ಬೀದರ್ | ದೇವನೂರರ 'ಆರ್‌ಎಸ್ಎಸ್ ಆಳ ಮತ್ತು ಅಗಲ' ಪುಸ್ತಕ ಬಿಡುಗಡೆ

bidar
  • "ಸಂಘಪರಿವಾರದ ನಿದ್ರೆಗೆಡಿಸಿದ 'ಆರ್‌ಎಸ್‌ಎಸ್‌ ಆಳ ಮತ್ತು ಅಗಲ' ಪುಸ್ತಕ"
  • "ಹಿಂದಿಗಿಂತಲೂ ಇಂದು ಭಾರತೀಯ ಜನರ ಬೌದ್ಧಿಕ ಮಟ್ಟ ತೀರಾ ಹಾಳಾಗಿದೆ"

ದೇವನೂರ ಮಹಾದೇವ ಅವರ 'ಆರ್.ಎಸ್.ಎಸ್. ಆಳ ಮತ್ತು ಅಗಲ' ಪುಸ್ತಕವನ್ನು ಬೀದರ ನಗರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸಮಾನ ಮನಸ್ಕರ ಗೆಳೆಯರ ಬಳಗವು ಮಂಗಳವಾರ (ಆಗಸ್ಟ್ 16) ಸಾಂಕೇತಿಕವಾಗಿ ಬಿಡುಗಡೆ ಮಾಡಿದೆ. 

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ದಸಂಸ) ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, "ಕನ್ನಡದ ಸಾಕ್ಷಿ ಪ್ರಜ್ಞೆ, ಖ್ಯಾತ ಸಾಹಿತಿ, ದೇವನೂರ ಮಹಾದೇವ ಅವರು ಬರೆದ 'ಆರ್‌ಎಸ್‌ಎಸ್‌ ಆಳ ಮತ್ತು ಅಗಲ' ಪುಸ್ತಕ ಭಾರತದ ನೈಜ ಇತಿಹಾಸ ಅರ್ಥೈಸಿಕೊಳ್ಳಲು ತುಂಬಾ ಸಹಕಾರಿಯಾಗಿದೆ. ಈ ಸಣ್ಣ ಕೈಪಿಡಿ ಪ್ರತಿ ಮನೆಮನೆಗೆ ತಲುಪಿಸುವುದು ಅನಿವಾರ್ಯ" ಎಂದು ಹೇಳಿದರು.

ಪ್ರಗತಿಪರ ಚಿಂತಕ ಜಗದೀಶ್ ಬಿರಾದರ್ ಮಾತನಾಡಿ, "ಹಿಂದಿಗಿಂತಲೂ ಇಂದು ಭಾರತೀಯ ಜನರ ಬೌದ್ಧಿಕ ಮಟ್ಟ ತೀರಾ ಹಾಳಾಗಿದೆ. ಬರೀ ಆಡಂಬರ, ಪ್ರಚಾರದ ಅಬ್ಬರಕ್ಕೆ ನೈಜ ಇತಿಹಾಸ ಮರೆತು ವೈಚಾರಿಕವಾಗಿ ಭ್ರಮಿತರಾಗಿದ್ದಾರೆ. ಇಂತಹ ಸಂದಿಗ್ದ ಕಾಲಘಟ್ಟದಲ್ಲಿ ಚಿಂತಕ ದೇವನೂರು ಮಹದೇವ ಅವರು ವೈಚಾರಿಕ ಪ್ರಜ್ಞಾ ಜಾಗೃತಿ ಮೂಡಿಸುವಂತಹ ಕೃತಿ ಹೊರ ತಂದಿದ್ದಾರೆ. ಇಂಥ ಮಹತ್ವದ ಕೃತಿ ಬಿಡುಗಡೆ ಪ್ರತಿಯೊಬ್ಬರೂ ಓದುವುದು ತುಂಬಾ ಅವಶ್ಯಕವಾಗಿದೆ" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?; ವಿಜಯನಗರ | ಕ್ಯಾಸನಕೆರೆಯಲ್ಲಿ ಹತ್ತು ಜನಕ್ಕೆ ವಾಂತಿ ಭೇದಿ, ಬಾಲಕಿ ಸಾವು; ಜಿಲ್ಲಾಧಿಕಾರಿ ಭೇಟಿ

"ಪ್ರಸ್ತುತ ಸಮಾಜಕ್ಕೆ ಇಂಥ ಅಪರೂಪದ ಕೃತಿಯ ಅನಿವಾರ್ಯತೆ ಇತ್ತು. ಅದನ್ನು ದೇವನೂರ ಮಹಾದೇವ ಅವರು ರಚಿಸಿದ್ದಾರೆ. ಯಾರೋ ಹೇಳಿದ್ದನ್ನು ಸತ್ಯವೆಂದು ನಂಬಿಕೊಂಡು ಅದನ್ನೇ ಇತಿಹಾಸವೆಂದು ತಿಳಿದವರು ಈ ಕೃತಿ ಓದಿದರೆ ಸಾಕು, ಪುಸ್ತಕ ಅನೇಕ ಬಚ್ಚಿಟ್ಟ ಸತ್ಯಗಳನ್ನು ತೆರೆದಿಡುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪುಸ್ತಕ ಖರೀದಿಸಿ ಉಚಿತವಾಗಿ ವಿತರಿಸಲಾಗುವುದು" ಎಂದು ಯುವ ಚಿಂತಕ ವಿನಯ ಮಾಳಗೆ ಹೇಳಿದರು.

ಈ ವೇಳೆ ಸಾಮಾಜಿಕ ಕಾರ್ಯಕರ್ತ ಫರ್ನಾಂಡೀಸ್ ಹಿಪ್ಪಳಗಾಂವ್, ಚಂದ್ರಕಾಂತ ನಿರಾಟೆ, ಮಹೇಶ್ ಗೊರನಾಳಕರ್, ರಾಜಕುಮಾರ ಬನ್ನೆರ್, ಮಲ್ಲಿಕಾರ್ಜುನ ಚಿಟ್ಟಾ, ಅಭಿ ಕಾಳೆ, ಪ್ರಮುಖರಾದ ಡಾ.ಕಾಶಿನಾಥ ಚೆಲ್ವಾ, ಮನ್ನಾನ ಸೇಠ್, ವಹೀದ್ ಲಖನ್  ಮುಬಾಶಿರ್ ಶಿಂದೆ, ಎಂ.ಪಿ.ಮುದಾಳೆ, ವಿನೋದ ರತ್ನಾಕರ್, ಮಹಾಲಿಂಗ ಬೆಲ್ದಾಳ, ರಾಹುಲ್ ಹಾಲೆಪೂರ್ಗಿಕರ್, ರವಿ ಭೂಸಂಡೆ, ಪವನ ಮಿಠಾರೆ, ಪ್ರಕಾಶ ರಾವಣ ಇದ್ದರು.

ಮಾಸ್ ಮೀಡಿಯಾ ಕಲಬುರಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್