ಕುರ್ಚಿ ಉಳಿಸಿಕೊಳ್ಳಲು ನೆಹರೂ ಫೋಟೋ ಕೈಬಿಡುವಷ್ಟು ಗುಲಾಮಗಿರಿ ಬಂತೆ ಬೊಮ್ಮಾಯಿ ಅವರೇ?: ಸಿದ್ದರಾಮಯ್ಯ ಕಿಡಿ

Siddaramaiah
  • ರಾಜ್ಯ ಸರ್ಕಾರದ ವತಿಯಿಂದ ಕನ್ನಡ ಮತ್ತು ಇಂಗ್ಲಿಷ್‌ ದೈನಿಕ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟ
  • ʼಬ್ರಿಟಿಷರ ಕ್ಷಮೆ ಯಾಚಿಸಿದ್ದ ಹೇಡಿ ಸಾವರ್ಕರ್ ಫೋಟೋ ಬಳಕೆಯಿಂದ ನಿಮ್ಮ ಸತ್ಯ ಬೆತ್ತಲುʼ 

“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ರಾಜ್ಯ ಸರ್ಕಾರದ ಭಾನುವಾರದ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ ನೆಹರೂ ಅವರ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ನೀವು ಇಳಿಯಬಾರದಿತ್ತು. ಕುರ್ಚಿ ಉಳಿಸಿಕೊಳ್ಳಲು ಈ ಪರಿಯ ಗುಲಾಮಗಿರಿಯೇ?” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.

ರಾಜ್ಯ ಸರ್ಕಾರದ ವತಿಯಿಂದ ಭಾನುವಾರ ಕನ್ನಡ ಮತ್ತು ಇಂಗ್ಲಿಷ್‌ ದೈನಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಕುರಿತ ಜಾಹೀರಾತಿನಲ್ಲಿ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರೂ ಮತ್ತು ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಆದ ಪಂಡಿತ್ ಜವಹರಲಾಲ್ ನೆಹರೂ ಚಿತ್ರ ಕೈಬಿಟ್ಟಿರುವ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಟ್ವೀಟ್‌ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದಿದ್ದಾರೆ.

“ಬೊಮ್ಮಾಯಿ ಅವರೇ, ಪಂಡಿತ ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬದುಕಿನ ಒಂಬತ್ತು ವರ್ಷಗಳನ್ನು ಜೈಲಿನಲ್ಲಿ ಕಳೆದವರು ಎನ್ನುವುದು ನೆನಪಿರಲಿ. ಅವರು ನಿಮ್ಮ ವಿ ಡಿ ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ” ಎಂದು ಟೀಕಿಸಿದ್ದಾರೆ.

“ಆರ್ ಎಸ್ ಎಸ್ ಕೋಮುರಾಜಕಾರಣವನ್ನು ವಿರೋಧಿಸಿದ್ದ, ಗಾಂಧಿ ಹತ್ಯೆಯ ನಂತರ ಅದನ್ನು ನಿಷೇಧಿಸಿದ್ದ ಹಾಗೂ ತನ್ನ ಬದುಕನ್ನು ಜಾತ್ಯತೀತತೆ ಕಾಪಾಡಲು ಮುಡಿಪಾಗಿಟ್ಟಿದ್ದ ಜವಾಹರಲಾಲ್ ನೆಹರೂ ಅವರ ಬಗ್ಗೆ ಆರ್ ಎಸ್ ಎಸ್ ಅಲರ್ಜಿಯನ್ನು ಅರ್ಥಮಾಡಿಕೊಳ್ಳಬಹುದು. ನಿಮಗೇನಾಗಿದೆ ಬೊಮ್ಮಾಯಿ ಅವರೇ? ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನಮೂದಿಸಲು ನಿಮಗೆ ಸಿಕ್ಕ ಏಕೈಕ ವ್ಯಕ್ತಿ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕ್ಷಮೆ ಯಾಚಿಸಿದ್ದ ಹೇಡಿ ವಿ ಡಿ ಸಾವರ್ಕರ್ ಮಾತ್ರ ಎನ್ನುವುದು ನಿಮ್ಮ ಪರಿವಾರದ ಸ್ವಾತಂತ್ರ್ಯ ಹೋರಾಟದ ಸತ್ಯವನ್ನು ಬೆತ್ತಲೆ ಮಾಡಿದೆ” ಎಂದು ಜರಿದಿದ್ದಾರೆ.

 ಈ ಸುದ್ದಿ ಓದಿದ್ದೀರಾ? ಅಮೃತ ಮಹೋತ್ಸವ ಜಾಹೀರಾತು| ನೆಹರೂ ಭಾವಚಿತ್ರವನ್ನೇ ಕೈಬಿಟ್ಟ ಬೊಮ್ಮಾಯಿ ಸರ್ಕಾರ; ಸಾರ್ವಜನಿಕ ಆಕ್ರೋಶ

“ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಎರಡು ಬಾರಿ (1921 ಮತ್ತು 1931) ಜೈಲುಶಿಕ್ಷೆ ಅನುಭವಿಸಿದ್ದ ಆರ್ ಎಸ್ ಎಸ್ ಸಂಸ್ಥಾಪಕ ಕೆ ಬಿ ಹೆಡಗೆವಾರ್ ಅವರ ಚಿತ್ರವನ್ನು ಯಾಕೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ಕೈಬಿಟ್ಟಿದ್ದೀರಿ? ತ್ರಿವರ್ಣ ಧ್ವಜವನ್ನು ತಿರಸ್ಕರಿಸಿದ್ದ ಅವರ ಬಂಡವಾಳ ಬಯಲಾಗಬಹುದೆಂಬ ಭಯವೇ? ಬ್ರಿಟಿಷರ ಕ್ಷಮೆ ಕೇಳಿ ಜೈಲಿನಿಂದ ಬಿಡುಗಡೆಗೊಂಡ ವಿ ಡಿ ಸಾವರ್ಕರ್ ಅವರಿಗೆ ಮೊದಲ ಸಾಲಿನ ಗೌರವ. ಸ್ವಾತಂತ್ರ್ಯ ಹೋರಾಟದ ಜೊತೆ ಬಹುಜನ ಸಮಾಜದ ಹಿತಾಸಕ್ತಿಯ ರಕ್ಷಣೆಗಾಗಿಯೂ ಹೋರಾಟ ನಡೆಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊನೆಯ ಸಾಲಿನ ನಿರ್ಲಕ್ಷ್ಯ. 'ಸುಪ್ತ ಅಸ್ಪೃಶ್ಯತೆಯ ನಗ್ನ ಪ್ರದರ್ಶನ'” ಎಂದು ಟೀಕಿಸಿದ್ದಾರೆ.

“ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಜವಾಹರಲಾಲ ನೆಹರೂ ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು. ಈ ಅವಮಾನಕ್ಕಾಗಿ ಮೊದಲು ರಾಜ್ಯದ ಜನತೆಯ ಕ್ಷಮೆ ಕೇಳಿ” ಎಂದು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್