
- ಬಿಜೆಪಿ ಸರ್ಕಾರದ ನೀತಿ ಮತ್ತು ನಿರ್ಲಕ್ಷ್ಯಗಳ ವಿರುದ್ಧ ಸ್ವಾತಂತ್ರ್ಯ ಉದ್ಯಾನನದಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆ
- ಬೆಂಗಳೂರು ಕೇವಲ ಮಳೆ ನೀರಿನಲ್ಲಿ ಮುಳುಗುತ್ತಿಲ್ಲ, ಅದರ ಖ್ಯಾತಿ, ಗೌರವ ಸಹ ಮುಳುಗುತ್ತಿದೆ: ಕೃಷ್ಣ ಭೈರೇಗೌಡ
ಬೆಂಗಳೂರಿನಲ್ಲಿ ಮಳೆಯಿಂದಾದ ಹಾನಿ ಗಮನಿಸಿದರೆ ಬಿಜೆಪಿ ಸರ್ಕಾರ ಈ ರಾಜ್ಯವನ್ನು ಮತ್ತು ಬೆಂಗಳೂರಿನ ಆಡಳಿತ ನಡೆಸಲು ಯೋಗ್ಯವಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಅವರು ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದ ನೀತಿ ಮತ್ತು ನಿರ್ಲಕ್ಷ್ಯಗಳ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, “ಬೆಂಗಳೂರು ನಗರ ಪ್ರವಾಹ ನಿಯಂತ್ರಣ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿರುವುದರಿಂದ ಐಟಿ ಮತ್ತು ಬಿಟಿ ಉದ್ಯಮಿಗಳು ಬೆಂಗಳೂರನ್ನು ಬಿಟ್ಟು ಹೊರಡಲು ಅಣಿಯಾಗುತ್ತಿರುವುದು ದುರದೃಷ್ಟಕರ” ಎಂದರು.
“ಅತೀ ಹೆಚ್ಚು ತೆರಿಗೆ ಪಾವತಿಸುವ ನಗರ ಬೆಂಗಳೂರಿಗರಿಗೆ ರಾಜ್ಯ ಸರ್ಕಾರವು ಮೂಲಭೂತ ಸೌಕರ್ಯ ಕಲ್ಪಿಸದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕುತ್ತಿದೆ. ಬಿಜೆಪಿ ಬಂದಮೇಲೆ ರಸ್ತೆಗಳ ಮೇಲೆ ಬಿಜೆಪಿಯವರು ಚರಂಡಿ ಮಾಡಿದ್ದಾರೆ. ಈ ಕಾರಣಕ್ಕಾಗಿ ಎಲ್ಲ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಇದು ಬೆಂಗಳೂರು ನಗರದ ಅವೈಜ್ಞಾನಿಕ ಆಡಳಿತಕ್ಕೆ ಸಾಕ್ಷಿ” ಎಂದು ಟೀಕಿಸಿದರು.
ಬೆಂಗಳೂರಿನ ಗೌರವ ಮುಳುಗುತ್ತಿದೆ
ಕಳೆದ ವರ್ಷವೂ ಭಾರಿ ಮಳೆಗೆ ಬೆಂಗಳೂರು ಮುಳುಗಿತ್ತು. ಆದರೂ ಬಿಜೆಪಿಯವರು ಎಚ್ಚೆತ್ತುಕೊಳ್ಳದೆ ರಾಜಧಾನಿ ಮುಳುಗಿಸುತ್ತಿದ್ದಾರೆ. ಬೆಂಗಳೂರು ಕೇವಲ ನೀರಿನಲ್ಲಿ ಮುಳುಗುತ್ತಿಲ್ಲ, ಬೆಂಗಳೂರಿನ ಘನತೆ, ಖ್ಯಾತಿ, ಗೌರವ ಎಲ್ಲವೂ ಮುಳುಗುತ್ತಿದೆ” ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.
“ಬಿಜೆಪಿಯ ದುರಾಡಳಿತ, 40% ಸರ್ಕಾರ ಬೆಂಗಳೂರನ್ನು, ಜನರ ಜೀವನ ಬಲಿ ಪಡೆಯುತ್ತಿದೆ. ಐಟಿ ಕ್ಯಾಪಿಟಲ್, ಸಿಲಿಕಾನ್ ಕ್ಯಾಪಿಟಲ್, ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಲ್ಲವೂ ಮುಳುಗುತ್ತಿದೆ. ಬೆಂಗಳೂರು ಉದ್ಯೋಗಗಳು, ಜನರ ಜೀವನ, ಬೆಂಗಳೂರಿನಲ್ಲಿ ಉತ್ಪಾದನೆ, ತೆರಿಗೆ ಆದಾಯ ಎಲ್ಲವೂ ಹಾಳಾಗುತ್ತಿವೆ” ಎಂದು ಕುಟುಕಿದರು.
“ಬೆಂಗಳೂರನ್ನು ಅಂತಾರಾಷ್ಟ್ರೀಯ ನಗರವನ್ನಾಗಿ ಮಾಡುವ ಭರವಸೆ ನೀಡಿದ್ದರು. ಮೂರು ವರ್ಷಗಳ ನಂತರ ಬೆಂಗಳೂರಿಗೆ ಅವರ ಕೊಡುಗೆ ದುರಾಡಳಿತ, 40% ಭ್ರಷ್ಟಾಚಾರ ಮಾತ್ರ. ಅವರು ಈ ಅವಧಿಯಲ್ಲಿ ಒಂದು ಫ್ಲೈಓವರ್, ಮೂಲಭೂತ ಸೌಕರ್ಯ, ನೀಡಿದ್ದಾರಾ? ಮುಖ್ಯಮಂತ್ರಿಗಳು ಬೆಂಗಳೂರಿಗೆ 8 ಸಾವಿರ ಕೋಟಿ ಅನುದಾನ ನೀಡಿರುವುದಾಗಿ ಹೇಳುತ್ತಾರೆ. ಆ ಅನುದಾನಗಳೆಲ್ಲವೂ ಎಲ್ಲಿ ಹೋಗಿದೆ? ಈ ಹಣ ಬಿಜೆಪಿ ಮಂತ್ರಿ, ಶಾಸಕರ ಜೇಬಿಗೆ ಹೋಗಿದೆ” ಎಂದು ಆರೋಪಿಸಿದರು.

ಬಿಜೆಪಿಯಿಂದ ಬೆಂಗಳೂರಿಗೆ ಗಂಡಾಂತರ
“ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಬೆಂಗಳೂರಿಗೆ ಗಂಡಾಂತರ ಕೆಟ್ಟ ಗಳಿಗೆ ಆರಂಭವಾಗುತ್ತದೆ. 2008-13ರವರೆಗೆ ಬೆಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಾಗಲೂ ಇದೇ ಅವ್ಯವಸ್ಥೆ ತಾಂಡವವಾಡಿತ್ತು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ
“ರಾಜ್ಯದಲ್ಲಿ 40% ಕಮಿಷನ್ ಆರಂಭವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಚಾಚಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ. ಆದರೆ ಇಂದು ದಿನಸಿ ಅಂಗಡಿಯಲ್ಲಿ ಬೆಲೆ ದರ ನಿಗದಿಯಂತೆ ಸರ್ಕಾರಿ ಕಚೇರಿ ಹುದ್ದೆಗಳಿಗೂ ದರ ನಿಗದಿಯಾಗಿದೆ. ಈ ಸರ್ಕಾರದಲ್ಲಿ ಲಂಗು ಲಗಾಮು ಇಲ್ಲದೆ ಭ್ರಷ್ಟಾಚಾರ ನಡೆಯುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವರುಣನ ಅಬ್ಬರಕ್ಕೆ ತತ್ತರಿಸಿದ ಬೆಂಗಳೂರು; ʻವೆರೀ ಸ್ಮಾರ್ಟ್ ಸಿಟಿʼ ಎಂದು ರಮ್ಯಾ ಲೇವಡಿ
ಬೆಂಗಳೂರಿನ ಜನರಿಗೆ ನರಕ ದರ್ಶನ
“ರಾಜ್ಯ ಸರ್ಕಾರವು ಬೆಂಗಳೂರಿನ ಜನರಿಗೆ ನರಕ ದರ್ಶನ ಮಾಡಿಸುತ್ತಿದೆ. ಈ ಸರ್ಕಾರಕ್ಕೆ ಬದ್ಧತೆ ಇಲ್ಲ. ಹಲವು ದಿನಗಳಿಂದ ಬೆಂಗಳೂರಿನ ಅನೇಕ ಭಾಗಗಳಲ್ಲಿ ಮಳೆಯಿಂದ ಬೋಟಿನಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ರಾಜ್ಯ ಸರ್ಕಾರ ವೈಫಲ್ಯ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
“ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯವಿಲ್ಲ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಸರ್ಕಾರ ಒಂದು ವರ್ಷದ ಸಾಧನೆಗಾಗಿ ʼಜನೋತ್ಸವʼ ಮಾಡುತ್ತಾರಂತೆ. ಇವರಿಗೆ ನಾಚಿಕೆ ಆಗಬೇಕು. ಜನೋತ್ಸವ ಬದಲು ಭ್ರಷ್ಟೋತ್ಸವ ಅಥವಾ ಜನರಿಂದ ಕ್ಷಮೋತ್ಸವ ಮಾಡಬೇಕು” ಎಂದು ಜರಿದರು.