ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ: ಎಚ್‌ಡಿಕೆ ಟೀಕೆ

  • ಮುಖ್ಯಮಂತ್ರಿ ಸ್ವತಂತ್ರವಾಗಿ ಅಧಿಕಾರ ನಡೆಸಲು ಆಗುತ್ತಿಲ್ಲ
  • ಎಲ್ಲಾ ನಿರ್ಧಾರಗಳೂ ಕೇಶವ ಕೃಪಾದಿಂದ ಬರಬೇಕು; ಎಚ್ ಡಿ ಕೆ ವಾಗ್ದಾಳಿ

“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವತಂತ್ರವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ, ಎಲ್ಲವೂ ಕೇಶವ ಕೃಪಾದಿಂದ ಬರಬೇಕು. ಅಲ್ಲಿಂದ ಬರುವುದೇ ಅಂತಿಮ ನಿರ್ದಾರ. ಇವರು ರಿಮೋಟ್ ಕಂಟ್ರೋಲ್ ಸಿಎಂ” ಎಂದು ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕಿಸಿದರು.

ಹಾಸನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೀ ಇರೋದೆ ಬೇರೆ ಕಡೆ, ಪಾಪ ಅವರೇನು ಮಾಡ್ತಾರೆ? ಅವರ ಬಗ್ಗೆ ನನಗೆ ಕನಿಕರ ಇದೆ. ಸ್ವತಂತ್ರವಾಗಿ ಸಿಎಂ ಅಧಿಕಾರಿ ನಡೆಸಲು ಆಗುತ್ತಿಲ್ಲ” ಎಂದರು.

“ಇಂದು ದೇಶದಲ್ಲಿ  ಹಂತ ಹಂತವಾಗಿ ಮನು ಸಂಸ್ಕೃತಿ ವಾತಾವರಣ ನಿರ್ಮಿಸಲು ಹೊರಟಿದ್ದಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ವಿರೋಧ ಪಕ್ಷಗಳು ಮೊದಲು ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು” ಎಂದು ಕುಮಾರಸ್ವಾಮಿ ಹೇಳಿದರು.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ
“ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಮಾಡುತ್ತಿದ್ದೀರಲ್ಲ ಇದು ಪ್ರಜಾಪ್ರಭುತ್ವ ಉಳಿಸುವ ಕೆಲಸವೇ? ಸೂರತ್‌ನಿಂದ ಅಸ್ಸಾಂಗೆ 40 ಶಾಸಕರನ್ನು ಕರೆದುಕೊಂಡು ಹೊರಟಿದ್ದೀರಂತೆ, ಆಡಳಿತ ನಡೆಸುವ ಸರ್ಕಾರ ದಮನ ಮಾಡಿ, ಬಿಜೆಪಿ ಸರ್ಕಾರವೇ ಬರಬೇಕು ಎನ್ನುವ ನಿಮ್ಮ ನಡವಳಿಕೆ ಒಳ್ಳೆಯದಲ್ಲ. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ” ಎಂದು ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

“ದೇಶದ ಜನರು ಮೋದಿ ಅವರ ಬೂಟಾಟಿಕೆ ಮಾತುಗಳಿಗೆ ಮರುಳಾಗಬೇಡಿ. ಬರೀ ಮಾತುಗಳಿಗೆ ಸೀಮಿತವಾಗಿರುವ ಇವರ ನಡವಳಿಕೆ ಬಗ್ಗೆ ಎಚ್ಚರಿಕೆ ಇರಲಿ. ಮುಂದೆ ಅವರು ದಿನಾ ಬರುತ್ತಾರೆ. ಏಕೆಂದರೆ ಸನಿಹದಲ್ಲೇ ಚುನಾವಣೆ ಇದೆ. ಬಹುಶಃ 11 ತಿಂಗಳಲ್ಲಿ 11 ಬಾರಿ ಬರ್ತಾರೊ 22 ಬಾರಿ ಬರ್ತಾರೊ ಗೊತ್ತಿಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ರಾಷ್ಟ್ರಪತಿ ಚುನಾವಣೆ ಹಿನ್ನೆಲೆ : ದೆಹಲಿಯಲ್ಲಿ ಸಭೆ ನಡೆಸಿದ ರಾಜ್ಯ ಕಾಂಗ್ರೆಸ್ ನಾಯಕರು

“ಕಳೆದ ಮೂರು ವರ್ಷ ಬರಲಿಲ್ಲ, ಕೋವಿಡ್ ಅನಾಹುತ ಆದಾಗ ಬರಲಿಲ್ಲ. ಬೆಳಗಾವಿ, ಕೊಡಗು ಮಳೆ ಅನಾಹುತದಲ್ಲಿ ಜನ ಸತ್ತಾಗ ಬರಲಿಲ್ಲ. ಈಗ ಕರ್ನಾಟಕದ ಬಗ್ಗೆ ಕನಿಕರ ಪಟ್ಟು ಬರುತ್ತಾರೆ. ಜನ ಎಚ್ಚರಿಕೆಯಿಂದ ತೀರ್ಮಾನ ಮಾಡಬೇಕು. ಈ 40 ಪರ್ಸೆಂಟ್ ಸರ್ಕಾರ ಹಾದಿ ಬೀದಿಯಲ್ಲಿ ನಡೆಯುತ್ತಿರೊ ಲೂಟಿ ನಿಲ್ಲಿಸೋದು ನಾಡಿನ ಜನರ ಹೊಣೆಯಾಗಿದೆ. ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಮನವಿ ಮಾಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್