ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ

  • ಬೀದರ್‌ನಲ್ಲಿ ಜನತಾ ಜಲಧಾರೆ ರಥಯಾತ್ರೆಗೆ ಹೆಚ್‌ಡಿಕೆ ಚಾಲನೆ
  • 40 ಪರ್ಸೆಂಟ್‌ ಕಮಿಷನ್, ಗಲಭೆ ಹಾಗೂ ಬೆಲೆ ಏರಿಕೆ ವಿರುದ್ಧ ಗರಂ

ರಾಜ್ಯದ ಜನರ ಬೆವರಿನ ಫಲವನ್ನು ಲೂಟಿ ಮಾಡಿರುವ ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ಕಿತ್ತೊಗೆಯುವಂತೆ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಜನತೆಗೆ ಕರೆ ಕೊಟ್ಟಿದ್ದಾರೆ.

ಬೀದರ್‌ ಜಿಲ್ಲೆಯ ಕಮಠಾಣದಲ್ಲಿ ಶುಕ್ರವಾರ ನಡೆದ ಜನತಾ ಜಲಧಾರೆ ರಥಯಾತ್ರೆಗೆ ಚಾಲನೆ ನೀಡಿದ ಮಾತನಾಡಿದ ಅವರು, "ಸರ್ಕಾರ 40% ಕಮಿಷನ್ ದಂಧೆ, ಧರ್ಮ ರಾಜಕಾರಣ, ಹಿಂದೂ- ಮುಸ್ಲಿಮರ ನಡುವೆ ಶಾಂತಿ ಕದಡುತ್ತಿದೆ. ಪೆಟ್ರೋಲ್‌, ಡೀಸೆಲ್, ಅಡುಗೆ ಎಣ್ಣೆ, ಎಲ್‌ಪಿಜಿ ಗ್ಯಾಸ್‌ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಿದೆ. ಜನಪರ ಯೋಜನೆಗಳ ಮಾತೇ ಇಲ್ಲದ ಭ್ರಷ್ಟ, ದರೋಡೆಕೋರ ಸರ್ಕಾರವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಿ" ಎಂದು ಹೇಳಿದರು.

 

"ಜಾತ್ಯಾತೀತ ಜನತಾದಳ ಪಕ್ಷ ಅಧಿಕಾರದಲ್ಲಿದ್ದಾಗ ರೈತರ 25 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಆದರೆ ಯಾವುದೇ ಕಮಿಷನ್ ತೆಗೆದುಕೊಂಡಿಲ್ಲ. ದೇಶದ ಯುವಜನತೆಗೆ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು, ಅಧಿಕಾರಾವಧಿಯ 10 ವರ್ಷದಲ್ಲಿ ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ. ಮಾತಿಗೆ ತಪ್ಪುವ ರಾಜಕಾರಣಿಗಳಿಗೆ ಮತ ನೀಡಿ ಅಧಿಕಾರಕ್ಕೆ ತರುತ್ತೀರಿ. ನಮ್ಮನ್ನು ತಿರಸ್ಕರಿಸುತ್ತೀರಿ. ನಾವು ಏನು ತಪ್ಪು ಮಾಡಿದ್ದೇವೆ ಹೇಳಿ" ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದನ್ನು ಓದಿದ್ದೀರಾ? 'ಸಪ್ತಪದಿ ಯೋಜನೆ'ಗೆ ಮರು ಚಾಲನೆ: ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ

"ನಿಮಗೆಲ್ಲ ಜೀವನ ಬೇಕೋ ಅಥವಾ ಧರ್ಮರಾಜಕಾರಣ ಬೇಕೋ ನಿರ್ಧರಿಸಿ. ರಾಜ್ಯದ ಹಿತ ಮುಖ್ಯವಾದಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಬಹುಮತ ನೀಡಿ. 5 ವರ್ಷದಲ್ಲಿ ನೀರಾವರಿ ಯೋಜನೆಗಳಲ್ಲಿ ಪರಿಹಾರ ತರುತ್ತೇವೆ. ಕೆರೆ, ನದಿ, ಕಾಲುವೆಗಳನ್ನು ಪುನಶ್ಚೇತನಗೊಳಿಸಿ ಹೊಲಗಳಿಗೆ ನೀರಾವರಿ ಹರಿಸುವುದೇ ನಮ್ಮ ಗುರಿ. ಈ ಉದ್ದೇಶದಿಂದಲೇ 'ಜನತಾ ಜಲಧಾರೆ ರಥಯಾತ್ರೆ' ಆರಂಭಿಸಲಾಗಿದೆ. ಮಾತು ತಪ್ಪಿದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ" ಎಂದು ಕುಮಾರಸ್ವಾಮಿ‌ ಹೇಳಿದರು. 

ಕಾರ್ಯಕ್ರಮದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪುರ್ ಸೇರಿದಂತೆ ಹಲವು ಮಂದಿ ಜೆಡಿಎಸ್ ಮುಖಂಡರಿದ್ದರು.

ಮಾಸ್‌ ಮೀಡಿಯಾ ಬೀದರ್‌ ವಲಯ ಸಂಯೋಜಕಬಾಲಾಝಿ ಕುಂಬಾರ ಅವರ ಮಾಹಿತಿ ಆಧರಿಸಿದ ವರದಿ.
ನಿಮಗೆ ಏನು ಅನ್ನಿಸ್ತು?
0 ವೋಟ್