ಕಾಂಗ್ರೆಸ್ಸಿನ ʼಪೇ ಸಿಎಂʼ ಅಭಿಯಾನಕ್ಕೆ ಕೌಂಟರ್‌ ಕೊಟ್ಟ ಬಿಜೆಪಿ, ʼಸ್ಕ್ಯಾಮ್ ರಾಮಯ್ಯʼ ಪುಸ್ತಕ ಬಿಡುಗಡೆ

nalina kumar katil
  • ‘ಪೇ ಸಿಎಂ’ ಎಂದರೆ ‘ಪೇ ಕಾಂಗ್ರೆಸ್ ಮೇಡಂ’ ಎಂದರ್ಥ. ಈ ಅಭಿಯಾನ ಮೂಲಕ ಕರ್ನಾಟಕಕ್ಕೆ ಅವಮಾನʼ
  • ದೇಶದಲ್ಲಿ ಭಯೋತ್ಪಾದನೆಗೆ ಕಾಂಗ್ರೆಸ್ ಪಕ್ಷವೇ ಕಾರಣ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಕಿಡಿ

ಕಾಂಗ್ರೆಸ್ಸಿನ ʼಪೇ ಸಿಎಂʼ ಅಭಿಯಾನಕ್ಕೆ ಕೌಂಟರ್‌ಆಗಿ ಬಿಜೆಪಿ ಕೂಡ ʼಸ್ಕ್ಯಾಮ್ ರಾಮಯ್ಯʼ ಪುಸ್ತಕ ಬಿಡುಗಡೆ ಮಾಡಿದೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರು ʼಸ್ಕ್ಯಾಮ್ ರಾಮಯ್ಯʼ ಬಿಡುಗಡೆ ಮಾಡಿದ್ದಾರೆ.

ಬಳಿಕ ಮಾತನಾಡಿ ಕಟೀಲ್‌, “ಸಿದ್ದರಾಮಣ್ಣ ಅಧಿಕಾರಾವಧಿಯ ಶೇ.100 ಭ್ರಷ್ಟಾಚಾರ ಅನಾವರಣ ಈ ಪುಸ್ತಕದಲ್ಲಿದೆ. ಕಾಂಗ್ರೆಸ್ ಮೇಡಂಗೆ ಮಾಡುವ ಪೇಮೆಂಟ್ ಬಗ್ಗೆ ಉಲ್ಲೇಖ ಇದಾಗಿದೆ. ಶಿವಕುಮಾರ್ ಚೀಟಿ ನುಂಗಿದ್ದನ್ನು ನೋಡಿದ್ದೀರಿ. ಅವರು ಚೀಟಿ ಶಿವಕುಮಾರ್ ಆಗಿದ್ದಾರೆ” ಎಂದು ಟೀಕಿಸಿದರು.

“‘ಪೇ ಸಿಎಂ’ ಎಂದರೆ ‘ಪೇ ಕಾಂಗ್ರೆಸ್ ಮೇಡಂ’ ಎಂದರ್ಥ. ಈ ಅಭಿಯಾನದ ಮೂಲಕ ಕರ್ನಾಟಕಕ್ಕೆ ಕಾಂಗ್ರೆಸ್‌ ಅವಮಾನ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಕೋರ್ಟಿನ ಆದೇಶದನ್ವಯ ಬಂಧನಕ್ಕೆ ಒಳಗಾಗಲಿದ್ದಾರೆ” ಎಂದರು.

“ದೇಶದ ಹಳೆಯ ಕಾಂಗ್ರೆಸ್ ಪಕ್ಷವು ಸುದೀರ್ಘ ಅವಧಿಯ ರಾಜಕಾರಣದಲ್ಲಿ ಭ್ರಷ್ಟಾಚಾರಕ್ಕೆ ಅತಿ ದೊಡ್ಡ ಕೊಡುಗೆ ಕೊಟ್ಟಿದೆ. ದೇಶದಲ್ಲಿ ಉಗ್ರವಾದ ಭಯೋತ್ಪಾದನೆಗೂ ಕಾಂಗ್ರೆಸ್ ಪಕ್ಷವೇ ಕಾರಣ” ಎಂದು ಆರೋಪಿಸಿದರು.

ನೆಹರೂರಿಂದ ಆರಂಭಿಸಿ ಮನಮೋಹನ್ ಸಿಂಗ್ ಕಾಲಘಟ್ಟದವರೆಗೆ ಈ ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಇತರ ಎಲ್ಲ ಪ್ರಧಾನಮಂತ್ರಿಗಳು ಭ್ರಷ್ಟಾಚಾರ ಮತ್ತು ವಿವಿಧ ಹಗರಣಗಳಲ್ಲಿ ಸಿಲುಕಿದವರೇ ಆಗಿದ್ದಾರೆ. 1948ರ ಜೀಪ್ ಹಗರಣದಿಂದ ಬೊಫೋರ್ಸ್, ಸಿಮೆಂಟ್ ಹಗರಣ, ಕಾಮನ್‍ವೆಲ್ತ್ ಹಗರಣದಿಂದ 2ಜಿ ಹಗರಣದವರೆಗೆ ಆಕಾಶ, ನೀರು, ಮಣ್ಣು ಮತ್ತು ಗಾಳಿಯಲ್ಲಿ ಗರಿಷ್ಠ ಹಗರಣಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ” ಎಂದರು.

ಈ ಸುದ್ದಿ ಓದಿದ್ದೀರಾ? 'ಪೇ ಸಿಎಂ' ಅಭಿಯಾನ | ನಾಳೆ ಸರ್ಕಾರಿ ಕಚೇರಿಗಳ ಮೇಲೆ ಪೋಸ್ಟರ್ ಅಂಟಿಸುತ್ತೇವೆ: ಡಿ ಕೆ ಶಿವಕುಮಾರ್ ಘೋಷಣೆ

“ಭಾರತ್ ಜೋಡೋಗಿಂತ ಮೊದಲು ಕಾಂಗ್ರೆಸ್ ಜೋಡೋ ಮಾಡಬೇಕಿದೆ. ಜಾತಿ ಜಾತಿಗಳನ್ನು ಒಡೆದ, ರಾಜ್ಯಗಳನ್ನು ಮತ್ತು ದೇಶ ಒಡೆದ ಶಾಪ ಕಾಂಗ್ರೆಸ್‍ಗಿದೆ. ಅದೊಂದು ಶಾಸಗ್ರಸ್ಥ ಪಕ್ಷ. ಡಿಕೆಶಿ ಡೀಲ್ ಮಾಸ್ಟರ್ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ಭ್ರಷ್ಟಾಚಾರ ಕುರಿತು ಕೆಂಪಣ್ಣ ದಾಖಲೆ ಕೊಟ್ಟಿಲ್ಲ. ದಾಖಲೆ ನೀಡಲು ಕಾಲಾವಕಾಶ ಕೊಟ್ಟಿದ್ದೆವು. ಇಂದಿನ ವರೆಗೆ ಕಾಂಗ್ರೆಸ್ ಮತ್ತು ಅವರ ಏಜೆಂಟರು ದಾಖಲೆ ಕೊಟ್ಟಿಲ್ಲ” ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್ ಹಾಗೂ ಸಿದ್ದರಾಜು, ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಮತ್ತು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್