ಬೀದರ್ | ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ; ಮಾದಿಗ ದಂಡೋರ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ

Bidar
  • ಎ.ಜೆ. ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಧರಣಿ
  • ಮಾದಿಗ ಸಮುದಾಯಕ್ಕೆ ಸ್ಮಶಾನ ಭೂಮಿ ನೀಡುವಂತೆ ಆಗ್ರಹ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಭಾನುವಾರ (ಆಗಸ್ಟ್‌ 14) ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.

ಬೀದರ್ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದ ಸಮಿತಿಯ ಸದಸ್ಯರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

ಸದಾಶಿವ ಆಯೋಗ ವರದಿಯನ್ನು 2012ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ವರದಿ ನೀಡಿ ಹತ್ತು ವರ್ಷಗಳು ಕಳೆದರೂ ಸರ್ಕಾರ ಮಾದಿಗ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿದೆ. ರಾಜ್ಯ ಸರ್ಕಾರ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಧರಣಿ ನಿರತರು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ತುಮಕೂರು | ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಗೆ ಚಾಲನೆ; ಎಸ್.ಟಿ ಸೋಮಶೇಕರ್

"ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಶಿರಾ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಗೆಲ್ಲಿಸಿದರೆ ಆಯೋಗ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆಶ್ವಾಸನೆ ನೀಡಿದರು. ಆದರೆ, ಪಕ್ಷದ ಅಭ್ಯರ್ಥಿ ಗೆದ್ದ ನಂತರ 
ಆಡಿದ ಮಾತನ್ನು ಮರೆತಿದ್ದಾರೆ. ಇಲ್ಲಿಯವರೆಗೆ ಯಾವುದೇ ಕ್ರಮಗೊಂಡಿಲ್ಲ. ಹೀಗೆ ವಿಳಂಬ ಧೋರಣೆ ಮಾಡಿದರೆ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿರುವ  ಬಾಬು ಜಗಜೀವನರಾಂ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಬೇಕು. ನಿರ್ಮಿತಿ ಕೇಂದ್ರಕ್ಕೆ ಈಗಾಗಲೇ ₹50 ಲಕ್ಷ ಬಿಡುಗಡೆಯಾಗಿದೆ. ಆದರೆ ಇಲ್ಲಿಯವರೆಗೆ ನಿರ್ಮಿತ ಕೇಂದ್ರ ಪ್ರಾರಂಭ ಮಾಡಿಲ್ಲ. ಕೂಡಲೇ  ಕೇಂದ್ರ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.

ಜಿಲ್ಲಾದ್ಯಂತ ಮಾದಿಗ ಸಮುದಾಯಕ್ಕೆ ಸ್ಮಶಾನ ಭೂಮಿ ಇಲ್ಲ. ಮಾದಿಗ ಸಮುದಾಯಕ್ಕೆ ಸ್ಮಶಾನ ಭೂಮಿ ನೀಡುವಂತೆ ಎಲ್ಲ ತಾಲೂಕು ತಹಶೀಲ್ದಾರ್ ಅವರಿಗೆ ಆದೇಶಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್,  ಜಿಲ್ಲಾಧ್ಯಕ್ಷ ಪ್ರದೀಪ್ ಹೇಗಡೆ, ಉಪಾಧ್ಯಕ್ಷ ರಾಜಕುಮಾರ್ ಹಳ್ಳಿಖೇಡ್ಕರ್, ಶಿವರಾಜ್ ದೊಡ್ಡಿ, ವಿಜಯಕುಮಾರ್ ಹಿಪ್ಪಳಗಾಂವ್, ಹರೀಶ್ ಗಾಯಕವಾಡ, ಅಭಿ ಕಾಳೆ, ಎಡಿಸನ್ ಜೋಜನಾಕರ್, ಜೈಶೀಲ್ ಮೇತ್ರೆ, ನೀಲಕಂಠ ಭಂಡೆ, ಸ್ವಾಮಿದಾಸ ಮೇಗಾ, ವೀರಶೆಟ್ಟಿ ಬಂಬುಳಗಿ, ಪುಟ್ಟರಾಜ ರೇಕುಳಗಿ, ವಿಜಯಕುಮಾರ್ ಸೂರ್ಯವಂಶಿ, ರಾಜಕುಮಾರ್ ಭಟಾರೆ ಉಪಸ್ಥಿತರಿದ್ದರು.

ಮಾಸ್‌ ಮೀಡಿಯಾ ಕಲ್ಬುರ್ಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್