ಬಿಜೆಪಿ-ಆರ್‌ಎಸ್‌ಎಸ್ ಮುಖಂಡರು ದೇಶಕ್ಕಾಗಿ ಯಾವುದೇ ತ್ಯಾಗ ಮಾಡಿಲ್ಲ: ಮಾಜಿ ಸ್ಪೀಕರ್ ರಮೇಶ್ ಕುಮಾರ್

K. R. Ramesh Kumar
  • ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಶ್ರೀನಿವಾಸಪುರದಲ್ಲಿ ಸಾರ್ವಜನಿಕ ಸಭೆ
  • ಬ್ರಿಟೀಷರು ಅಂದು ಮಾಡಿದ್ದ ಕೆಲಸವನ್ನು ಇಂದು ಬಿಜೆಪಿ ಮಾಡುತ್ತಿದೆ

ಬಿಜೆಪಿ ಅಥವಾ ಆರ್‌ಎಸ್‌ಎಸ್ ಮುಖಂಡರು ದೇಶಕ್ಕಾಗಿ ಯಾವುದೇ ತ್ಯಾಗ ಮಾಡಿಲ್ಲ. ಬ್ರಿಟೀಷರೊಂದಿಗೆ ಹೊಂದಾಣಿಕೆ ರಾಜಕೀಯ ಮಾಡಿರುವುದು ಅವರ ಇತಿಹಾಸ ಎಂದು ಮಾಜಿ ಸ್ಪೀಕರ್, ಶ್ರೀನಿವಾಸಪುರ ಶಾಸಕ ಕೆ ಆರ್ ರಮೇಶ್ ಕುಮಾರ್ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶ್ರೀನಿವಾಸಪುರ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕೆ ಬಲಿದಾನ ಮಾಡಿದ ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸಬೇಕು. ಮಹಾತ್ಮಾ ಗಾಂಧೀಜಿ ಅವರ ಕಾಲಿಗೆ ನಮಸ್ಕರಿಸಿ, ಎದೆಗೆ ಗುಂಡು ಹೊಡೆದ ಹಂತಕ ನಾಥೂರಾಮ್ ಗೋಡ್ಸೆಯನ್ನು ಬೆಂಬಲಿಸುವವರಿಂದ ನಮಗೆ ಕಲಿಯಬೇಕಾದದು ಏನೂ ಇಲ್ಲ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಸಂಘಪರಿವಾರದವರು ಸಾಯಲಿಲ್ಲ. ಆ ದುರಂತ ನಡೆದ ಸಂದರ್ಭದಲ್ಲಿ ಅವರು ಬ್ರಿಟಿಷರ ಮನೆಗಳಲ್ಲಿ ಅಡುಗೆ ಮಾಡುತ್ತಿದ್ದರು ಎಂದು ಟೀಕಿಸಿದರು.

Image
K. R. Ramesh Kumar

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಕೊನೆಗೊಳಿಸಬೇಕು. ದೇಶದ ಸ್ವಾಸ್ಥ್ಯಕ್ಕಾಗಿ ತನು ಮನ ಧನ ತ್ಯಾಗ ಮಾಡಿದ ವ್ಯಕ್ತಿಗಳ ಚರಿತ್ರೆ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ರಮೇಶ್ ಕುಮಾರ್ ಕರೆ ನೀಡಿದರು.

ಅಂದು ದೇಶದಲ್ಲಿ ಬ್ರಿಟೀಷರು ಮಾಡಿದ ಕೆಲಸವನ್ನು ಇಂದು ಬಿಜೆಪಿ ಮಾಡುತ್ತಿದೆ. ಸಮಾಜದಲ್ಲಿ ಮತೀಯ ಭಾವನೆ ಬಿತ್ತುತ್ತಿದೆ. ಗೋಲ್ವಾಲ್ಕರ್ ಹಿಂದೂಗಳು ಹೇಳಿದಂತೆ ಮುಸ್ಲಿಮರು ಕೇಳಬೇಕು ಎಂದು ನಿರೀಕ್ಷಿಸುತ್ತಿದ್ದರು. ಗಾಂಧಿ ತತ್ವಕ್ಕೆ ಸಾವಿಲ್ಲ. ಸುಳ್ಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿದರು . 

ಕೋಲಾರ ಶಾಸಕ ಶ್ರೀನಿವಾಸಗೌಡ , ವಿಧಾನ ಪರಿಷತ್ ಸದಸ್ಯರಾದ ನಝೀರ್ ಅಹ್ಮದ್ , ಎಂ.ಎಲ್.ಅನಿಲ್‌ ಕುಮಾರ್‌ , ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಸುಧಾಕರ್‌ , ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಮಾತನಾಡಿದರು.

ಸಾಹಿತಿಗಳಾದ ಗೊಲ್ಲಹಳ್ಳಿ ಶಿವಪ್ರಕಾಶ್, ಎನ್.ಮುನಿಸ್ವಾಮಿ ಮತ್ತಿತರ ಕಲಾವಿದರಿಂದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮುಖಂಡರಾದ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ , ಸಂಜಯ್‌ರೆಡ್ಡಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಅಕ್ಬರ್ ಷರೀಫ್ , ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ಶ್ರೀನಿವಾಸನ್, ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ,ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ , ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಯ್ಯಪ್ಪ , ಮಾಜಿ ಪುರಸಭೆ ಸದಸ್ಯ ಶಂಕರ್, ಕೃಷ್ಣಮೂರ್ತಿ, ಗೋವಿಂದಸ್ವಾಮಿ , ಮ್ಯಾಕಲ ನಾರಾಯಣಸ್ವಾಮಿ, ಎನ್.ಜಿ.ಬ್ಯಾಟಪ್ಪ , ಸೈಯದ್ ಖಾದರ್, ಕೆ.ಕೆ.ಮಂಜು , ಹರೀಶ್ , ಹರ್ಷ, ಎನ್.ಹನುಮೇಶ್ ಮತ್ತಿತರರಿದ್ದರು . 

ಶ್ರೀನಿವಾಸಪುರ ತಾಲೂಕಿನ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕೆ.ಆರ್‌.ರಮೇಶ್ ಕುಮಾರ್ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್