ಬೀದರ್ | ಅತಿವೃಷ್ಟಿ - ಎಕರೆಗೆ 50 ಸಾವಿರ ಪರಿಹಾರ ಕೊಡುವಂತೆ ಆಗ್ರಹ

Bidar
  • ಅತಿವೃಷ್ಟಿಯಿಂದಾಗಿ ಕಂಗಾಲಾದ ರೈತರು
  • ಸಾವಿರಾರು ಹೆಕ್ಟೇರ್‍‌ ಬೆಳೆ ಹಾನಿ

ಬೀದರ್ ಜಿಲ್ಲಾದ್ಯಂತ ಅತಿವೃಷ್ಟಿಯಿಂದಾಗಿ ಸಂಪೂರ್ಣ ಬೆಳೆಗಳು ನಾಶವಾಗಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ತಕ್ಷಣ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ಪರಿಹಾರ ಧನ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿಯವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.

"ಹೆಸರು ಕಾಳು, ಉದ್ದು, ಸೋಯಾಬೀನ್, ತೊಗರಿ ಸೇರಿದಂತೆ ಇನ್ನಿತರ ಬೆಳೆಗಳ ಬಿತ್ತನೆ ಕಾರ್ಯ ಮಾಡಿದಾಗಿನಿಂದಲೂ ಸತತವಾಗಿ ಮಳೆ ಸುರಿಯುತ್ತಿದ್ದು, ಸಂಪೂರ್ಣ ಬೆಳೆಗಳು ನಾಶವಾಗಿವೆ. ಅತಿವೃಷ್ಟಿಯಿಂದಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಬಿತ್ತನೆ ಮಾಡಿದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ಧನ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.

“ಬೀದರ್ ಜಿಲ್ಲೆಯಲ್ಲಿ ಒಟ್ಟು 2,08,220 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಹಾಗೂ ತೊಗರಿ ಬಿತ್ತನೆಯಾಗಿದೆ. ಆದರೆ, ಜಿಲ್ಲಾಡಳಿತ ಕೇವಲ 33,650 ಹೆಕ್ಟೇರ್ ಸರ್ವೇ ನಡೆಸಿದೆ. ಉಳಿದ ರೈತರು ಏನು ಮಾಡಬೇಕು? ಅವರು ಬೆಳೆ ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ, ಎಲ್ಲ ರೈತರಿಗೂ ಬೆಳೆ ಹಾನಿ ಪರಿಹಾರ ಕೊಡುವ ವ್ಯವಸ್ಥೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ಸಾಕ್ಷರ ಸಮಾಜವನ್ನಾಗಿಸುವ ಸವಾಲು ಎಲ್ಲ ಸರ್ಕಾರಗಳ ಮುಂದಿದೆ: ಡಾ. ಶಿವಮೂರ್ತಿ ಮುರುಘಾ ಶರಣರು

"ಜಿಲ್ಲೆಯ ಬಿಎಸ್‌ಎಸ್‌ಕೆ ಆಡಳಿತ ಮಂಡಳಿ ಕಬ್ಬು ಪೂರೈಸಿದ ರೈತರಿಗೆ ಇನ್ನೂ ಹಣ ಸಂದಾಯ ಮಾಡಿಲ್ಲ. ಇಲ್ಲಿಯವರೆಗೆ 4 ಬಾರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ವಾರದೊಳಗೆ ಜಿಲ್ಲೆಯ ಎಲ್ಲ ರೈತರಿಗೆ ಅತಿವೃಷ್ಟಿಯಿಂದಾದ ಬೆಳೆ ಹಾನಿ ಪರಿಹಾರ ಧನ ಹಾಗೂ ಕಬ್ಬಿನ ಆದಾಯವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ರೈತರ ಸಾಲಮನ್ನಾ ಮಾಡಬೇಕು" ಎಂದು ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. 

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಪ್ರಮುಖರಾದ ಶಂಕ್ರಪ್ಪ ಪರಾ, ಪ್ರವೀಣ್ ಕುಲಕರ್ಣಿ, ಬಾಬುರಾವ್ ಜೋಳದಾಬಕೆ, ನಾಗಯ್ಯಾ ಸ್ವಾಮಿ, ಬಾಬುರಾವ್ ಬೆಟ್ಟದ ಮಲ್ಲಿಕಾರ್ಜುನ ಚಿಕ್ಕಿ ಉಪಸ್ಥಿತರಿದ್ದರು.

ಮಾಸ್‌ ಮೀಡಿಯಾ ಕಲ್ಬುರ್ಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್