ಗುತ್ತಿಗೆದಾರರ ಸಂಘ ಹೆದರಿಸಲು ಗೌಪ್ಯ ಭೇಟಿಗೆ ಮುಂದಾದ ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು: ಕಾಂಗ್ರೆಸ್‌ ಆರೋಪ

Ramesh Babu
  • ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್‌ ವಕ್ತಾರ ರಮೇಶ್‌ ಬಾಬು ಸುದ್ದಿಗೋಷ್ಠಿ
  • ಬೊಮ್ಮಾಯಿಯೇ ಭಷ್ಟಾಚಾರದಲ್ಲಿ ಭಾಗಿಯಾಗಿದ್ದು, ತನಿಖೆಗಳು ಸೂಕ್ತವಾಗಿ ನಡೆಯುತ್ತಿಲ್ಲ: ಆರೋಪ

ಸಚಿವ ಸಂಪುಟದ ಕೆಲವು ಸದಸ್ಯರನ್ನು ಮತ್ತು ಶಾಸಕರನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿಯೇ ಕೇಂದ್ರ ಗೃಹ ಇಲಾಖೆ ಗುತ್ತಿಗೆದಾರರ ಸಂಘಕ್ಕೆ ಲಿಖಿತವಾಗಿ ಯಾವುದೇ ನೋಟಿಸ್ ನೀಡದೇ ಗೌಪ್ಯವಾಗಿ ಭೇಟಿ ಮಾಡಲು ಯತ್ನಿಸಿದೆ ಎಂದು ಕಾಂಗ್ರೆಸ್‌ ವಕ್ತಾರ ಮತ್ತು ಮಾಜಿ ಎಮ್‌ಎಲ್‌ಸಿ ರಮೇಶ್‌ ಬಾಬು ಆರೋಪಿಸಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ(ಕೆಪಿಸಿಸಿ) ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ರಾಜ್ಯ ಗುತ್ತಿಗೆದಾರ ಸಂಘ ಮತ್ತು ಅದರ ಪದಾಧಿಕಾರಿಗಳಿಗೆ ಹೆದರಿಸಲೆಂದೇ ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ರಹಸ್ಯವಾಗಿ ಕೆಂಪಣ್ಣ ಅವರನ್ನು ಭೇಟಿ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.

“ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ಬಿಟ್‌ ಕಾಯಿನ್‌ ಹಗರಣ, ಪಿಎಸ್‌ಐ ಹಗರಣ ಹಾಗೂ 40% ಕಮಿಷನ್‌ ನಂಥ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ಮುಖ್ಯಮಂತ್ರಿಗಳೇ ಭಷ್ಟಾಚಾರದ ಪಾಲುದಾರರು ಆಗಿರುವುದರಿಂದ ಯಾವುದೇ ತನಿಖೆಗಳು ಸೂಕ್ತವಾಗಿ ನಡೆಯುತ್ತಿಲ್ಲ” ಎಂದರು.

“ತನಿಖೆಯ ಹಾದಿಯನ್ನು ತಪ್ಪಿಸುವ ಕಾರಣಕ್ಕೆ ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು ಕಳೆದ ವಾರ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಮಾಹಿತಿ ನೀಡುವಂತೆ ದೂರವಾಣಿ ಮುಖಾಂತರ ಕೇಳಿರುತ್ತಾರೆ. ಈ ಸಂಬಂಧ ಲಿಖಿತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರುವುದಿಲ್ಲ. ಪ್ರಧಾನ ಮಂತ್ರಿಗಳ ಕಚೇರಿಗೆ ದೂರು ಸಲ್ಲಿಕೆಯಾಗಿದ್ದು, ಗೃಹ ಇಲಾಖೆ ಚಟುವಟಿಕೆಗೆ ಇಳಿದಿರುವುದು ಹಲವು ಅನುಮಾನಗಳಿಗೆ ಅವಕಾಶ ನೀಡಿರುತ್ತದೆ. ಮಾಧ್ಯಮಗಳಿಗೆ ಹೆದರಿ ಗೃಹ ಇಲಾಖೆಯ ಅಧಿಕಾರಿಗಳು ವಿಚಾರಣೆ ಮಾಡದೇ ಪಲಾಯನ ಮಾಡಿದ್ದಾರೆ” ಎಂದು ದೂರಿದರು.

ಈ ಸುದ್ದಿ ಓದಿದ್ದೀರಾ? 40% ಕಮಿಷನ್ ಆರೋಪ | ಡಿ ಕೆಂಪಣ್ಣ ಭೇಟಿಗೆ ಗೃಹ ಸಚಿವಾಲಯದ ಅಧಿಕಾರಿಗಳು ಹಿಂದೇಟು ಹಾಕಿದ್ದೇಕೆ?

"ರಾಜ್ಯ ಗುತ್ತಿಗೆದಾರ ಸಂಘವು 2021ರಲ್ಲೇ ನ್ಯಾಯ ಕೋರಿ ರಾಜ್ಯಪಾಲರಿಗೆಮನವಿ ಸಲ್ಲಿಸಿದೆ. ಅದರ ಮೇಲೆಯೂ ಕ್ರಮ ಆಗಿರುವುದಿಲ್ಲ. ರಾಜ್ಯಪಾಲರು ಪೂರ್ವದಲ್ಲಿ ಒಬ್ಬ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸಿದ್ದು, ಗುತ್ತಿಗೆದಾರರ ಸಮಸ್ಯೆಗೋಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ” ಎಂದರು. 

"ರಾಜ್ಯ ಗುತ್ತಿಗೆದಾರರ ಸಂಘದ ಪ್ರಶ್ನೆಗಳಿಗೆ ಉತ್ತರ ನೀಡಲು ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವಿಫಲರಾಗಿರುವ ಮುಖ್ಯಮಂತ್ರಿಗಳು, ತಮಗೆ ಸಹಕಾರ ನೀಡಿದ ಕಾರಣಕ್ಕಾಗಿ ರಾಜ್ಯದ ಹಿಂದಿನ ಮುಖ್ಯಕಾರ್ಯದರ್ಶಿಗಳಿಗೆ ರಾಜ್ಯ ವಿದ್ಯುತ್ಚಕ್ತಿ ಆಯೋಗದ ಅಧ್ಯಕ್ಷ ಸ್ಥಾನ ನೀಡುವುದರ ಮೂಲಕ ಪುನರ್ವಸತಿ ಕಲ್ಪಿಸಿರುತ್ತಾರೆ" ಎಂದು ಆರೋಪಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್