ಸುದ್ದಿ ವಿವರ | ಹಿಂದುಳಿದ ವರ್ಗಗಳ ಮೀಸಲಾತಿ: ನ್ಯಾ.ಭಕ್ತವತ್ಸಲ ಆಯೋಗದ ವರದಿ; ಏನು, ಎತ್ತ?

  • ಹಿಂದುಳಿದ ವರ್ಗಗಳಿಗೆ ಶೇ.33 ರಷ್ಟು ರಾಜಕೀಯ ಮೀಸಲಾತಿಗೆ ಆಯೋಗದ ರಚನೆ
  • ಜುಲೈ 21ರಂದು ನ್ಯಾ. ಭಕ್ತವತ್ಸಲ ಆಯೋಗವು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತ್ತು 

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬಾಕಿ ಇವೆ. ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ.33 ರಷ್ಟು ರಾಜಕೀಯ ಮೀಸಲಾತಿ ನೀಡಲು ಮೂರು ಹಂತದ ಪರಿಶೀಲನೆಯ ಭಾಗವಾಗಿ ರಚಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಆಯೋಗದ ಶಿಫಾರಸ್ಸುಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸುವುದು ಮತ್ತು ಈ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಸಂಬಂಧ ಅಧ್ಯಯನ ನಡೆಸಿ, ಶಿಫಾರಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ನೀಡಲಾಗಿತ್ತು. 

ರಾಜ್ಯದಲ್ಲಿ ಸುಮಾರು 700ಕ್ಕೂ ಹೆಚ್ಚು ಸಮುದಾಯಗಳು ಒಬಿಸಿ ವ್ಯಾಪ್ತಿಯಲ್ಲಿ ಬರಲಿದ್ದು, ಜನಸಂಖ್ಯೆ ಆಧರಿಸಿ ಒಬಿಸಿಗೆ ಶೇ. 33ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸಬಹುದು. 1986ರಿಂದ ಜಾರಿಯಲ್ಲಿರುವ ಒಬಿಸಿ ಮೀಸಲು ಮುಂದುವರಿಕೆ ನ್ಯಾಯಸಮ್ಮತ ಎಂದು ನ್ಯಾ. ಭಕ್ತವತ್ಸಲ ಆಯೋಗದ ವರದಿಯಲ್ಲಿ ತಿಳಿಸಲಾಗಿತ್ತು.

ರಾಜಕೀಯ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಈಗ, ಸಂಪುಟದ ಅನುಮೋದನೆ ಪಡೆದಿರುವ ನ್ಯಾ. ಭಕ್ತವತ್ಸಲ ಆಯೋಗದ ವರದಿಯನ್ನು ಅಧಿಸೂಚಿಸಿ, ಆಕ್ಷೇಪಗಳನ್ನು ಆಹ್ವಾನಿಸಲಾಗುವುದು. ಕೋರ್ಟ್ ಸಮ್ಮತಿಯೂ ಸಿಕ್ಕರೆ, ರಾಜ್ಯದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ಚಾಲನೆ ಪಡೆಯಲಿದೆ. ಮುಖ್ಯವಾಗಿ, ಒಬಿಸಿ ಮೀಸಲಾತಿ ಕಲ್ಪಿಸಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ರಾಜ್ಯ ಸರ್ಕಾರದ ಉದ್ದೇಶ ಈ ಮೂಲಕ ಜಾರಿಯಾಗಲಿದೆ.

ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಒಳಗೊಂಡು ಒಟ್ಟು ಮೀಸಲಾತಿ ಪ್ರಮಾಣ ಶೇ. 50 ಮೀರದಂತೆ ಒಬಿಸಿ ಮೀಸಲಾತಿ ಮುಂದುವರಿಕೆಗೆ ಶಿಫಾರಸು ಒಪ್ಪಲಾಗಿದೆ. ಪ್ರತಿ ಸ್ಥಳೀಯ ಸಂಸ್ಥೆ ಒಂದು ಯೂನಿಟ್ ಎಂದು ಪರಿಗಣಿಸಿ ಮೀಸಲು ನಿಗದಿಪಡಿಸಲು ಸಹ ಅವಕಾಶವಿರುವ ಕಾರಣ ಒಬಿಸಿ ಮತ್ತು ಪರಿಶಿಷ್ಟರ ಮೀಸಲಾತಿ ಹೊಂದಿಸಿಕೊಳ್ಳಲು ಸಮಸ್ಯೆ ಇಲ್ಲ ಎಂಬುದು ಸರ್ಕಾರದ ಅಭಿಪ್ರಾಯ.

ಆಯೋಗದ ಯಾವ ಶಿಫಾರಸ್ಸುಗಳಿಗೆ ಒಪ್ಪಿಗೆ?

  • ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ನಿಯಂತ್ರಣದಲ್ಲಿ ತರುವುದು.
  • ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಲ್ಲೂ ಒಬಿಸಿಗೆ ಮೀಸಲಾತಿ ಕಲ್ಪಿಸುವುದು.
  • ಮುಂಬರುವ 2027 ಅಥವಾ 2028ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಒಳಗೆ ಒಬಿಸಿ ರಾಜಕೀಯ ಮೀಸಲಾತಿಯನ್ನು ಸರ್ಕಾರ ಪುನರ್ ವಿಮರ್ಶೆ ಮಾಡಬೇಕು.
  • ಸದ್ಯದ ಒಬಿಸಿ ಪ್ರವರ್ಗ ಅ ಮತ್ತು ಪ್ರವರ್ಗ ಬ ವರ್ಗೀಕರಣವನ್ನು ಪುನರ್ ವರ್ಗೀಕರಿಸಿ ಹೊಸದಾಗಿ ಮತ್ತೆ 2 ವರ್ಗಗಳನ್ನು ರಚಿಸಬೇಕು.
  • ಪ್ರವರ್ಗ ಅ ಮತ್ತು ಪ್ರವರ್ಗ ಬ ವರ್ಗೀಕರಣ ಸೇರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಒಳಗೊಂಡ ಒಟ್ಟಾರೆ ಮೀಸಲು ಶೇ. 50ರಷ್ಟು ಮೀರಬಾರದು.

ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಏನು ಹೇಳಿತ್ತು?

ಸುಪ್ರೀಂ ಕೋರ್ಟ್ 2010ರಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವ ಸಂಬಂಧ ತೀರ್ಪು ನೀಡಿ, “ನಿಖರವಾದ ಅಂಕಿ–ಅಂಶಗಳ ಆಧಾರದಲ್ಲಿ ಮೂರು ಹಂತದಲ್ಲಿ ಪರಿಶೀಲನೆ ನಡೆಸಿ, ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಖಾತರಿಪಡಿಸಿದ ಬಳಿಕವೇ ರಾಜಕೀಯ ಮೀಸಲಾತಿ ನೀಡಬೇಕು” ಎಂದು ಹೇಳಿತ್ತು. 2021ರ ಮಾರ್ಚ್‌ನಲ್ಲೂ ಸುಪ್ರೀಂ ಕೋರ್ಟ್ ಈ ಮಾತು ಪುನರುಚ್ಚರಿಸಿತ್ತು. 

ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೂರು ಹಂತದ ಪರಿಶೀಲನೆ ಇಲ್ಲದೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು 2022ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈ ಆದೇಶ ಇಡೀ ದೇಶಕ್ಕೆ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.

ಈ ಸುದ್ದಿ ಓದಿದ್ದೀರಾ? ಸಿಬ್ಬಂದಿ ಕೊರತೆ| ಅನ್ನ ಕೊಡುವ ಕೃಷಿ ಇಲಾಖೆಯಲ್ಲೇ ಅರ್ಧದಷ್ಟು ಸಿಬ್ಬಂದಿ ಖೋತಾ!

ನ್ಯಾ. ಭಕ್ತವತ್ಸಲ ಆಯೋಗ ರಚನೆ 

ಸುಪ್ರೀಂ ಕೋರ್ಟ್‌ನ ತೀರ್ಪುಗಳಿಂದಾಗಿ ಕರ್ನಾಟಕ ರಾಜ್ಯದಲ್ಲೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು ಮತ್ತು ಬಿಬಿಎಂಪಿ ಚುನಾವಣೆಗೂ ಮೊದಲೇ ಮೀಸಲಾತಿ ನಿಗದಿ ಮಾಡುವುದು ಅನಿವಾರ್ಯವಾಗಿತ್ತು. ಹೀಗಾಗಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಲು ಉಂಟಾಗಿದ್ದ ತೊಡಕು ನಿವಾರಿಸಲು ಸರ್ವಪಕ್ಷಗಳ ಸಭೆಯಲ್ಲಿ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿತ್ತು. ಅದರಂತೆ ನ್ಯಾಯಮೂರ್ತಿ ಭಕ್ತವತ್ಸಲ ನೇತೃತ್ವದಲ್ಲಿ ಮೇ 7 ರಂದು ಆಯೋಗವನ್ನು ರಚಿಸಿತ್ತು. ನಿವೃತ್ತ ಐಎಎಸ್ ಅಧಿಕಾರಿ ಸಿ ಆರ್ ಚಿಕ್ಕಮಠ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಕಳೆದ ಜುಲೈ 21ರಂದು ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್