ಚಾಮರಾಜನಗರ | ಹೆಗ್ಗೋಠಾರ ದಲಿತರಿಗೆ ದೇವಸ್ಥಾನ– ಹೋಟೆಲ್‌ಗೂ ಪ್ರವೇಶ ನಿಷಿದ್ಧ!

Dalit Lives Matter
  • ಹೆಗ್ಗೋಠಾರ ಗ್ರಾಮದ ಎಲ್ಲ ಟ್ಯಾಂಕುಗಳಲ್ಲೂ ನೀರು ಕುಡಿದ ದಲಿತರು
  • ಎಲ್ಲ ವರ್ಗದ ಜನ ನೀರು ಕುಡಿಯಬಹುದೆಂದು ಬರೆಸಿದ ಅಧಿಕಾರಿಗಳು

ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿನ ಕಿರುನೀರು ಸರಬರಾಜು ಟ್ಯಾಂಕ್‌ನಲ್ಲಿ ದಲಿತರಿಗೆ ನೀರು ಕುಡಿಯುವುದು ಮಾತ್ರವೇ ನಿಷಿದ್ಧವಲ್ಲ. ಗ್ರಾಮದ ದೇವಸ್ಥಾನ ಮತ್ತು ಹೋಟೆಲಿಗೂ ದಲಿತರಿಗೆ ಪ್ರವೇಶವಿಲ್ಲ!

ಹೆಗ್ಗೋಠಾರ ಗ್ರಾಮದಲ್ಲಿನ ಕಿರುನೀರು ಸರಬರಾಜು ಟ್ಯಾಂಕ್‌ನಲ್ಲಿ ದಲಿತ ಮಹಿಳೆ ನೀರು ಕುಡಿದ ಕಾರಣಕ್ಕೆ ಮೇಲ್ಜಾತಿಯವರು ಟ್ಯಾಂಕ್‌ನ ನೀರು ಖಾಲಿ ಮಾಡಿ ಗೋಮೂತ್ರ ಮತ್ತು ಸಗಣಿ ಗಂಜಲ ಹಾಕಿ ಸ್ವಚ್ಛ ಮಾಡಲಾಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಳಿಕ ಗ್ರಾಮಕ್ಕೆ ಚಾಮರಾಜನಗರ ತಹಶೀಲ್ದಾರ್, ಉಪವಿಭಾಗಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಗ್ರಾಮದ ಎಲ್ಲ ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸಿ ಹೇಳಿಕೆ ಪಡೆದರು.

"ಲಿಂಗಾಯತ ಸಮುದಾಯದ ವ್ಯಕ್ತಿಯೊಬ್ಬ ಅಸ್ಪೃಶ್ಯತೆ ಆಚರಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆ ವ್ಯಕ್ತಿಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು" ಎಂದು ಗ್ರಾಮದ ದಲಿತರು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಗ್ರಾಮಸ್ಥರ ಬಳಿ ಮಾತುಕತೆ ನಡೆಸುವ ವೇಳೆ ಗ್ರಾಮದಲ್ಲಿನ “ಸಿದ್ದರಾಮೇಶ್ವರ ದೇವಸ್ಥಾನಕ್ಕೆ ದಲಿತರ ಪ್ರವೇಶ ಇಲ್ಲ. ಹಣ್ಣುಕಾಯಿ ಮಾಡಿಸಲು ಕೊಟ್ಟರೆ, ನಿಮ್ಮ ತೆಂಗಿನಕಾಯಿ ಮೈಲಿಗೆ ಆಗಿದೆ ಎಂದು ನೀರಿನಿಂದ ತೊಳೆದು ಬಳಿಕ ಹಣ್ಣುಕಾಯಿ ಮಾಡಿಕೊಡುತ್ತಾರೆ” ಎಂದು ಗ್ರಾಮದ ದಲಿತರು ಮತ್ತೊಂದು ಆರೋಪ ಮಾಡಿದರು.

ಗ್ರಾಮದ ಎಲ್ಲ ಟ್ಯಾಂಕ್‌ಗಳಲ್ಲಿ ನೀರು ಕುಡಿದ ದಲಿತರು

ಸಭೆಯ ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ಹೆಗ್ಗೋಠಾರ ಗ್ರಾಮದಲ್ಲಿನ ಎಲ್ಲ ನೀರಿನ ಟ್ಯಾಂಕ್‌ಗಳಿಗೆ ತೆರಳಿದ ದಲಿತ ಯುವಕರು ನೀರು ಕುಡಿದರು. ಬಳಿಕ ನೀರಿನ ಟ್ಯಾಂಕ್ ಮೇಲೆ “ಇದು ಸಾರ್ವಜನಿಕರ ಉಪಯೋಗಕ್ಕಾಗಿ” ಮತ್ತು "ಎಲ್ಲ ವರ್ಗದವರು ನೀರನ್ನು ಬಳಸಬಹುದು" ಎಂದು ಅಧಿಕಾರಿಗಳು ಬರೆಸಿದರು.

‘ದಲಿತರಿಗೆ ಹೋಟೆಲ್‌ ಪ್ರವೇಶವಿಲ್ಲ’

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿ ಕುಮಾರ್, ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಹೆಗ್ಗೋಠಾರ ಗ್ರಾಮದಲ್ಲಿ ಚೋಳರ ಕಾಲದ ಪುರಾತನ ಸಿದ್ಧರಾಮೇಶ್ವರ ದೇವಸ್ಥಾನವಿದೆ. ಅದು ಶಿಥಿಲಾವಸ್ಥೆ ತಲುಪಿದ್ದು, ಇತ್ತೀಚೆಗೆ ಅದನ್ನು ಜೀರ್ಣೋದ್ಧಾರ ಮಾಡಲಾಗಿದೆ. ಈ ದೇವಸ್ಥಾನದಲ್ಲಿ ಲಿಂಗಾಯತ ಸಮುದಾಯದವರು ಮಾತ್ರ ಪೂಜೆ ಮಾಡುತ್ತಾರೆ. ದಲಿತರಿಗೆ ದೇವಸ್ಥಾನದ ಕಾಂಪೌಂಡ್ ಒಳಗೆ ಕೂಡ ಪ್ರವೇಶವಿಲ್ಲ. ಈ ಬಗ್ಗೆ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದು ದಲಿತರಿಗೂ ಪ್ರವೇಶ ನೀಡಿ ಜಾತಿ ಆಧಾರಿತ ತಾರತಮ್ಯ ಹೋಗಲಾಡಿಸಬೇಕು ಎಂದು ತಹಶೀಲ್ದಾರ್ ಅವರಿಗೆ ದೂರು ನೀಡಲಾಗುವುದು” ಎಂದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ದಲಿತ ಮಹಿಳೆ ನೀರು ಕುಡಿದ ಕಾರಣಕ್ಕೆ ಗೋಮೂತ್ರ ಹಾಕಿ ಟ್ಯಾಂಕ್‌ ಶುದ್ಧೀಕರಣ; ವಿಡಿಯೋ ವೈರಲ್

“ಹೆಗ್ಗೋಠಾರ ಗ್ರಾಮದಲ್ಲಿ 450ಕ್ಕೂ ಹೆಚ್ಚು ಲಿಂಗಾಯತ ಸಮುದಾಯ ಮನೆಗಳು ಮತ್ತು 200 ದಲಿತರ ಮನೆಗಳಿವೆ. ಗ್ರಾಮದಲ್ಲಿ ಅವರ ಪ್ರಾಬಲ್ಯವೇ ಹೆಚ್ಚಿದೆ. ದಲಿತರಿಗೆ ನೀರು ಕುಡಿಯಲು ನಿರ್ಬಂಧ ಮಾತ್ರವಲ್ಲ. ಗ್ರಾಮದಲ್ಲಿರುವ ಹೋಟೆಲಿಗೂ ದಲಿತರಿಗೆ ಪ್ರವೇಶವಿಲ್ಲ. ಹೆಗ್ಗೋಠಾರ ಗ್ರಾಮದಲ್ಲಿ ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180