
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎದುರು 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ. ಆ ಪ್ರತಿಮೆಗೆ 'ಪ್ರಗತಿಯ ಪ್ರತಿಮೆ' ಎಂದೂ ನಾಮಕರಣ ಮಾಡಲಾಗಿದೆ. ಬೆಂಗಳೂರು ನಗರ ನಿವಾಸಿಗಳಿಗೆ ಇದರಿಂದ ಆನಂದವಾಗುವುದು ಎಂದು ಪ್ರತಿಮೆ ಸ್ಥಾಪಿಸಿದವರೂ ನಂಬಿದಂತಿಲ್ಲ. ಪ್ರತಿಮೆಗಳು ನಿರ್ದಿಷ್ಟ ಜಾತಿಯ ಓಟು ತಂದುಕೊಡುವ ಸಾಧನ ಎಂದೇ (ಬಹುತೇಕ) ರಾಜಕೀಯ ಪಕ್ಷಗಳು ಭಾವಿಸಿರುವುದು ಸ್ಪಷ್ಟ. ಅದೇನೇ ಇದ್ದರೂ, ಈ ಪ್ರತಿಮೆಗೆ ʼಪ್ರಗತಿʼಯ ಪದವನ್ನೂ ಅಂಟಿಸಿರುವುದರ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಏಳುತ್ತವೆ. ಪ್ರತಿಮೆ ನಿಲ್ಲಿಸುವುದು ಮಾತ್ರವೇ ಕೆಂಪೇಗೌಡರಿಗೆ ಸಲ್ಲಿಸುವ ಗೌರವವೇ? ಅವರು ಕಟ್ಟಿದ ಬೆಂಗಳೂರನ್ನೂ, ಅಲ್ಲಿನ ಕೆರೆ-ನದಿಗಳನ್ನೂ, ಜಲಮೂಲಗಳನ್ನೂ ಉಳಿಸಬೇಕಲ್ಲವೇ? ಅದಲ್ಲವೇ ನಿಜವಾಗಿಯೂ ಕೆಂಪೇಗೌಡರಿಗೆ ಸಲ್ಲಿಸುವ ಗೌರವ! ಎಂಬ ಅಭಿಪ್ರಾಯಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಅಲ್ಲಲ್ಲಿ ಎದ್ದಿವೆ. ವಿರೋಧ ಪಕ್ಷಗಳು ಕೆಂಪೇಗೌಡರ ವಾರಸುದಾರಿಕೆ ತಮ್ಮದೂ ಹೌದು ಎಂದಷ್ಟೇ ಹೇಳುತ್ತಿದ್ದರಾದರೂ, ಅವರ ದೂರದೃಷ್ಟಿ ಏನಾಗಿತ್ತು ಎಂಬುದರ ಕುರಿತು ಮಾತನಾಡುವ ಗೋಜಿಗೆ ಹೋಗಿಲ್ಲ.
ಈ ಪ್ರತಿಮಾ ರಾಜಕಾರಣವೂ ಹೊಸದೇನಲ್ಲ. ಕೆಲವೊಮ್ಮೆ ಪ್ರತಿಮೆಗಳು ಧ್ವಂಸವೂ ಆಗುತ್ತವೆ. ತ್ರಿಪುರಾದಲ್ಲಿ ಕಳೆದ ಬಾರಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯು ಎಡಪಂಥೀಯ ಸರ್ಕಾರವು ಸ್ಥಾಪಿಸಿದ್ದ ಹಲವಾರು ಪ್ರತಿಮೆಗಳನ್ನು ನೆಲಸಮಗೊಳಿಸಿತ್ತು. ಅದಕ್ಕೂ ಮುನ್ನ, 2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಗುಜರಾತ್ನಲ್ಲಿ ಸರ್ದಾರ್ ವಲ್ಲಭಾಬಾಯಿ ಪಟೇಲ್ ಅವರ 'ಏಕತೆಯ ಪ್ರತಿಮೆ'ಯನ್ನು ಉದ್ಘಾಟಿಸಿದ್ದರು. ಆಂಧ್ರ ತಮಿಳುನಾಡುಗಳಲ್ಲೂ ಸಣ್ಣ ಪಟ್ಟಣಗಳ ಪ್ರಮುಖ ವೃತ್ತಗಳಲ್ಲೆಲ್ಲಾ ಮೃತ ನಾಯಕರುಗಳ ಪ್ರತಿಮೆಗಳು ರಾರಾಜಿಸುತ್ತಿರುತ್ತವೆ. ಪ್ರತಿಮೆ ರಾಜಕೀಯಕ್ಕೆ ಕೆಂಪೇಗೌಡರ ಪ್ರತಿಮೆ ಹೊಸದಾಗಿ ಸೇರ್ಪಡೆಯಾಗುತ್ತಿದೆ.
ಮಾತ್ರವಲ್ಲ, ಅದೇ ಮತಬ್ಯಾಂಕ್ ರಾಜಕಾರಣಕ್ಕಾಗಿ ಮಹಾಪುರುಷರು, ಸಾಧಕಿ ಮಹಿಳೆಯರನ್ನು ಜಾತಿಗೆ ಅಂಟಿಸುವ ಜಾಡ್ಯ ಮಿತಿಮೀರಿ ಹೋಗುತ್ತಿದೆ. ಇದಕ್ಕೆ ಯಾವ ಪಕ್ಷಗಳೂ ಹೊರತಲ್ಲ. ಬಿಜೆಪಿ ಅದರಲ್ಲಿ ಎಲ್ಲರಿಗಿಂತ ಮುಂದಿದ್ದಾರೆ, ಅಷ್ಟೇ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಜಾತಿ-ಧರ್ಮಗಳ ಕಾರಣಕ್ಕಾಗಿಯೇ ವಿವಿಧ ಜಯಂತಿಗಳನ್ನು ಘೋಷಿಸಿದ್ದರು. ಟಿಪ್ಪು ಜಯಂತಿ ಘೋಷಿಸಿದ್ದು ಅದೇ ಉದ್ದೇಶದಿಂದ. ಕರ್ನಾಟಕದ ಇತಿಹಾಸದ ಧೀಮಂತ ನಾಯಕ ಟಿಪ್ಪು ಕೊಡುಗೆಗಳನ್ನು ಸ್ಮರಿಸುವುದು, ಟಿಪ್ಪುಗೆ ನಮಿಸುವುದು ತಪ್ಪಲ್ಲ; ಆದರೆ, ಮೊದಲ ಜಯಂತಿಯು ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ ನಡೆದಿತ್ತು. ಟಿಪ್ಪುವನ್ನು ಅಲ್ಪಸಂಖ್ಯಾತರಿಗೆ ಸೀಮಿತಗೊಳಿಸಿದ್ದರು! ಇದೀಗ ಬಿಜೆಪಿ ಸರ್ಕಾರವು, ರೈಲಿಗಿರುವ ಟಿಪ್ಪು ಹೆಸರನ್ನು ಬದಲಿಸಿ, ಅದನ್ನೇ ತನ್ನ ಸಾಧನೆಯೆಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ.
ಅಂತೆಯೇ, ಪ್ರತಿಮೆ ನಿಲ್ಲಿಸಿ, ಕೆಂಪೇಗೌಡರನ್ನು ಒಕ್ಕಲಿಗ ಮತಗಳಿಗಾಗಿಯೇ ಬಳಸಿಕೊಳ್ಳಲಾಗುತ್ತಿದೆ. ಅದು ಕೆಂಪೇಗೌಡರಿಗೂ, ಒಕ್ಕಲಿಗರಿಗೂ ಮಾಡುವ ಅವಮಾನ. ಒಕ್ಕಲಿಗರ ಸ್ವಾಮೀಜಿಯನ್ನು ಮಾತ್ರ ಕರೆಯುವುದು, ವಿರೋಧ ಪಕ್ಷಗಳಲ್ಲಿರುವ ಒಕ್ಕಲಿಗ ನಾಯಕರನ್ನು ಕರೆಯದೇ ಇರುವುದು. ತಮ್ಮನ್ನು ಕರೆಯಲಿಲ್ಲವೆಂದು ಒಕ್ಕಲಿಗ ನಾಯಕರು ಗೋಳಾಡುವುದು ಎಲ್ಲವೂ ಜಾತಿಯ ಹಿನ್ನೆಲೆಯಲ್ಲೇ.. ಹಾಗಾದರೆ ಕೆಂಪೇಗೌಡರನ್ನು ಅರ್ಥಪೂರ್ಣವಾಗಿ ನೆನೆಸಿಕೊಳ್ಳುವ ಉದ್ದೇಶ ಎಲ್ಲಿತ್ತು ಮತ್ತು ಎಲ್ಲಿದೆ.

ಅಂದಹಾಗೆ, ಪ್ರತಿಮೆ ಮತ್ತು ಜಾತಿ ರಾಜಕಾರಣದಿಂದ ಹೊರನಿಂತು ನೋಡಿದರೂ, ಪ್ರಶ್ನೆಗಳ ಸರಮಾಲೆ ಮುಂದೆ ಬರುತ್ತದೆ. ಪ್ರತಿಮೆಗೆ ಪ್ರಗತಿಯ ಹೆಸರಿಟ್ಟರೇ ಸಾಕೇ? ಪ್ರಗತಿಗೆ ಆಗಬೇಕಿದ್ದೇನು? ಎಂಬುದು ಸಾಮಾನ್ಯ ಪ್ರಶ್ನೆಯಾಗಿ ಕಾಡುತ್ತವೆ. ಕಳೆದ ಐದಾರು ತಿಂಗಳಿನಿಂದ ರಾಜ್ಯದಲ್ಲಿ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪಾರ ಪ್ರಮಾಣದ ಮಳೆ ಸುರಿಯಿತು. ಹಲವಾರು ಬಡಾವಣೆಗಳು ಜಲಾವೃತಗೊಂಡವು. ನಗರ ನಿವಾಸಿಗಳು ತತ್ತರಿಸಿಹೋದರು. ಮನೆಯಿಂದ ಹೊರಬರಲಾದರೆ, ಆಹಾರಕ್ಕಾಗಿಯೂ ಹಾಹಾಕಾರಪಟ್ಟರು. ಆಸ್ತಿ-ಪಾಸ್ತಿ ಕಳೆದುಕೊಂಡು ನಷ್ಟ ಅನುಭವಿಸಿದರು. ಇನ್ನು, ತಲೆಮೇಲೆ ಸೂರೂ ಇಲ್ಲದ ನಿರ್ಗತಿಕರ ಪಾಡಂತೂ ಹೇಳತೀರದಂತಾಗಿತ್ತು. ನಿಲ್ಲಲು, ಕೂರಲು, ಮಲಗಲೂ ಜಾಗವಿಲ್ಲದೆ ಮಳೆ ನೀರು- ತಣ್ಣಗಿನ ಚಳಿಗಾಳಿಯಲ್ಲಿ ನಲುಗಿಹೋದರು.
ಇದೆಲ್ಲದಕ್ಕೂ ಕಾರಣ ಕಣ್ಣೆದುರೇ ಇದೆ. ಬೆಂಗಳೂರಿನ ಹಲವಾರು ಕೆರೆಗಳ ಸರ್ವನಾಶ, ಕೆರೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುತ್ತಿದ್ದ ರಾಜಕಾಲುವೆಗಳ ಒತ್ತುವರಿ, ನಗರದ ನದಿಗಳನ್ನು ಕೊಳಚೆ ಮೋರಿಗಳಾಗಿ ಹಾಳುಮಾಡಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಬೆಂಗಳೂರಿನ ಕೆರೆಗಳನ್ನು ಮುಚ್ಚಿ ಬಸ್ ನಿಲ್ದಾಣ, ಸ್ಟೇಡಿಯಂ, ಅಪಾರ್ಟ್ಮೆಂಟ್, ಶಾಪಿಂಗ್ ಮಾಲ್ಗಳನ್ನು ನಿರ್ಮಾಣ ಮಾಡಲಾಗಿದೆ. ಇದೆಲ್ಲದರ ಮೂಲಕ ಸುಸ್ಥಿರ ಪಟ್ಟಣ ನಿರ್ಮಾಣದ ಕುರಿತು ಕೆಂಪೇಗೌಡರು ಮುಂದಿಟ್ಟಿದ್ದ ಮಾದರಿಗೆ ಅವಮಾನ ಮಾಡಿದಂತಲ್ಲವೇ?
ಇದಕ್ಕೂ ಮಿಗಿಲಾಗಿ, ಬೆಂಗಳೂರಿನ ಮುಂದಿನ ಪ್ರಗತಿಯ ಕುರಿತು ಈ ಸರ್ಕಾರಗಳ ಆದ್ಯತೆ ಏನಾಗಿದೆ? 108 ಅಡಿಗಳ ಪ್ರತಿಮೆ ನಿಲ್ಲಿಸಿದವರಿಗೆ ನಗರದ ರಸ್ತೆಗುಂಡಿಗಳನ್ನು ಮುಚ್ಚಲಾಗದೇ ಇರುವುದು ವಿಪರ್ಯಾಸ. ಇಲ್ಲಿನ ರಸ್ತೆಗಳು, ಟ್ರಾಫಿಕ್, ತೆವಳುತ್ತಾ ಸಾಗಿರುವ ಮೆಟ್ರೋ ಕಾಮಗಾರಿ, ಇನ್ನಷ್ಟು ಜನರಿಗೆ ಸೂರು ಕಲ್ಪಿಸಿ ನೆಮ್ಮದಿಯ ಬದುಕು ಕಲ್ಪಿಸಲಾಗದ ಬೆಂಗಳೂರೆಂಬ ಮಾಯಾನಗರಿ - ಇವಕ್ಕೆಲ್ಲಾ ಸರ್ಕಾರದ ಯೋಜನೆಗಳೇನು? ಈ ಪ್ರಶ್ನೆಗಳನ್ನು ಆಳುವವರ ಮುಂದಿಟ್ಟರೆ, ಅವರ ಉತ್ತರವೇನು? ಪ್ರತಿಮೆಗಳು ಮತ್ತು ಪ್ರತಿಮೆಗಳಿಗೆ ಪ್ರಗತಿಯ ಹೆಸರು.

ಕೆಂಪೇಗೌಡರನ್ನು ನಗರ ನಿರ್ಮಾತೃ, ಕೆರೆಗಳನ್ನು ಕಟ್ಟಿಸಿದವರು, ಮುನ್ನೋಟವಿದ್ದ ವ್ಯಕ್ತಿ ಎಂಬ ಇತಿಹಾಸದ ಸಂಗತಿಗಳನ್ನು ಎಲ್ಲರೂ ಕೊಂಡಾಡುತ್ತಾರೆ. ಒಂದು ಎಲ್ಲೆಗಿಂತ ಹೆಚ್ಚು ನಗರ ಬೆಳೆಯಬಾರದು ಎಂದು ನಾಲ್ಕು ಕಡೆ ಗೋಪುರ ಕಟ್ಟಿಸಿದ್ದರೆಂಬ ಐತಿಹ್ಯವೂ ಇದೆ. ಅಂತಹ ಮುನ್ನೋಟವನ್ನು ಪಕ್ಕಕ್ಕೆ ಸರಿಸಿದ್ದರ ಪರಿಣಾಮ, ಬೆಂಗಳೂರು ಅಡ್ಡಾದಿಡ್ಡಿ ಬೆಳೆದು ನಿಂತಿದೆ. ನಗರವನ್ನು ಇಂತಹ ಅಧ್ವಾನಕ್ಕೆ ದೂಡಿದ್ದರಲ್ಲಿ ಆಯಾ ಸಂದರ್ಭದಲ್ಲಿ ಆಳ್ವಿಕೆ ನಡೆಸಿದ ಎಲ್ಲಾ ಪಕ್ಷಗಳ ಕೊಡುಗೆಯೂ ಇದ್ದು, ಬಿಜೆಪಿಯ ಪಾಲು ಇತರರಿಗಿಂತ ಕಡಿಮೆಯೇನಿಲ್ಲ. ಅಂತಹ ವಾರಸುದಾರಿಕೆ ಹೊಂದಿರುವವರು ಕೆಂಪೇಗೌಡರ ಪ್ರತಿಮೆಯನ್ನು ನಿಲ್ಲಿಸಿ ಯದ್ವಾತದ್ವಾ ಹೊಗಳುವುದು ವಿರೋಧಾಭಾಸವೇ ಸರಿ...
ಇದೆಲ್ಲದರ ನಡುವೆ ಗಮನಿಸಬೇಕಾದ ಇನ್ನೊಂದು ಮುಖ್ಯವಿಚಾರವೂ ಇದೆ. ಕೆಂಪೇಗೌಡರ ಪ್ರತಿಮೆ ಇರುವ ಕೆಲವೇ ಕಿ.ಮೀ,ಗಳ ದೂರದ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ನಾಡಕಚೇರಿ ಎದುರು 200ಕ್ಕೂ ಹೆಚ್ಚು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಭೂಮಿಯನ್ನು ಕೈಗಾರಿಕೆಗೆ ನೀಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಕೆಂಪೇಗೌಡರು ಕೃಷಿಗಾಗಿ ನಿರ್ಮಾಣ ಮಾಡಿದ್ದ ಕೆರೆಗಳನ್ನು ಮುಚ್ಚಿದವರೇ, ಈಗ ರೈತರ ಕೃಷಿ ಭೂಮಿಯನ್ನೂ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ನಿಜಕ್ಕೂ ಆಳುವವರಿಗೆ ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕೆಂಬ ಆಶಯವಿದ್ದರೆ, ರೈತರ ಭೂಮಿಯನ್ನು ರೈತರಿಗೆ ಬಿಟ್ಟುಬಿಡಲಿ ಎಂದು ರೈತ ಹೋರಾಟಗಾರರು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಸಮಗ್ರ ಪ್ರಗತಿಗೆ ಯೋಜನೆಯನ್ನೇ ಹೊಂದಿರದ ಸರ್ಕಾರವು ಜಾತಿ ರಾಜಕಾರಣಕ್ಕಾಗಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ, ಅದಕ್ಕೆ 'ಪ್ರಗತಿಯ ಪ್ರತಿಮೆ' ಎಂದು ಹೆಸರಿಟ್ಟರೆ ಪ್ರಗತಿಯಾದೀತೇ? ಕೆಂಪೇಗೌಡರಿಗೆ ಗೌರವ ಸಲ್ಲಿಸಿದಂತಾದೀತೇ ಎಂಬ ಪ್ರಶ್ನೆಗಳಿಗೆ ಅವರಿಂದಲೇ ಉತ್ತರ ನಿರೀಕ್ಷಿಸುವುದು ವ್ಯರ್ಥವೇ ಸರಿ.