ಹಾವೇರಿ | ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಬ್ಯಾಡಗಿ ಮೆಣಸಿನಕಾಯಿ

  • ಸರ್ಕಾರದ ನಿರೀಕ್ಷೆಗೂ ಮೀರಿ ಮಾರುಕಟ್ಟೆಯಲ್ಲಿ ಹಣ ಸಂಗ್ರಹ
  • ಒಂದೇ ವರ್ಷದಲ್ಲಿ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ವಹಿವಾಟು 

ಕಳೆದ ಎರಡು ಮೂರು ವರ್ಷಗಳಿಂದ ಪ್ರವಾಹ, ಬರಗಾಲ, ಬೆಲೆ ಕುಸಿತ, ಮಾರುಕಟ್ಟೆ ಸಮಸ್ಯೆ ಮತ್ತು ಸರ್ಕಾರದ ಹೊಸ ಕಾಯಿದೆಗಳಿಂದ ರೈತರು ರೋಸಿಹೋಗಿದ್ದರು. ಇದೀಗ ಬ್ಯಾಡಗಿ ಮೆಣಸಿನಕಾಯಿ ಬೆಲೆ ಏರಿಕೆ ಕಂಡಿದ್ದು, ಹಾವೇರಿ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 

ಜಿಲ್ಲೆಯ ರೈತರಿಗೆ ಬ್ಯಾಡಗಿ ಮೆಣಸಿನ ಕಾಯಿ ಬೆಳೆಯು ಉತ್ತಮ ಇಳುವರಿ ಕೊಟ್ಟಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇದ್ದು, ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ. ರೈತರು ಮಾತ್ರವಲ್ಲದೇ ದಲ್ಲಾಳಿಗಳು ಮತ್ತು ವ್ಯಾಪಾರಸ್ಥರು ಕೂಡ ಆದಾಯ ಪಡೆಯಬಹುದೆಂದು ಖುಷಿಯಾಗಿದ್ದಾರೆ.

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು 2021-2022 ಸಾಲಿನಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯಿಂದಲೇ ಸುಮಾರು 9.50 ಕೋಟಿ ರೂ. ತೆರಿಎ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿತ್ತು. ಆದರೆ, ಸರ್ಕಾರದ ನಿರೀಕ್ಷಿತ ಮೊತ್ತಕ್ಕಿಂತ ಹೆಚ್ಚು ಹಣ (12.27 ಕೋಟಿ) ಸಂಗ್ರಹವಾಗಿದೆ. ಕಳೆದ ವರ್ಷದಂತೆ, ಈ ವರ್ಷವೂ ಕೂಡ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿದೆ. 

ಕಳೆದ ಹತ್ತು ವರ್ಷಗಳಿಂದಲೂ ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಯಲ್ಲಿ ‘ಬ್ಯಾಡಗಿ ಮೆಣಸಿನಕಾಯಿ’ಯದ್ದೆ ಅಬ್ಬರವಾಗಿದೆ. ದಿನ ಒಂದಕ್ಕೆ 3 ಲಕ್ಷಕ್ಕೂ ಹೆಚ್ಚು ಚೀಲಗಳು ಮಾರುಕಟ್ಟೆಗೆ ತಲುಪುತ್ತಿದೆ. ಕಳೆದ ವರ್ಷ ಒಂದು ಕ್ವಿಂಟಾಲ್‌ಗೆ 76 ಸಾವಿರ ರೂಪಾಯಿಗಳಿದ್ದರೆ, ಈ ವರ್ಷ 82 ಸಾವಿರ ರೂಪಾಯಿಗೆ ಏರಿಕೆಯಾಗಿದೆ. 

ಈ ಸುದ್ದಿ ಓದಿದ್ದೀರಾ? : ಜಗ್ಗದ ಹಣದುಬ್ಬರ| ಮತ್ತೆ ಶೇ.5.4ರಷ್ಟು ರೆಪೊ ದರ ಏರಿಸಿದ ಆರ್‌ಬಿಐ

ಈ ಸಂಬಂಧ ಬ್ಯಾಡಗಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ್ ಮಾತನಾಡಿ, “ಬ್ಯಾಡಗಿ ಮಾರುಕಟ್ಟೆಯಲ್ಲಿ ಪಾರದರ್ಶಕ ವ್ಯಾಪಾರ, ಸ್ಪರ್ಧಾತ್ಮಕ ಬೆಲೆ, ರೈತರು, ವರ್ತಕರು, ದಲ್ಲಾಳಿಗಳು ಹಾಗೂ ಲಕ್ಷಾಂತರ ಕೂಲಿ ಕಾರ್ಮಿಕರ ಪರಿಶ್ರಮವಿದೆ. ಮಾರುಕಟ್ಟೆಗೆ ಬರುವ ಮೆಣಸಿನಕಾಯಿಯನ್ನು ವಿವಿಧ ರೀತಿಯಲ್ಲಿ ವಿಭಾಗಿಸಿ ಮಾರಾಟ ಮಾಡಲಾಗುತ್ತದೆ. ಇದರ ಪರಿಣಾಮದಿಂದಾಗಿ ಈ ವರ್ಷ ಮಾರುಕಟ್ಟೆಯಲ್ಲಿ 2 ಸಾವಿರ ಕೋಟಿಗೂ ಹೆಚ್ಚು ವಹಿವಾಟು ಮಾಡಲಾಗಿದೆ,” ಎಂದು ಹೇಳಿದ್ದಾರೆ.  

ಬ್ಯಾಡಗಿ ಮಾರುಕಟ್ಟೆಯ ಎಪಿಎಂಸಿ ಕಾರ‍್ಯದರ್ಶಿ ಎಚ್.ವೈ. ಸತೀಶ ಮಾತನಾಡಿ, “ನಮ್ಮ ಮಾರುಕಟ್ಟೆಯಲ್ಲಿ ಇ-ಟೆಂಡರ್ ವ್ಯವಸ್ಥೆ, ಪಾರದರ್ಶಕ ತೂಕದ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇಲ್ಲಿರುವ ವರ್ತಕರು ಮತ್ತು ದಲ್ಲಾಳಿಗಳು ಕೂಡ ರೈತರಿಗೆ ಸರಿಯಾದ ಸಮಯಕ್ಕೆ ಹಣವನ್ನು ಪಾವತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಉತ್ತಮ ತಳಿಯ ಮೆಣಸಿನಕಾಯಿ ಬೆಳೆಯುವ ಬಗ್ಗೆ ಗಮನಹರಿಸಲಾಗುವುದು,” ಎಂದು ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್