ಬೀದರ್‌ | ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 'ಗ್ರಾಕೂಸ್‌'ನಿಂದ ಪ್ರತಿಭಟನೆ

  • ಗ್ರಾಮ ಪಂಚಾಯತಿಯಿಂದ ಕೆಲಸದ ಸಾಮಗ್ರಿಗಳನ್ನು ಪೂರೈಸಲು ಒತ್ತಾಯ
  • 5 ಕಿ.ಮಿ ಗಿಂತ ದೂರದಲ್ಲಿ ಕೆಲಸ ನೀಡಿದರೆ ಕೂಲಿ ಹಣವನ್ನು ಶೇ.20ಕ್ಕೆ ಹೆಚ್ಚಿಸಬೇಕು.

ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಕಾರ್ಮಿಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಕೂಸ್ ಸಂಘಟನೆ ಪ್ರತಿಭಟನೆ ನಡೆಸಿದೆ.

ಬೀದರ್ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ತೆರಳಿ ಪ್ರಧಾನಿ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

ಒಂದು ಕುಟುಂಬಕ್ಕೆ 200 ದಿನಗಳ ಕೆಲಸ ನೀಡಬೇಕು. ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾದ ಕಾರಣ ಕಾರ್ಮಿಕರು ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿಯಿದೆ. ಉದ್ಯೋಗ ಖಾತ್ರಿ ಕೆಲಸ ನೀಡುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಮಾಡದಂತೆ ಅರ್ಜಿ ಹಾಕಿದ ತಕ್ಷಣ ಕೆಲಸ ಒದಗಿಸಬೇಕು ಎಂದು ಒತ್ತಾಯಿಸಿದರು.

ಕೆಲಸ ನಿರ್ವಹಿಸಲು ಸಾಮಗ್ರಿಗಳ ಬಳಕೆ ಹಾಗೂ ರಿಪೇರಿಗಾಗಿ ಪ್ರತಿ ದಿನ 10 ರೂಪಾಯಿಗಳು ಕೂಲಿ ಹಣದ ಜೊತೆ ಸೇರಿಸಿ ನೀಡಲಾಗುತ್ತಿತ್ತು. ಈಗ ಅದನ್ನೂ ಕೇಂದ್ರ ಸರಕಾರ ನಿಲ್ಲಿಸಿದೆ. ನಮಗೆ ಗ್ರಾಮ ಪಂಚಾಯತಿಯಿಂದ ಸಾಮಗ್ರಿಗಳನ್ನು ಪೂರೈಸಿ, ಇಲ್ಲವಾದಲ್ಲಿ ಕೂಲಿ ಕಾರ್ಮಿಕರಿಗೆ 20 ರೂಪಾಯಿ ಹೆಚ್ಚಿಸಿ ಖಾತೆಗೆ ಜಮಾ ಮಾಡಬೇಕು. ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಲಭ್ಯವಿಲ್ಲ ಎಂದಾದಲ್ಲಿ 5 ಕಿ.ಮಿ. ಗಿಂತಲೂ ಹೆಚ್ಚಿನ ದೂರದಲ್ಲಿ ಕೆಲಸ ನೀಡಿದರೆ ಕೂಲಿ ಹಣದ ಶೇ. 10ರಷ್ಟು ಹಣ ನೀಡಲಾಗುತ್ತಿತ್ತು. ಅದನ್ನು ಶೇ.20ಕ್ಕೆ ಹೆಚ್ಚಿಸಬೇಕು ಎಂದು ಗ್ರಾಕೂಸ್ ಆಗ್ರಹಿಸಿದೆ.

ಕಾರ್ಮಿಕರಿಗೆ ಕಾನೂನಿನಂತೆ ಕೆಲಸ ಮಾಡಿದ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿಸಬೇಕು. ಹಲವು ಬಾರಿ 1-2 ತಿಂಗಳು ಕಳೆದರೂ ಕೂಲಿ ಪಾವತಿ ಆಗುತ್ತಿಲ್ಲ. ಅದಕ್ಕೆ ಕಾನೂನಿನಲ್ಲಿ ವಿಳಂಬ ಭತ್ಯೆ  (ಶೇ 0.5) ನೀಡುವ ಅವಕಾಶವಿದ್ದರೂ ಇಲ್ಲಿಯವರೆಗೆ ಯಾವುದೇ ಕಾರ್ಮಿಕರ ಖಾತೆಗೆ ಜಮಾ ಮಾಡಲಿಲ್ಲ. ಕಾರ್ಮಿಕರಿಗೆ ವಿಳಂಬ ಭತ್ಯೆ ಸಿಗುವಂತಾಗಬೇಕು. ಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸಲು ಮೇಸ್ತ್ರಿಗಳನ್ನು ನೇಮಿಸಲಾಗಿದೆ. ಅವರಿಂದ ಕೆಲಸ ಮಾಡಿಸಿಕೊಂಡು ಅವರಿಗೆ ನಿಗದಿ ಆಗಿರುವ ಹಣ ನೀಡುತ್ತಿಲ್ಲ. ಮಹಿಳೆಯರಿಗೆ ಪ್ರತಿ ಕಾರ್ಮಿಕರಂತೆ 5ರೂ. ಪುರುಷರಿಗೆ 4ರೂ. ನೀಡಬೇಕೆಂದು ಆದೇಶವಿದ್ದರೂ ನೀಡುತ್ತಿಲ್ಲ. ಆ ಮೊತ್ತ ನೀಡುವಂತಾಗಬೇಕು. ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಕೂಸ್ ಸಂಘಟಕರು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ಅಂಗನವಾಡಿಗೆ ಹೊಸ ಕಟ್ಟಡ ನಿರ್ಮಿಸುವಂತೆ ಆಗ್ರಹಿಸಿ ಗ್ರಾಮಸ್ಥರ ಆಗ್ರಹ

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆಯ ಸಪ್ನಾ ದೀಪ, ರೇಷ್ಮಾ, ರಾಜಕುಮಾರ್ ಡಿಗಾರೆ, ಸುರೇಖಾ, ಸುಶೀಲಾ, ಅನಿಲ್, ಸಂಗೀತಾ ಉಪಸ್ಥಿತರಿದ್ದರು.

ಮಾಸ್ ಮೀಡಿಯಾ ಬೀದರ್ ಜಿಲ್ಲಾ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್