ಬೀದರ್ | ಅಂಗನವಾಡಿಗೆ ಹೊಸ ಕಟ್ಟಡ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹ

  • ಸದ್ಯ ಇರುವ ಶಾಲಾ ಕಟ್ಟಡ ಕೂಡಾ ಶಿಥಿಲಾವಸ್ಥೆ ತಲುಪಿದೆ
  • ಅಂಗನವಾಡಿ ಕಟ್ಟಲು ಜಾಗ ಸಿಗುತ್ತಿಲ್ಲವೆಂದ ಅಧಿಕಾರಿಗಳು

ಬೀದರ್ ಜಿಲ್ಲೆಯ ಗ್ರಾಮವೊಂದರಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಸ್ವಂತ ಕಟ್ಟಡವಿಲ್ಲದೇ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆ ಕಟ್ಟಡಗಳು ಕೂಡ ಶಿಥಿಲಾವಸ್ಥೆಗೆ ತಲುಪಿವೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೊರಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾ. ಗೌಡಗಾಂವ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಸ್ವಂತ ಕಟ್ಟಡ ಮಂಜೂರು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಮಕ್ಕಳ ಪಾಲನೆ ಪೋಷಣೆ ಜೊತೆಗೆ ಪೌಷ್ಟಿಕ ಆಹಾರ, ಮೂಲಭೂತ ಸೌಕರ್ಯ ಒದಗಿಸಿ ಪಾಠ ಮಾಡಿಸಬೇಕಾದ ಸರ್ಕಾರ, ಕುಂಟು ನೆಪ ಹೇಳಿ, ಮಕ್ಕಳಿಗೆ ಸೌಲಭ್ಯದಿಂದ ವಂಚಿತರಾಗುವಂತೆ ಮಾಡುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಸಂಬಂಧವಾಗಿ ಈ ದಿನ.ಕಾಮ್ನೊಂದಿಗೆ ಗ್ರಾಮದ ಯುವಕ ಅಮರ್ ಕಾಂಬಳೆ ಮಾತನಾಡಿ, “ಸದ್ಯ ನಡೆಯುತ್ತಿರುವ ಎರಡು ಅಂಗನವಾಡಿ ಕೇಂದ್ರದ ಕೊಠಡಿಗಳು ಸುಸಜ್ಜಿತವಾಗಿಲ್ಲ., ಹೊಸ ಅಂಗನವಾಡಿ ಕೇಂದ್ರ ನಿರ್ಮಿಸುವ ಬಗ್ಗೆ ಇಲಾಖೆಯು ಇಚ್ಚಾಶಕ್ತಿ ತೋರುತ್ತಿಲ್ಲ” ಎಂದು ಕಿಡಿಕಾರಿದ್ದಾರೆ.

ಊರಿನ ಮತ್ತೊಬ್ಬ ಯುವಕರಾದ ಲೋಕೇಶ್ ಕಾಂಬಳೆ ಮಾತನಾಡಿ, “ನಮ್ಮೂರಿನ ಎರಡು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನೀಡುವಂತೆ ಗ್ರಾಮ ಪಂಚಾಯತ್, ಶಿಶು ಅಭಿವೃದ್ಧಿ ಇಲಾಖೆಗೆ ಸಾಕಷ್ಟು ಸಲ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆಯ ನೆಪ ಹೇಳಿ ಸರ್ಕಾರಿ ಶಾಲೆಯ ಕಟ್ಟಡದಲ್ಲಿಯೇ ಅಂಗನವಾಡಿ ನಡೆಸುವಂತೆ ಮಾಡಿದ್ದಾರೆ” ಎಂದು ದೂರಿದರು. 

ಈ ಸುದ್ದಿ ಓದಿದ್ದಿರಾ? : ಬೀದರ್ | ಅಂಗನವಾಡಿ ಕೇಂದ್ರಕ್ಕಿಲ್ಲ ಸ್ವಂತ ಕಟ್ಟಡ; ಸಮುದಾಯ ಭವನದಲ್ಲೇ ಪಾಠ

ಭಾಲ್ಕಿ ತಾಲೂಕು ಸಿಡಿಪಿಒ ಮಂಗಲಾ ಉಮ್ಮರ್ಗೆ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ರಾ. ಗೌಡಗಾಂವ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿವೆ, ಆದರೆ, ಜಾಗ ಸಿಗದ ಕಾರಣ ಸ್ವಂತ ಕಟ್ಟಡ ಕಟ್ಟಲಾಗಿಲ್ಲ. ಗ್ರಾಮ ಪಂಚಾಯತ್ ವತಿಯಿಂದ ಜಾಗ ಗುರುತಿಸಿದರೆ ಕಟ್ಟಡ ನಿರ್ಮಿಸಬಹುದು. ಸರ್ಕಾರಿ ಶಾಲೆಯ ಕಟ್ಟಡ ಸ್ಥಳದಲ್ಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಶಿಕ್ಷಣ ಇಲಾಖೆಗೆ ಪತ್ರ ಬರೆಯುವೆ, ಪಿಡಿಓ ಅವರೊಂದಿಗೆ ಚರ್ಚಿಸಿ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಲು ಪ್ರಯತ್ನಿಸುತ್ತೇನೆ” ಎಂದು ತಿಳಿಸಿದ್ದಾರೆ. 

ಮೊರಂಬಿ ಗ್ರಾಮ ಪಂಚಾಯತ್ ಪಿಡಿಓ ಚಂದ್ರಶೇಖರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹೊಸ ಅಂಗನವಾಡಿಗೆ ಖಾಸಗಿ ಹಾಗೂ ಸರ್ಕಾರಿ ಜಮೀನು ಸಿಗುತ್ತಿಲ್ಲ. ಗ್ರಾಮಸ್ಥರೊಂದಿಗೆ ಚರ್ಚಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಿಸಲು ಅನುಮೋದನೆ ಕೊಡಲಾಗುವುದು” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್