ಬೀದರ್ | ಕೇಂದ್ರ ಸಚಿವ ಖೂಬಾ– ಶಾಸಕ ಸಲಗರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ; ಸಚಿವರ ಕಾರು ಜಖಂ

  • ಗುರು ಶಿಷ್ಯರಂತಿದ್ದ ಇಬ್ಬರ ನಡುವೆ, ಕಳೆದ 6 ತಿಂಗಳಿಂದ ವೈಮನಸ್ಸು
  • ಆಹ್ವಾನವಿಲ್ಲದಿದ್ದರೂ ಕಾರ್ಯಕ್ರಮಕ್ಕೆ ಬಂದ ಶಾಸಕರನ್ನು ತಳ್ಳಿದ ಖೂಬಾ

ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ, ಬೀದರ್ ಸಂಸದ ಭಗವಂತ ಖೂಬಾ ಮತ್ತು ಬಸವಕಲ್ಯಾಣ ಶಾಸಕ ಶರಣು ಸಲಗರ ನಡುವಿನ ವೈಮನಸ್ಸು ಸ್ಪೋಟಗೊಂಡಿದ್ದು, ಶನಿವಾರ ಸಂಜೆ ಉಭಯ ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ‘ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ’ ಯಾತ್ರೆಯ ನೇತೃತ್ವವನ್ನು ಕೇಂದ್ರ ಸಚಿವ ಭಗವಂತ ಖೂಬಾ ವಹಿಸಿಕೊಂಡು ಸಂಗಮ, ಬೀದರ್, ಹುಮನಾಬಾದ್ ಮಾರ್ಗವಾಗಿ ಬಸವಕಲ್ಯಾಣಕ್ಕೆ ತಲುಪಿ ಸಮಾರೋಪ ನಡೆಯಬೇಕಿತ್ತು.

ಸಮಾರೋಪ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಶರಣು ಸಲಗರ ಅವರಿಗೆ ಆಹ್ವಾನ ನೀಡಿರಲಿಲ್ಲ. ಆದರೂ, ಬಿಜೆಪಿ ಕಾರ್ಯಕ್ರಮ ಹಾಗೂ ಕೇಂದ್ರ ಸಚಿವರಿಂದ ಆಯೋಜಿಸಲಾಗಿದೆ ಎನ್ನುವ ಕಾರಣಕ್ಕೆ ಸಲಗರ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕೋಪಗೊಂಡ ಭಗವಂತ ಖೂಬಾ, ಶಾಸಕ ಶರಣು ಸಲಗರ ಅವರನ್ನು ವೇದಿಕೆ ಮೇಲೆಯೇ ತಳ್ಳಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಸಲಗರ ಬೆಂಬಲಿಗರು, ಭಗವಂತ ಖೂಬಾ ಅವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಖೂಬಾ ವಿರುದ್ಧ ಘೋಷಣೆ ಕೂಗಿದ್ದು, ಉಭಯ ನಾಯಕರ ಬೆಂಬಲಿಗರ ನಡುವೆ ನೂಕಾಟ ತಳ್ಳಾಟ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಶಾಸಕರ ಬೆಂಬಲಿಗರ ಗುಂಪೊಂದು ಸಚಿವರ ಕಾರಿನ ಹಿಂಬದಿಗೆ ಧ್ವಜದ ಕೋಲಿನಿಂದ ಹೊಡೆದು ಜಖಂ ಗೊಳಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? : ಸ್ವಾತಂತ್ರ್ಯ ನಡಿಗೆ| ಟಿಪ್ಪು ಫ್ಲೆಕ್ಸ್‌ ಕಿತ್ತು ಹಾಕಿದ ಘಟನೆ: ಕ್ರಮಕೈಗೊಳ್ಳಲು ಡಿ ಕೆ ಶಿವಕುಮಾರ್‌ ಆಗ್ರಹ

ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಪಕ್ಷದ ಹಲವು ಮುಖಂಡರಿಗೆ ಮುಜುಗರ ಉಂಟಾಗಿ, ಮೂಖಪ್ರೇಕ್ಷಕರಾಗಿ ಕುಳಿತಿದ್ದರು. ಇವರಿಬ್ಬರ ಹೊಡೆದಾಟದ ವಿಡಿಯೋ ಜಾಲತಾಣಗಳಲ್ಲಿ 'ವೈರಲ್' ಆಗಿದೆ.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು, ಕೇಂದ್ರ ಸಚಿವರು ಭಗವಂತ ಖೂಬಾ ಅವರ ವಾಹನವನ್ನು ಅಲ್ಲಿಂದ ಮುಂದಕ್ಕೆ ಕಳುಹಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಶಾಂತಿ ಸಂಧಾನ ಸಭೆ ನಡೆಸಿ, ಪರಿಸ್ಥಿತಿಯನ್ನು ಶಾಂತಗೊಳಿಸಲು ಯತ್ನಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್