ಬೀದರ್ | ಮಳೆಯಿಂದ ಕುಸಿದ ಮನೆ ಗೋಡೆ: ಪರಿಹಾರದ ನಿರೀಕ್ಷೆಯಲ್ಲಿ ಬಡ ಕುಟುಂಬ 

ಬೀದರ್‌ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಮಿಕ ಕುಟುಂಬದ ಮನೆ ಗೋಡೆ ಕುಸಿದ ಪರಿಣಾಮ ಕುಟುಂಬವು ಸಂಕಷ್ಟಕ್ಕೆ ಸಿಲುಕಿದೆ. ಪುನರ್ವಸತಿಗೆ ಸರ್ಕಾರದಿಂದ ಪರಿಹಾರ ದೊರೆಯುವುದೇ ಎಂದು ಕಾದುಕುಳಿತಿದೆ.

ಜಿಲ್ಲೆಯ ಔರಾದ ತಾಲೂಕಿನ ಬೋರಾಳ ಗ್ರಾಮದ ಕವಿತಾ ಮತ್ತು ಧನರಾಜ ಮೆತ್ರೆ ದಂಪತಿಗಳ ಮನೆಯ ಗೋಡೆ ಕುಸಿದಿದೆ. ಧನರಾಜ ಬುದ್ಧಿಮಾಂದ್ಯನಾಗಿದ್ದು ಕುಟುಂಬದ ನಿರ್ವಹಣೆ ಕವಿತಾ ಅವರ ಮೇಲಿದೆ. ಈ ಕುಟುಂಬ ಆರ್ಥಿಕ ಪರಿಹಾರದ ನಿರೀಕ್ಷೆಯಲ್ಲಿದೆ.

"ಮನೆ ಗೋಡೆ ಕುಸಿದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೆ ಯಾರೂ ಭೇಟಿ ನೀಡಲಿಲ್ಲ. ಕ್ಷೇತ್ರದ ಶಾಸಕ, ಪಶು ಸಂಗೋಪನಾ ಸಚಿವರೂ ಆದ ಪ್ರಭು ಚೌಹಾಣ್ ಅವರ ಜೊತೆ ತಿರುಗಾಡಲು ತಾಲೂಕಿನ ಅಧಿಕಾರಿಗಳಿಗೆ ಸಮಯವಿದೆ. ಆದರೆ, ತಾಲೂಕಿನ ಜನ ಸಂಕಷ್ಟದಲ್ಲಿದ್ದಾಗ ಬಡ ಕುಟುಂಬಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಧನ ಒದಗಿಸಲು ಅಧಿಕಾರಿಗಳು ಇಚ್ಚಾಶಕ್ತಿ ತೋರುತ್ತಿಲ್ಲ" ಎಂದು ತಾಲೂಕು ಕಾಂಗ್ರೆಸ್ ಮುಖಂಡ ಸುಧಾಕರ್ ಕೊಳ್ಳೂರ ಕಿಡಿಕಾರಿದ್ದಾರೆ. 

ಮಳೆಯಿಂದ ಮನೆ ಕಳೆದುಕೊಂಡ ಕವಿತಾ ಮೇತ್ರೆ ಕುಟುಂಬಕ್ಕೆ ಹೊಸ ಮನೆ ಮಂಜೂರು ಮಾಡಿಸುವುದಾಗಿ ಸುಧಾಕರ್ ಭರವಸೆ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಮಹಾದೇವ್, ರಮೇಶ್ ಮಚ್ಕೋರಿ, ಉಮಾಕಾಂತ ಸೋನೆ ಇದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್