ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಬೈಕ್: ಸವಾರ ಸ್ಥಳದಲ್ಲೇ ಸಾವು 

  • ಮೃತ ವ್ಯಕ್ತಿ ನೆಲಮಂಗಲ ನಿವಾಸಿ ಮಂಜುನಾಥ
  • ಬಸ್ ಚಾಲಕನ ನಿರ್ಲಕ್ಷ್ಯದಿಂದ ಶಾಲಾ ಬಸ್ ಅಪಘಾತ 

ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿದ್ದು, ಬೈಕ್‌ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪ್ರದೇಶದಲ್ಲಿ ನಡೆದಿದೆ. 

ಮೃತರನ್ನು  ನೆಲಮಂಗಲ ನಿವಾಸಿ ಮಂಜುನಾಥ (39) ಎಂದು ಗುರುತಿಸಲಾಗಿದೆ. ಅವರು ಈ ಹಿಂದೆ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಮೆಟ್ರೋದಲ್ಲಿ ಹೋಂ ಗಾರ್ಡ್ಆಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. 

ಮಂಜುನಾಥ್‌ ಅವರು ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ನೆಲಮಂಗಲ ಕಡೆಗೆ ತುಮಕೂರು ಹೆದ್ದಾರಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ, ರಸ್ತೆ ಬದಿಯಲ್ಲಿ ನಿಂತಿದ್ದ ಕಂಟೇನರ್‌ವೊಂದಕ್ಕೆ ಡಿಕ್ಕಿಹೊಡೆದಿದ್ದಾರೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಗಡಿ ತಾಲೂಕಿನಲ್ಲಿ ಶಾಲಾ ವಾಹನ ಅಪಘಾತ  

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಬಳಿ ಶಾಲಾ ಬಸ್ ಕಂದಕಕ್ಕೆ ಉರುಳಿದ್ದು, ಬಸ್‌ನಲ್ಲಿದ್ದ 10 ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹುಲಿಕಲ್ ಗ್ರಾಮದ ಮಾನಸ ಗಂಗೋತ್ರಿ ವಿದ್ಯಾಲಯಕ್ಕೆ ಸೇರಿದ್ದ ಬಸ್‌ ಅಪಘಾತಕ್ಕೀಡಾಗಿದೆ. ಶುಕ್ರವಾರ ಬೆಳಿಗ್ಗೆ 9.30ರ ಸುಮಾರಿಗೆ ತುಮಕೂರು-ಕುದೂರು ರಸ್ತೆಯಲ್ಲಿ ತೆರಳುತ್ತಿದ್ದ ಬಸ್‌, ಹುಲಿಕಲ್ ಗ್ರಾಮದ ಬಳಿ ಕಂದಕಕ್ಕೆ ಉರುಳಿದೆ. ಈ ವೇಳೆ ಬಸ್ಸಿನಲ್ಲಿ 25 ವಿದ್ಯಾರ್ಥಿಗಳು, ಒಬ್ಬ ಶಿಕ್ಷಕ ಮತ್ತು ಒಬ್ಬ ಚಾಲಕ ಇದ್ದರು ಎಂದು ತಿಳಿದು ಬಂದಿದೆ.

"ಬಸ್‌ನಲ್ಲಿದ್ದವರಲ್ಲಿ 10 ವಿದ್ಯಾರ್ಥಿಗಳು, ಶಿಕ್ಷಕಿ ಮಮತಾ ಮತ್ತು ರಂಗನಾಥ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕುದೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

"ಚಾಲಕನ ಅವಸರ ಮತ್ತು ನಿರ್ಲಕ್ಷ್ಯದ ಕಾರಣದಿಂದ ಅಪಘಾತ ಸಂಭವಿಸಿದೆ" ಎಂದು ಶಾಲಾ ಪ್ರಾಂಶುಪಾಲ ಸಂತೋಷ್ ಎಚ್.ಎಂ ಆರೋಪಿಸಿದ್ದಾರೆ. ಬಸ್ ಚಾಲಕ ರಂಗನಾಥ್ ವಿರುದ್ಧ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವು; ಇಬ್ಬರಿಗೆ ಗಾಯ

“ಪ್ರಾಂಶುಪಾಲರು ನೀಡಿದ ದೂರಿನನ್ವಯ ಚಾಲಕನ ವಿರುದ್ದ ನಿರ್ಲಕ್ಷ್ಯದ ಚಾಲನೆಯ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ” ಕುದೂರು ಪೊಲೀಸರು ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180