ಬೀದರ್ | ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ಕುಸಿದ ಮನೆಗಳು

bidar
  • ಜಿಲ್ಲೆಯಾದ್ಯಂತ ಸತತ 15 ಗಂಟೆಗಳ ಕಾಲ ಸುರಿದ ಮಳೆ 
  • ಔರಾದ್ ತಾಲೂಕಿನಲ್ಲಿ ಅತಿ ಹೆಚ್ಚು 93.57 ಮಿಮೀ ಮಳೆ

ಬೀದರ್ ಜಿಲ್ಲೆಯಾದ್ಯಂತ ಕಳೆದ ವಾರ ಧಾರಾಕಾರ ಮಳೆಯಾಗಿದ್ದು, ನಾಲ್ಕು ದಿನದಿಂದ ಕಡಿಮೆಯಾಗಿತ್ತು. ಆದರೆ ಮತ್ತೆ ಶನಿವಾರ ಬೆಳಿಗ್ಗೆಯಿಂದ ಮತ್ತೆ ಬಿರು ಮಳೆಯಾಗಿದ್ದು, ಬಿಡುವ ಲಕ್ಷಣ ಕಾಣುತ್ತಿಲ್ಲ. ಸತತ 15 ಗಂಟೆಗಳ ಕಾಲ ಸುರಿದ ಮಳೆಯಿಂದ ಅಪಾರ ಹಾನಿಯಾಗಿ, ಜನಜೀವನ ಅಸ್ತವ್ಯಸ್ತವಾಗಿದೆ.

ಜಿಲ್ಲೆಯ ಔರಾದ್, ಹುಮನಾಬಾದ್ ಹಾಗೂ ಭಾಲ್ಕಿ ತಾಲೂಕುಗಳಾದ್ಯಂತ ಮಳೆಯಾಗಿದ್ದು, ಕೆಲವು ಕಡೆ ಮನೆಗಳು ಕುಸಿದಿವೆ, ಸೇತುವೆ ಒಡೆದು ರಸ್ತೆ ಸಂಪರ್ಕ ಬಂದ್ ಆಗಿ ಜನರಿಗೆ ತೊಂದರೆಯಾಗಿದೆ.

ಬೀದರ್ ನಗರದ ಸ್ವಾಮಿ ವಿವೇಕಾನಂದ ಬಡಾವಣೆಗೆ ಹೋಗುವ ರಸ್ತೆ ಮಳೆ ನೀರಿನಿಂದ ಜಲಾವೃತಗೊಂಡಿದೆ. ಬಡಾವಣೆಯಲ್ಲಿ ವಾಸಿಸುವ ಜನರು ಹೊರಬರಲು ಪರದಾಡುವಂತಾಗಿದೆ. ಈ ಸಂಬಂಧ ಹಲವು ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಈಗಲಾದರೂ ಎಚ್ಚೆತ್ತು ಸಮರ್ಪಕ ರಸ್ತೆ ವ್ಯವಸ್ಥೆ ಮಾಡಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಭಾಲ್ಕಿ ತಾಲೂಕಿನಲ್ಲಿ 68.50 ಮಿಮೀ ಮಳೆಯಾಗಿದ್ದು ಹಲಬರ್ಗಾ, ತೇಗಂಪುರ ಗ್ರಾಮಗಳಲ್ಲಿ ತಲಾ ಎರಡು, ತರನಳ್ಳಿಯಲ್ಲಿ ನಾಲ್ಕು, ಹಲಸಿ, ಅಟ್ಟರಗಾ ಗ್ರಾಮಗಳಲ್ಲಿ ತಲಾ ಒಂದು ಸೇರಿದಂತೆ ಒಟ್ಟು 10 ಮನೆಗಳು ಕುಸಿದಿವೆ.

AV Eye Hospital ad
Bidar

ಹುಮನಾಬಾದ್ ತಾಲೂಕಿನಲ್ಲಿ 74.10 ಮಿಮೀ ಸುರಿದ ಮಳೆಯಿಂದಾಗಿ ನಾನಾ ಕಡೆ ಐದು ಮನೆಗಳು ಕುಸಿದಿವೆ. ಮದರಗಾವ್ ಗ್ರಾಮದ ಬಸಯ್ಯಾ ಸ್ವಾಮಿ ಎಂಬುವವರ ಮನೆ ಮಹದ್ವಾರದ ಮೇಲ್ಚಾವಣಿ ಕುಸಿದು ಬಿದ್ದು, ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಜಖಂಗೊಂಡಿದೆ.

ಈ ಸುದ್ದಿ ಓದಿದ್ದೀರಾ?; ಅಗ್ನಿಪಥ ಯೋಜನೆ ಪ್ರಧಾನಿ ಪ್ರಯೋಗಲಯದ ಒಂದು ಪ್ರಯೋಗವಷ್ಟೆ; ರಾಹುಲ್ ಗಾಂಧಿ ಟ್ವೀಟ್

"ನಾವು ಬಡ ಕೃಷಿಕರು, ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದು ಬೈಕ್ ಸಂಪೂರ್ಣ ಜಖಂಗೊಂಡಿದೆ. ಬೀದರ್ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿ" ಎಂದು 'ಈ ದಿನ.ಕಾಮ್' ಜೊತೆಗೆ ಮಾತನಾಡಿ ಬಸಯ್ಯಾ ಸ್ವಾಮಿ ಮನವಿ ಮಾಡಿದ್ದಾರೆ.

ಔರಾದ್ ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು 93.57 ಮಿಮೀ ಮಳೆ ಸುರಿದಿದೆ. ಪಟ್ಟಣದ ಪ್ರಸಿದ್ಧ ಅಮರೇಶ್ವರ ದೇವಸ್ಥಾನದ ಗರ್ಭಗುಡಿಯ ಮಾಳಿಗೆ ಸೋರುತ್ತಿದ್ದು, ಮಹಾದ್ವಾರ ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಖಾಶೆಂಪುರ ಬಳಿ ಸೇತುವೆ ಮುಳುಗಿ ಕೆಲ ಗ್ರಾಮಗಳಿಗೆ ಸಂಪರ್ಕ ಕಡಿದು ಹೋಗಿದೆ. ಬೆಳಕುಣಿ ಬಳಿ ಸೇತುವೆ ಭಾಗಶಃ ಕುಸಿದು ಬಿದ್ದಿದೆ‌.

ಮಾಸ್ ಮೀಡಿಯಾ ಕಲಬುರಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app