ಮಳೆಗಾಲ ಅಧಿವೇಶನ | ಏಳು ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮಸೂದೆಗೆ ಅಂಗೀಕಾರ 

ashwath narayan
  • ಏಳನೇ ದಿನದ ಕಲಾಪದಲ್ಲಿ ಮಸೂದೆ ಮಂಡಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ
  • ಚಾಮರಾಜನಗರ, ಹಾಸನ, ಕೊಪ್ಪಳ, ಬೀದರ್‌, ಹಾವೇರಿ, ಕೊಡಗು, ಬಾಗಲಕೋಟೆಯಲ್ಲಿ ಹೊಸ ವಿವಿ

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ-2022ಕ್ಕೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ದೊರೆತಿದ್ದು, ಚಾಮರಾಜನಗರ, ಹಾಸನ, ಕೊಪ್ಪಳ, ಬೀದರ್‌, ಹಾವೇರಿ, ಕೊಡಗು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯಗಳ ತಲೆ ಎತ್ತಲಿವೆ.

ಮಳೆಗಾಲ ಅಧಿವೇಶನದ ಏಳನೇ ದಿನದ ಕಲಾಪದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಮಸೂದೆ ಮಂಡಿಸಿದರು. “ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ವಿವಿ ಸ್ಥಾಪನೆಯ ಬೇಡಿಕೆ ಇತ್ತು. ಸದ್ಯ ಏಳು ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಿದ್ದೇವೆ. ಮುಂಬರುವ ದಿನಗಳಲ್ಲಿ ಬೇರೆ ಜಿಲ್ಲೆಗಳಲ್ಲೂ ವಿಶ್ವವಿದ್ಯಾಲಯ ತೆರೆಯಲಾಗುವುದು” ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

“ಪ್ರತಿ ವಿಶ್ವವಿದ್ಯಾಲಯಕ್ಕೆ ತಲಾ ₹2 ಕೋಟಿಯಂತೆ ವಾರ್ಷಿಕ ಆವರ್ತಕ ವೆಚ್ಚ ವರ್ಷವೊಂದಕ್ಕೆ ₹14 ಕೋಟಿ ವೆಚ್ಚವಾಗುತ್ತದೆ. ಮಂಡ್ಯದ ಸರ್ಕಾರಿ ಮಹಾವಿದ್ಯಾಲಯವನ್ನು (ಸ್ವಾಯತ್ತ) ಏಕೀಕೃತ ವಿಶ್ವವಿದ್ಯಾಲಯವೆಂದು 2019 ರಲ್ಲಿ ಮಾಡಲಾಗಿತ್ತು. ಈಗ ಮಸೂದೆಯ ಮೂಲಕ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಮಾರ್ಪಾಡು ಮಾಡಲಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮಳೆಗಾಲ ಅಧಿವೇಶನ | ‘ಸಬ್ ಅರ್ಬನ್ ಯೋಜನೆʼಗೆ ಅನಂತ್ ಕುಮಾರ್ ಹೆಸರಿಡಲು ಬಿಜೆಪಿ ಸದಸ್ಯರ ಆಗ್ರಹ

ಮುಂದುವರಿದು, “ವಿಶ್ವವಿದ್ಯಾಲಯ ಕಾಯ್ದೆ ಮಾಡಿ 22 ವರ್ಷಗಳು ಕಳೆದಿವೆ. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕಾಯಕಲ್ಪ ನೀಡಲು ಹೊಸ ಕಾನೂನು ತರಲಾಗುವುದು. ಅದನ್ನು ಬದಲಿಸಲು ಮಸೂದೆ ಮಂಡಿಸಲಾಗುವುದು. ಇದು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತದೆ” ಎಂದು ವಿವರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180