ಲೈಂಗಿಕ ದೌರ್ಜನ್ಯ ಪ್ರಕರಣ| ಮುರುಘಾ ಶ್ರೀ ಬಂಧನಕ್ಕೆ ಮಹಿಳಾ ಸಂಘಟನೆಗಳ ಆಗ್ರಹ 

Muruga Shree
  • ಮುರುಘಾ ಶ್ರೀ ಅವರಿಂದ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ನ್ಯಾಯಕ್ಕೆ ಆಗ್ರಹ
  • ಎಸ್ಸಿ, ಎಸ್ಟಿ ದೌರ್ಜನ್ಯ  ತಡೆ ಕಾಯ್ದೆ ಅಡಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ

"ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಕೂಡಲೆ ಬಂಧಿಸಬೇಕು" ಎಂದು ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ (ಐಪ್ವಾ)ದ ಕರ್ನಾಟಕ ರಾಜ್ಯಾಧ್ಯಕ್ಷೆ ಎಂ ನಿರ್ಮಲಾ ಆಗ್ರಹಿಸಿದ್ದಾರೆ.

ಚಿತ್ರದುರ್ಗದಲ್ಲಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಮಠದ ಹಾಸ್ಟೆಲಿನಲ್ಲಿ ವಾಸಿಸುತ್ತಿದ್ದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಪಾದನೆಗಳನ್ನು ಎದುರಿಸುತ್ತಿರುವುದು ಹಲವು ಗಂಭೀರ ಪ್ರಶ್ನೆಗಳಿಗೆ ಎಡೆಮಾಡಿ ಕೊಡುತ್ತದೆ. ಶಿಶು ಅಭಿವೃದ್ಧಿ ಮತ್ತು ರಕ್ಷಣಾ ಅಧಿಕಾರಿಯ ದೂರನ್ನು ಅಧರಿಸಿ ಮೈಸೂರಿನ ನಜರಾಬಾದ್ ಪೊಲೀಸರು ಆಪಾದಿತರ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 (ಪೋಕ್ಸೋ ಕಾಯ್ದೆ) ಮತ್ತು ಭಾರತೀಯ ದಂಡ ಸಂಹಿತೆ 1860 ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಈಗ ಪ್ರಕರಣವನ್ನು ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಆಪಾದಿತ ವ್ಯಕ್ತಿ ಇರುವ ಸ್ಥಳ ಯಾವುದೆಂದು ತಿಳಿದಿದ್ದರೂ, ಪೊಲೀಸರು ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ. ಆದ್ದರಿಂದ ಶೀಘ್ರವೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ದೂರು ದಾಖಲಾದ ನಂತರದಲ್ಲಿ ತಮ್ಮ ಮೂಲ ಸ್ಥಳದಿಂದ ದೂರ ಹೊರಟಿದ್ದ ಆಪಾದಿತ ವ್ಯಕ್ತಿ ಶಿವಮೂರ್ತಿ ಅವರನ್ನು ಪೊಲೀಸರ ರಕ್ಷಣೆಯಲ್ಲೇ ಚಿತ್ರದುರ್ಗದಲ್ಲಿರುವ ಮುರುಘಾ ಮಠಕ್ಕೆ ಕರೆತಂದು, ಆರೋಪಿಯ ಎದುರಿನಲ್ಲೇ ಮಹಜರು ನಡೆದಿರುವುದು ಪೋಕ್ಸೋ ಕಾಯ್ದೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಇದರಿಂದ ಪೊಲೀಸ್ ವ್ಯವಸ್ಥೆಯ ಆಡಳಿತ ನಿರ್ವಹಣೆಯ ಬಗ್ಗೆ ಸಾಕಷ್ಟು ಅಪನಂಬಿಕೆಗಳು ಸೃಷ್ಟಿಯಾಗುತ್ತವೆ" ಎಂದು ನಿರ್ಮಲಾ ಆರೋಪಿಸಿದ್ದಾರೆ.

"ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದರೂ, ಇಂತಹ ಗಂಭೀರ ಸ್ವರೂಪದ ಆಪಾದನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಆಪಾದಿತ ವ್ಯಕ್ತಿಯನ್ನು ಕಾನೂನು ರೀತಿಯಲ್ಲಿ ಬಂಧಿಸದಿರುವುದು ದುರದೃಷ್ಟಕರ. ಆಪಾದಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿರುವುದು ಮತ್ತು ಬಂಧಿಸದೆ ಇರುವುದು ಹಾಗೂ ಈ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ತನಿಖೆಯ ಹಾದಿಯ ಬಗ್ಗೆಯೇ ಆತಂಕ ಸೃಷ್ಟಿಸುವಂತಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

"ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರಾಕರಿಸಿದ್ದಾರೆ. ಮುಖ್ಯಮಂತ್ರಿಗಳು ಈ ಅಪರಾಧವನ್ನು ಸಾರ್ವಜನಿಕವಾಗಿ ಖಂಡಿಸುವ ಮೂಲಕ ಆಪಾದಿತರ ವಿರುದ್ಧ ಮಾತ್ರವಲ್ಲದೆ ಆರೋಪಿಯನ್ನು ಕೂಡಲೇ ಬಂಧಿಸದೆ ಕರ್ತವ್ಯ ಲೋಪ ಎಸಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು" ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮುರುಘಾಮಠ ಪ್ರಕರಣ| ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಬಹಿರಂಗ ಪತ್ರ ಬರೆದ ಲೇಖಕ, ಪತ್ರಕರ್ತ ಎನ್.ರವಿಕುಮಾರ್

"ಸಂತ್ರಸ್ತರ ಪೈಕಿ ಒಬ್ಬರು ದಲಿತ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ. ಹಾಗಾಗಿ ಕೂಡಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿರ್ಬಂಧಕ) ಕಾಯ್ದೆ 1989ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಕಾಯ್ದೆಯ ಅನ್ವಯ ಸಂತ್ರಸ್ತರ ಪುನರ್ವಸತಿ ಮತ್ತು ಮಕ್ಕಳ ಸಂರಕ್ಷಣೆಯ ನಿಯಮಗಳ ಅನುಸಾರ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದ್ದಾರೆ.

"ರಾಜ್ಯ ಸರ್ಕಾರವು ಈ ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ಅಪರಾಧ ಸಂಹಿತೆಯ ಕಾನೂನು ಪ್ರಕ್ರಿಯೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಮೂಲಕ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಮಾಧ್ಯಮ ಪ್ರಕಟಣೆಯಲ್ಲಿ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ಆಗ್ರಹಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್