ಜಿಎಸ್‌ಟಿ| ಬಡವರ ಜೇಬಿಗೆ ಕತ್ತರಿ ಹಾಕುವುದೇ ಬಿಜೆಪಿ ಸಾಧನೆ: ʼಆಪ್‌ʼ ಕಿಡಿ

aap protest
  • ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ʼಆಪ್‌ʼ ಕಾರ್ಯಕರ್ತರಿಂದ ಬೃಹತ್‌ ಪ್ರತಿಭಟನೆ
  • ಬಿಜೆಪಿ ನಾಯಕರು ಬೆಲೆ ಏರಿಕೆ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು: ಆಕ್ರೋಶ

ಬಿಜೆಪಿಯ ಡಬಲ್‌ ಎಂಜಿನ್‌ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಮತ್ತು ಭ್ರಷ್ಟಾಚಾರ ದ್ವಿಗುಣವಾಗುತ್ತಿದೆ. ಮೊಸರು, ಮಜ್ಜಿಗೆಯಂತಹ ಅತೀ ಅಗತ್ಯ ವಸ್ತುಗಳಿಗೂ ಜಿಎಸ್‌ಟಿ ವಿಧಿಸಿ, ಜನರ ಜೇಬಿಗೆ ಕತ್ತರಿ ಹಾಕುವುದೊಂದೇ ತಮ್ಮ ಸಾಧನೆ ಎಂಬುದನ್ನು ಬಿಜೆಪಿ ಸಾಬೀತು ಪಡಿಸಿದೆ ಎಂದು ಆಪ್‌ ಮುಖಂಡ ಚನ್ನಪ್ಪ ಗೌಡ ನಲ್ಲೂರು ಟೀಕಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ನಡೆಸಿದ ಬೃಹತ್‌ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

“2014ರ ತನಕ ಸಣ್ಣ ಪ್ರಮಾಣದ ಬೆಲೆ ಏರಿಕೆಗೂ ಬಂದ್‌ಗೆ ಕರೆ ನೀಡುತ್ತಿದ್ದ ಬಿಜೆಪಿ ನಾಯಕರು ಈಗ ಬೆಲೆ ಏರಿಕೆ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮೊಸರು, ಮಜ್ಜಿಗೆ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿ ತಪ್ಪು ಮಾಹಿತಿ ನೀಡಿ ಜನರನ್ನು ವಂಚಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಬೊಮ್ಮಾಯಿ ಹೇಳಿದಂತೆ, ಅವೆರಡರ ಮೇಲಿನ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ಕೆಎಂಎಫ್‌ಗೆ ವಾಪಸ್‌ ನೀಡುವುದೇ ನಿಜವಾಗಿದ್ದರೆ, ಮಾರುಕಟ್ಟೆಯಲ್ಲಿ ಮೊಸರು, ಮಜ್ಜಿಗೆ ಬೆಲೆ ಏರಿಕೆಯಾಗಿದ್ದೇಕೆ” ಎಂದು ಪ್ರಶ್ನಿಸಿದರು.

“ಹೆಚ್ಚು ತೆರಿಗೆ ಸಂಗ್ರಹಿಸುವುದನ್ನು ಮಹಾನ್‌ ಸಾಧನೆ ಎಂದು ಬಿಜೆಪಿ ಭಾವಿಸಿದೆ. ತೆರಿಗೆ ಏರಿಕೆಯಿಂದ ಸಂಗ್ರಹವಾದ ಹಣದಲ್ಲಿ ಲೂಟಿಗೆ ಅವಕಾಶವಿರುವ ಯೋಜನೆಯನ್ನು ಬಿಜೆಪಿ ಘೋಷಿಸುತ್ತದೆ. ಅದರಲ್ಲಿ 40% ಕಮಿಷನ್‌ ಪಡೆದು, ಕಾಮಗಾರಿಗಳನ್ನು ಕಳಪೆಯಾಗಿಸುತ್ತಿದೆ” ಎಂದು ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷ ಕುಶಲ ಸ್ವಾಮಿ ಆರೋಪಿಸಿದರು.

“ಹೆಚ್ಚುವರಿ ತೆರಿಗೆ ಅಂತಿಮವಾಗಿ ಬಿಜೆಪಿ ನಾಯಕರ ಜೇಬು ಸೇರುತ್ತಿದೆ. ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತರಿಯಲ್ಲಿರುವ ಬಿಜೆಪಿ, ಈಗ ಸಿಕ್ಕಿರುವ ಅವಕಾಶವನ್ನು ಕೊಳ್ಳೆ ಹೊಡೆಯುವುದಕ್ಕೆ ಬಳಸಿಕೊಳ್ಳುತ್ತಿದೆ” ಎಂದು ದೂರಿದರು.

ಈ ಸುದ್ದಿ ಓದಿದ್ದೀರಾ? ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜನಸಾಮಾನ್ಯರ ಆದಾಯ ಹೆಚ್ಚುತ್ತಿಲ್ಲ: ಡಿ ಕೆ ಶಿವಕುಮಾರ್

“ಮೋದಿ ಸರ್ಕಾರವು ಪೆಟ್ರೋಲ್‌, ಡಿಸೇಲ್‌ ಮೇಲಿನ ತೆರಿಗೆಯನ್ನು ವಿಪರೀತ ಹೆಚ್ಚಿಸಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಭಾರತೀಯರಿಗೆ ಅದರ ಲಾಭ ಸಿಗುತ್ತಿಲ್ಲ. ಅಡುಗೆ ಅನಿಲದ ಸಬ್ಸಿಡಿ ರದ್ದು ಪಡಿಸುವ ಮೂಲಕ ದೇಶದ ಬಡ ಹಾಗೂ ಮಧ್ಯಮ ವರ್ಗಕ್ಕೆ ಮೋದಿ ಸರ್ಕಾರ ಮಹಾದ್ರೋಹ ಮಾಡಿದೆ” ಎಂದು ಕುಟುಕಿದರು.

“ಕೇವಲ ಶ್ರೀಮಂತ ಉದ್ಯಮಿಗಳ ಹಿತ ಕಾಪಾಡಿ, ಅವರಿಂದ ಪಕ್ಷಕ್ಕೆ ಬೃಹತ್‌ ಮೊತ್ತದ ದೇಣಿಗೆ ಪಡೆಯುವುದರಲ್ಲಿ ನಿರತವಾಗಿರುವ ಬಿಜೆಪಿಗೆ ಜನಸಾಮಾನ್ಯರ ಕಷ್ಟಗಳು ಕಾಣಿಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್