
- ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರ ಅಸಮಾಧಾನ
- ಬಲಿಷ್ಠರಾದವರು ಹಿಂದುಳಿದವರು ಎನ್ನುವುದು ಅರ್ಥಹೀನ: ಉದಯ ಸಿಂಗ್ ಕಿಡಿ
ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಇದು ಅತಿಹಿಂದುಳಿದ ವರ್ಗಗಳಿಗೆ ಮಾಡುವ ಘೋರ ಅನ್ಯಾಯ ಎಂದು ರಾಜ್ಯ ಕ್ಷತ್ರಿಯ ಒಕ್ಕೂಟ ರಾಜ್ಯಾಧ್ಯಕ್ಷ ಉದಯ ಸಿಂಗ್ ಆರೋಪಿಸಿದರು.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಕೇವಲ ವೀರಶೈವ ಲಿಂಗಾಯತರ ಓಲೈಕೆಯಲ್ಲಿ ತೊಡಗಿದೆ. 2ಎ ಮೀಸಲಾತಿಯಲ್ಲಿ ಪ್ರಸ್ತುತವಾಗಿ 102 ಹಿಂದುಳಿದ ವರ್ಗಗಳಿವೆ. ಈಗ ಹೊಸದಾಗಿ ಪಂಚಮಸಾಲಿ ಸಮುದಾಯ ಸೇರಿಸುವುದರಿಂದ ಹಿಂದುಳಿದ ವರ್ಗಗಳು ಮತ್ತಷ್ಟು ಮೀಸಲಾತಿಯಿಂದ ವಂಚಿತವಾಗುತ್ತವೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯಕ್ಕೆ ಅನ್ಯಾಯ
"ರಾಜ್ಯದಲ್ಲಿ ವೀರಶೈವ-ಲಿಂಗಾಯತ-ಪಂಚಮಸಾಲಿ ಒಂದೇ ಸಮುದಾಯವಾಗಿದೆ. ರಾಜಕೀಯ, ಶಿಕ್ಷಣ, ಉದ್ಯಮ ಹೀಗೆ ಎಲ್ಲ ವಲಯಗಳಲ್ಲಿ ಪ್ರಬಲವಾಗಿ ಬೆಳೆದಿದೆ. ಸ್ವಾತಂತ್ರ್ಯ ನಂತರದಿಂದ ಇಲ್ಲಿವರೆಗೂ ಲಿಂಗಾಯತ ಸಮುದಾಯವೇ ರಾಜಕಾರಣ ನಿಯಂತ್ರಿಸುತ್ತಿದೆ. ಹೀಗಿರುವ 2ಎ ಮೀಸಲಾತಿ ಕಲ್ಪಿಸಿದರೆ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕೆಂಬ ಆಶಯವೇ ಮಣ್ಣು ಪಾಲಾಗಲಿದೆ. ಇದು ಸಾಮಾಜಿಕ ನ್ಯಾಯಕ್ಕೆ ಅನ್ಯಾಯವಾದಂತೆ" ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?; ಸಂತೋಷ್ ಪಾಟೀಲ್ನನ್ನು ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ : ಕಾಂಗ್ರೆಸ್ ಪ್ರಶ್ನೆ
ಹಿಂದುಳಿದವರೆಂದು ಹೇಳುವುದು ಅರ್ಥಹೀನ
"ಲಿಂಗಾಯತ ಮಠಗಳು ಸರ್ಕಾರದಿಂದ ನೂರಾರು ಕೋಟಿ ರೂ. ಅನುದಾನ ಪಡೆದಿವೆ. ಶೇ. 25ರಷ್ಟು ವಿಧಾನಸಭಾ ಸದಸ್ಯರಿರುವ ಸಮಾಜವಾಗಿದೆ. 2018ರಲ್ಲಿ ಚುನಾವಣೆಯಲ್ಲಿ 58 ಶಾಸಕರು ಆಯ್ಕೆಯಾಗಿದ್ದಾರೆ. ರಾಜಕಾರಣದಲ್ಲಿ ಲಿಂಗಾಯತರು ಹಿಡಿತ ಸಾಧಿಸಿದ್ದಾರೆ. ಆದರೂ ಅವರು ಹಿಂದುಳಿದವರು ಎಂದು ಹೇಳಿಕೊಳ್ಳುವುದು ಅರ್ಥ ಹೀನ" ಎಂದರು.
ಲಿಂಗಾಯತರ ಪಕ್ಷವೆಂದು ಬಿಜೆಪಿ ಘೋಷಿಸಲಿ
"ಬಿಜೆಪಿ ಸರ್ಕಾರ ತಮ್ಮ ಮತ ಬ್ಯಾಂಕ್ಗಾಗಿ ಸದನದಲ್ಲಿ ಮೀಸಲಾತಿ ಬಗ್ಗೆ ಚರ್ಚಿಸಿದೆ. ಬಿಜೆಪಿ ಸಮಸ್ತ ಹಿಂದೂಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಲಿಂಗಾಯತರಿಂದಲ್ಲ. ಲಿಂಗಾಯತರ ಮೇಲೆ ಆ ಪಕ್ಷಕ್ಕೆ ಪ್ರೀತಿಯಿದ್ದರೆ ಲಿಂಗಾಯತರ ಪಕ್ಷ ಎಂದು ಬಹಿರಂಗವಾಗಿ ಘೋಷಿಸಲಿ" ಎಂದು ಸವಾಲು ಹಾಕಿದರು.
ಪಂಚಮಸಾಲಿಗೆ 2ಎ ಮೀಸಲಾತಿ ನೀಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಈ ಕುರಿತು ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಕ್ಕೆ ದೂರು ನೀಡಲಾಗುವುದು. ಒಂದು ವೇಳೆ ಮೀಸಲಾತಿ ನೀಡಲು ಮುಂದಾದರೇ 2ಎ ಪಟ್ಟಿಯಲ್ಲಿರುವ ಎಲ್ಲ ವರ್ಗಗಳನ್ನು ಕೂಡಿಸಿಕೊಂಡು ರಾಜ್ಯ ಕ್ಷತ್ರಿಯ ಒಕ್ಕೂಟ ರಾಜ್ಯಾದ್ಯಂತ ಹೋರಾಟ ಮಾಡಲಿದೆ" ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಮಾಮೂರ್ತಿರಾವ್, ರಾಮಚಂದ್ರಪ್ಪ, ಹರಿಶಂಕರ್ ಹಾಗೂ ಜಗದೀಶ್ ಎಂ ಸೇರಿದಂತೆ ಇತರರು ಇದ್ದರು.