
- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭೇಟಿಗೆ ದೆಹಲಿಗೆ ತೆರಳುವೆ: ಬೊಮ್ಮಾಯಿ
- ಹೈಕಮಾಂಡ್ ನಿರ್ಧಾರದತ್ತ ನೋಟ ನೆಟ್ಟ ಸಚಿವ ಸ್ಥಾನದ ಆಕಾಂಕ್ಷಿಗಳು
"ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿಯಾಗಲಿದ್ದೇನೆ. ಅವರು ಸಮಯ ಇನ್ನೂ ಕೊಟ್ಟಿಲ್ಲ. ಭೇಟಿಗೆ ಸಮಯ ನೀಡುತ್ತಾರೆ ಎಂಬ ವಿಶ್ವಾಸ ಇದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, “ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಸಹ ಭೇಟಿ ಆಗಲಿದ್ದೇನೆ. ಹಾಗೆಯೇ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರ ಸಭೆ ನಡೆಸಲಿದ್ದೇನೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಸಂವಿಧಾನ ವಿರೋಧಿ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿ, “ಸಂವಿಧಾನವನ್ನು ತಿರುಚಿದ್ದು ಕಾಂಗ್ರೆಸ್, ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನವನ್ನು ಗಾಳಿಗೆ ತೂರಿ, ವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸಿ ಎಲ್ಲರನ್ನೂ ಜೈಲಿಗೆ ಹಾಕಿದ ಕಾಂಗ್ರೆಸ್ನಿಂದ ಪಾಠ ಕಲಿಯುವ ಅಗತ್ಯ ಇಲ್ಲ” ಎಂದರು.
ಸಿಎಂ ದೆಹಲಿ ಭೇಟಿ ಕುತೂಹಲ ಕೆರಳಿಸಿದ್ದು, ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ? ಮನೆ ಬಾಗಿಲಿಗೆ ಬಂದ ಅವಕಾಶ ಕಳೆದುಕೊಳ್ಳಬೇಡಿ: ಕುಲಬಾಂಧವರಿಗೆ ಡಿ ಕೆ ಶಿವಕುಮಾರ್ ಮೊರೆ
ವಿಧಾನಸಭಾ ಚುನಾವಣೆಗೆ ಆರು ತಿಂಗಳು ಬಾಕಿ ಇದೆ. ಈ ನಡುವೆ ಸಂಪುಟ ವಿಸ್ತರಣೆಯ ಬೇಡಿಕೆಯೂ ತೀವ್ರಗೊಳ್ಳುತ್ತಿದೆ. ಆದರೆ ಈ ಬಗ್ಗೆ ಹೈಕಮಾಂಡ್ ಯಾವುದೇ ನಿರ್ಧಾರವನ್ನು ಈವರೆಗೂ ಪ್ರಕಟಿಸಿಲ್ಲ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಅವರ ದೆಹಲಿ ಭೇಟಿ ಕುತೂಹಲ ಹೆಚ್ಚಿಸಿದೆ.
ಸಂಪುಟಕ್ಕೆ ಸೇರ್ಪಡೆಯಾಗಲು ಹಲವು ಆಕಾಂಕ್ಷಿಗಳು ಈಗಾಗಲೇ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ಕೆ ಎಸ್ ಈಶ್ವರಪ್ಪ, ಎಂ ಪಿ ರೇಣುಕಾಚಾರ್ಯ ಸೇರಿದಂತೆ ಹಲವು ಆಕಾಂಕ್ಷಿಗಳು ಸರದಿಯಲ್ಲಿದ್ದಾರೆ.