಶರಣು ಸಲಗರ ಅವರ ಬೆಂಬಲಿಗ ಸಿದ್ದು ಬಿರಾದಾರ ಮೇಲೆ ಭಗವಂತ ಖೂಬಾ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆಯಿಂದಾಗಿ ನಗರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಎಸ್.ಪಿ. ಡೆಕ್ಕಾ ಕಿಶೋರ್ ಬಾಬು ನೇತೃತ್ವದಲ್ಲಿ ಶಾಂತಿ ಸಂಧಾನ ನಡೆಯಿತು. 

ವೈರಲ್ ಆಯ್ತು ವಿಡಿಯೊ: 

ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಶಾಸಕ ಶರಣು ಸಲಗರ ಅವರ ಬೆಂಬಲಿಗರ ನಡುವೆ ನಡೆದ ಜಟಾಪಟಿ,  ಕೇಂದ್ರ ಸಚಿವ ಕಾರಿಗೆ ಹಾನಿಗೊಳಿಸಿದ  ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಈ ಹಿಂದೆ ಶಾಸಕ ಬಿ.ನಾರಾಯಣರಾವ್ ಅವರು ಕೋವಿಡ್‌ನಿಂದ ಮರಣ ಹೊಂದಿದ ಕಾರಣ ತೆರವಾದ ಬಸವಕಲ್ಯಾಣ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಹರಸಾಹಸ ಪಟ್ಟವರ ದೊಡ್ಡ ದಂಡೇ ಕಲ್ಯಾಣದಲ್ಲಿ ಇತ್ತು. 10ಕ್ಕಿಂತ ಹೆಚ್ಚಿನ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೊನೆಗೆ ಜಿಲ್ಲೆಯ ಶರಣು ಸಲಗರ ಅವರಿಗೆ ಗೆಲುವು ಒಲಿದಿತ್ತು. 

ರಾಜ್ಯದ ಘಟಾನುಘಟಿ ನಾಯಕರು ಕಲ್ಯಾಣದಲ್ಲಿ ನೆಲೆಯೂರಿ ಶಾಸಕ ಶರಣು ಸಲಗರ ಅವರನ್ನು ಗೆಲ್ಲಿಸಿದ್ದಾರೆ. ಅಂದು ಶರಣು ಸಲಗರ ಅವರಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಲು ಬೆನ್ನೆಲುಬಾಗಿ ನಿಂತವರು ಕೇಂದ್ರ ಸಚಿವ ಭಗವಂತ ಖೂಬಾ, ಆದರೀಗ ರಾಜಕೀಯ ಗುರುವಿನೊಂದಿಗೆ ಶಿಷ್ಯ ಶಾಸಕ ಶರಣು ಸಲಗರ ಹಾಗೂ ಬೆಂಬಲಿಗರು ಕೇಂದ್ರ ಸಚಿವರ ಕಾರಿಗೆ ಮುತ್ತಿಗೆ ಹಾಕಿ ಬೀದಿ ರಂಪಾಟ ಮಾಡಿದ್ದು ಕಲ್ಯಾಣ ಜನರಿಗೆ ಹಾಸ್ಯಾಸ್ಪದ ಎನಿಸುತ್ತಿದೆ.

ಸ್ವಪಕ್ಷದ ಕೇಂದ್ರ ಸಚಿವ ಹಾಗೂ ಶಾಸಕರ ಮಧ್ಯೆ ಇರುವ ವೈಮನಸ್ಸು ಈಗ ಬೀದಿಗೆ ಬಂದು ಜಗಜ್ಜಾಹೀರಾಗಿದೆ ಎಂದು ಸ್ಥಳೀಯರ ಚರ್ಚೆಗೆ ವಸ್ತುವಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್