ಅಮೃತ ಮಹೋತ್ಸವ ಜಾಹೀರಾತು| ನೆಹರೂ ಭಾವಚಿತ್ರವನ್ನೇ ಕೈಬಿಟ್ಟ ಬೊಮ್ಮಾಯಿ ಸರ್ಕಾರ; ಸಾರ್ವಜನಿಕ ಆಕ್ರೋಶ

jawaharlal nehru
  • ರಾಜ್ಯ ಸರ್ಕಾರದಿಂದ ಮಾಧ್ಯಮ ಜಾಹೀರಾತು: ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಪ್ರಕಟ
  • ವಿ ಡಿ ಸಾವರ್ಕರ್‌ ಚಿತ್ರ ಬಳಸಿ, ʼಕ್ರಾಂತಿಕಾರಿ ಸಾವರ್ಕರ್‌ʼ ಎಂದು ವಿಶೇಷ ಉಲ್ಲೇಖ

ರಾಜ್ಯ ಸರ್ಕಾರದ ವತಿಯಿಂದ ಪ್ರಕಟಗೊಂಡಿರುವ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಕುರಿತ ಮಾಧ್ಯಮ ಜಾಹೀರಾತಿನಲ್ಲಿ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರೂ ಮತ್ತು ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಆದ ಪಂಡಿತ್ ಜವಾಹರಲಾಲ್ ನೆಹರೂ ಅವರ ಚಿತ್ರವನ್ನು ಕೈಬಿಡಲಾಗಿದೆ.

ಕನ್ನಡ ಮತ್ತು ಇಂಗ್ಲಿಷ್‌ ದೈನಿಕಗಳು ಸೇರಿದಂತೆ ವಿವಿಧ ಮಾಧ್ಯಮಗಳಿಗೆ ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆಯಡಿ ನೀಡಿರುವ ಕರ್ನಾಟಕ ವಾರ್ತೆ ಈ ಜಾಹೀರಾತು ಭಾನುವಾರ ಪ್ರಕಟವಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಹಾಗೆಯೇ ಈ ಜಾಹೀರಾತಿನಲ್ಲಿ ವಿ ಡಿ ಸಾವರ್ಕರ್‌ ಭಾವಚಿತ್ರವನ್ನು ಸಹ ಬಳಸಲಾಗಿದೆ. ಮಹಾತ್ಮ ಗಾಂಧಿ ಆದಿಯಾಗಿ ಯಾವುದೇ ಸ್ವಾತಂತ್ರ್ಯ ಹೋರಾಟಗಾರರಿಗೂ ಗೌರವ ಸೂಚಕ ಪದವನ್ನು ಬಳಸದೇ ಕೇವಲ ವಿ ಡಿ ಸಾವರ್ಕರ್‌ಗೆ ಮಾತ್ರ ʼಕ್ರಾಂತಿಕಾರಿ ಸಾವರ್ಕರ್‌ʼ ಎಂದು ಉಲ್ಲೇಖಿಸಿದ್ದು, ಈ ಅಂಶ ಕೂಡ ಸಾರ್ವಜನಿಕರ ವ್ಯಂಗ್ಯ, ವಿಡಂಬನೆಗೆ ಕಾರಣವಾಗಿದೆ.

ಈ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಮ್‌ ತಲ್ಲೂರು ಅವರು ತಮ್ಮ ಪೇಸ್‌ ಬುಕ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, “ಹೋರಾಟಗಾರರ ಪಟ್ಟಿಯಲ್ಲಿ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಹರಲಾಲ್ ನೆಹರೂ ಅವರ ಭಾವಚಿತ್ರ ಕೈಬಿಡಲಾಗಿದೆ. ಹಾಗೆಯೇ ಅಲ್ಲಿ ಕಾಣಿಸಿಕೊಳ್ಳಲೇ ಬೇಕಾಗಿದ್ದ ಹಲವು ಮಂದಿ ಪ್ರಮುಖ ಹೋರಾಟಗಾರರ ಭಾವಚಿತ್ರಗಳು ಕೂಡ ಇಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. 

ಮುಂದುವರಿದು, “ಇದು ಅಕಸ್ಮಾತ್ ಸಂಭವಿಸಿರುವ ಪ್ರಮಾದವೇ? ತಳಮಟ್ಟದಲ್ಲಿ ಸಂಭವಿಸಿರುವ ಕರ್ತವ್ಯ ಲೋಪವೇ? ಉದ್ದೇಶಪೂರ್ವಕ ಕೃತ್ಯವೇ? ಸೈದ್ಧಾಂತಿಕವಾದ ಕುತರ್ಕವೆ? ಅಥವಾ ನೆಹರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡದ್ದೇ ʼಫೇಕ್ ಸುದ್ದಿʼಯೆ? ಕರ್ನಾಟಕ ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡುವುದು ತನ್ನ ನೈತಿಕ, ಸಾಮಾಜಿಕ, ರಾಷ್ಟ್ರೀಯ ಮತ್ತು ಸಾಂವಿಧಾನಿಕ ಜವಾಬ್ದಾರಿ ಎಂದು ಭಾವಿಸಬೇಕು. ದೇಶದ ಒಬ್ಬ ನಾಗರಿಕನಾಗಿ ನಾನು ಈ ಲೋಪಕ್ಕಾಗಿ ತಲೆತಗ್ಗಿಸುತ್ತೇನೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಾಯಕರ ಮನೆ ಮೇಲೆ ಖಾದಿ ಧ್ವಜ, ಸಾಮಾನ್ಯರ ಮನೆ ಮೇಲೆ ಪಾಲಿಸ್ಟರ್ ಧ್ವಜ ಹಾರಾಟ; ಹಲವೆಡೆ ಧ್ವಜಸಂಹಿತೆ ಉಲ್ಲಂಘನೆ

“ಇದು ಕರ್ತವ್ಯ ಲೋಪ ಎಂದುಕೊಳ್ಳುವುದೇ ಒಂದು ಹುಂಬತನ. ಕಳೆದ ಎಂಟು ವರ್ಷಗಳಿಂದ ಅತ್ಯಂತ ವ್ಯವಸ್ಥಿತವಾಗಿ ಸಾರ್ವಜನಿಕ ನೆನಪುಗಳಿಂದ ನೆಹರೂ ಅವರನ್ನು ಅಳಿಸಿಹಾಕುವ ಕೆಲಸ ನಡೆದಿದೆ. ನಿಂದನೆಗೆ ಹೊರತುಪಡಿಸಿದರೆ ನೆಹರೂ ಉಲ್ಲೇಖ ಆಗುವುದಿಲ್ಲ. ನೆಹರೂ ಜಯಂತಿಯಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಬಿಜೆಪಿಯ ಸಚಿವರು, ಪ್ರಧಾನಿಗಳನ್ನು ಬಿಡಿ ಲೋಕಸಭಾ ಅಧ್ಯಕ್ಷರೂ ಕಾಣಿಸಿಕೊಳ್ಳುವುದಿಲ್ಲ. ಮ್ಯೂಸಿಯಂ ಗಳಿಂದ ನೆಹರೂವನ್ನು ಹೊರದಬ್ಬಲಾಗಿದೆ. ವಸ್ತು ಪ್ರದರ್ಶನಗಳಲ್ಲಿ ನೆಹರೂ ಫೋಟೋ ಇರದಂತೆ ನೋಡಿಕೊಳ್ಳಲಾಗಿದೆ. ನೆಹರೂ ತನ್ನ ಮಗಳಿಗೆ ಬರೆದ ಪತ್ರವನ್ನು ನಮ್ಮ ಶಾಲಾ ಮಕ್ಕಳು ಯಾಕೆ ಓದಬೇಕು ಎಂದು ಪ್ರಶ್ನಿಸಿ ಆ ಪಾಠ ತೆಗೆದುಹಾಕುವಷ್ಟು ಮುಂದೆ ಹೋಗಿದ್ದಾರೆ, ನಮ್ಮ ಮಹಾಮಹಿಮ ಶಿಕ್ಷಣ ಸಚಿವ ನಾಗೇಶ್” ಎಂದು ಬರಹಗಾರ ಶ್ರೀನಿವಾಸ ಕಾರ್ಕಳ ಟೀಕಿಸಿದ್ದಾರೆ.

ಸರ್ಕಾರಗಳಿಗೆ ಧಿಕ್ಕಾರವಿರಲಿ

"ಇತಿಹಾಸ ತಿರುಚುವ ಇಂಥ ದರಿದ್ರ ಸರ್ಕಾರಗಳಿಗೆ ಧಿಕ್ಕಾರವಿರಲಿ. ಸತ್ಯಕ್ಕೆ ಅಪಚಾರ ಮಾಡಲು ಸಾರ್ವಜನಿಕ ಹಣವನ್ನು ಖರ್ಚು ಮಾಡಬಾರದು ಎನ್ನುವ ಸಣ್ಣ ತಿಳಿವಳಿಕೆಯೂ ಇಲ್ಲದ ಇಂಥ ಸರ್ಕಾರಕ್ಕೆ ಏನು ಹೇಳುತ್ತೀರಿ? ಜನತಾ ಪರಿವಾರದಿಂದ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪೊಳ್ಳು ಬಂಡವಾಳ ಈ ಜಾಹಿರಾತಿನಲ್ಲಿ ಪೂರ್ಣ ಬಯಲಾಗಿದೆ" ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಜಿ ನಿರ್ದೇಶಕ ವಿಶು ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, " ಒಂದು ಸರ್ಕಾರದ ಜಾಹೀರಾತಿಗೂ ಬಿಜೆಪಿ ಕರಪತ್ರಕ್ಕೂ ವ್ಯತ್ಯಾಸ ತಿಳಿಯದ ಈ ಭಂಡ ಸರ್ಕಾರಕ್ಕೆ ಬುದ್ದಿ ಕಲಿಸಲೇ ಬೇಕು. ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಮಹಾತ್ಮ ಗಾಂಧೀಜಿಯವರ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿ ಹಲವಾರು ವರ್ಷ ಸೆರೆಮನೆ ವಾಸ ಅನುಭವಿಸಿದ ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಭಾವಚಿತ್ರವೇ ಇಲ್ಲದ ಈ ಜಾಹೀರಾತು ಬಿಡುಗಡೆ ಮಾಡಿದವರ ವಿರುದ್ಧ ಕಾನೂನಾತ್ಮಕವಾಗಿಯೂ ಹೋರಾಟ ಮಾಡಬೇಕಾಗಿದೆ. ಸಾರ್ವಜನಿಕ ಹಣದ ದುರುಪಯೋಗದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲೇ ಬೇಕು" ಎಂದು ಒತ್ತಾಯಿಸಿದ್ದಾರೆ.

ಆಡಳಿತ ಸರ್ಕಾರವೊಂದು ಸಾರ್ವಜನಿಕ ತೆರಿಗೆ ಹಣದಲ್ಲಿ ಯಾವುದೇ ಜಾಹೀರಾತು ನೀಡುವಾಗ ಒಂದು ಪಕ್ಷ, ಒಂದು ಸಿದ್ಧಾಂತದ ಮೂಗಿನ ನೇರಕ್ಕೆ ನೋಡುವ ಕ್ರಮ ಎಷ್ಟು ಸರಿ? ಸರ್ಕಾರವೊಂದು ಎಲ್ಲವನ್ನೂ ಸಮಾನವಾಗಿ ಮತ್ತು ಪೂರ್ವಗ್ರಹವಿಲ್ಲದ ಮುಕ್ತ ಧೋರಣೆಯಿಂದ ಕಾಣಬೇಕಾಗುತ್ತದೆ. ಸರ್ಕಾರ ಬೇರೆ ಮತ್ತು ಪಕ್ಷ ಬೇರೆ. ಪಕ್ಷದ ಗ್ರಹಿಕೆ, ಪೂರ್ವಗ್ರಹಗಳನ್ನು ಸರ್ಕಾರವೊಂದು ಅನುರಿಸುವುದು ಮತ್ತು ಜನರ ತೆರಿಗೆ ಹಣದಲ್ಲಿ ಅಂತಹ ಪೂರ್ವಗ್ರಹಗಳನ್ನು ಜನರ ತೆರಿಗೆ ಹಣದಲ್ಲಿ ಬಿತ್ತುವುದು ಎಷ್ಟು ಸರಿ? ಎಂಬ ಪ್ರಶ್ನೆಯನ್ನೂ ಹಲವು ಎತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್