
- ಶಾಲೆಯ ಅಭಿವೃದ್ಧಿಗೆ ಬೆನ್ನೆಲುವಾಗಿ ನಿಂತ ಹಳೇ ವಿದ್ಯಾರ್ಥಿಗಳ ಸಂಘ
- 1ರಿಂದ 7ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ಶಾಲೆಯಾಗಿ ಘೋಷಿಸಲು ಮನವಿ
ಸಿಬ್ಬಂದಿ, ಕೊಠಡಿಗಳು ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಬಹಳಷ್ಟು ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ. ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಗೊಂಡ ಉಡುಪಿ ಜಿಲ್ಲೆಯ ಬೊಕ್ಕಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಇದೀಗ 107ನೇ ವಸಂತಕ್ಕೆ ಕಾಲಿಟ್ಟಿದೆ. ಬೊಕ್ಕಪಟ್ಣದ ಉರ್ದು ಶಾಲೆಯನ್ನು ಸಂಪೂರ್ಣ ಆಂಗ್ಲ ಮಾಧ್ಯಮ ಶಾಲೆಯೆಂದು ಘೋಷಿಸುವಂತೆ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಮನವಿ ಮಾಡಿದೆ.
"ಈಗಾಗಲೇ 6 ಮತ್ತು 7ನೇ ತರಗತಿಗಳು ಇಂಗ್ಲಿಷ್ ಮಾಧ್ಯಮ ಎಂದು ಸರ್ಕಾರ ಆದೇಶ ಹೊರಡಿಸಿದೆ. ಅದೇ ರೀತಿ, 1ನೇ ತರಗತಿಯಿಂದ 5ನೇ ತರಗತಿಯವರೆಗೂ ಇಂಗ್ಲಿಷ್ ಮಾಧ್ಯಮವೆಂದು ಘೋಷಸಬೇಕು" ಎಂದು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಖಲೀಲ್ ಕೆರಾಡಿ ತಿಳಿಸಿದ್ದಾರೆ.
"ಶಾಲೆ ಹಲವಾರು ತಲೆಮಾರುಗಳಿಗೆ ವಿದ್ಯೆ ನೀಡಿದೆ. ಇಲ್ಲಿ ಕಲಿತ ಬಹುತೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 1ರಿಂದ 7ನೇ ತರಗತಿಗಳನ್ನು ಹೊಂದಿರುವ ಶಾಲೆ, ಸುಮಾರು 25 ವರ್ಷಗಳ ಹಿಂದೆ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಇಂದು ಗ್ರಾಮಕ್ಕೆ ಮಾತ್ರವಲ್ಲದೆ ಉಡುಪಿ ಜಿಲ್ಲೆಗೂ ಒಂದು ವಿಶೇಷ ಹಾಗೂ ಮಾದರಿ ಶಾಲೆಯಾಗಿ ರೂಪುಗೊಂಡಿದೆ" ಎಂದು ಅವರು ಹೇಳಿದ್ದಾರೆ.
"ನಮ್ಮ ಶಾಲೆಯ ಮಕ್ಕಳ ಸಂಖ್ಯೆ 50ರಿಂದ 150ಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೆ ಸುಮಾರು 15 ವಲಸೆ ಮಕ್ಕಳ ದಾಖಲಾತಿಯನ್ನು ಪಡೆಯಲಾಗಿದೆ. ಕೇವಲ ಮೂವರು ಖಾಯಂ ಸರ್ಕಾರಿ ಶಿಕ್ಷಕಿಯರು ಹಾಗೂ ಒಬ್ಬರು ಅತಿಥಿ ಶಿಕ್ಷಕಿಯನ್ನು ಹೊಂದಿರುವ ಶಾಲೆಗೆ ಶಾಲಾ ಹಳೆ ವಿದ್ಯಾರ್ಥಿ ಸಂಘ, ಹೆಚ್ಚುವರಿಯಾಗಿ 4 ಖಾಸಗಿ ಶಿಕ್ಷಕಿಯರನ್ನು, ಇಬ್ಬರು ಸಹಾಯಕಿಯರನ್ನು ನೇಮಕ ಮಾಡಿದೆ. ಶಾಲಾ ವಾಹನದ ಜೊತೆಗೆ ಚಾಲಕನ ಸಂಬಳ ಹಾಗೂ ವಾಹನದ ಇತರೆ ಖರ್ಚುವೆಚ್ಚವನ್ನು ನಿಭಾಯಿಸುತ್ತಿದೆ. ದಾನಿಗಳ ನೆರವಿನಿಂದ ಹಳೆ ವಿದ್ಯಾರ್ಥಿ ಸಂಘವು ಶಾಲೆಗೆ ಬೆನ್ನೆಲುಬಾಗಿ ನಿಂತಿದೆ" ಎಂದು ಖಲೀಲ್ ವಿವರಿಸಿದರು.