- 25ರಿಂದ 30 ರೋಗಿಗಳಿಗೆ ಸಮಸ್ಯೆ
- ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಗಿಗಳು ಕಿಡಿ
ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ನಾಲ್ಕು ದಿನದ ಹಿಂದೆ ಕೆಟ್ಟು ಹೋಗಿರುವ ಡಯಾಲಿಸಿಸ್ ಘಟಕವನ್ನು ಇನ್ನೂ ಸರಿಪಡಿಸಲಾಗಿಲ್ಲ. ಚಿಕಿತ್ಸೆಗಾಗಿ ಬರುವ ಡಯಾಲಿಸಿಸ್ ರೋಗಿಗಳನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಹೋಗುವಂತೆ ಆಸ್ಪತ್ರೆ ಸಿಬ್ಬಂದಿಗಳು ಕಳಿಸುತ್ತಿದ್ದು, ರೋಗಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನವೆಂಬರ್ 14ರಂದು ಆಸ್ಪತ್ರೆಯ ಒಂದು ಡಯಾಲಿಸಿಸ್ ಘಟಕದ ಕೇಬಲ್ ಸುಟ್ಟು ಹೋಗಿ ಸಂಪೂರ್ಣ ಸ್ಥಬ್ದವಾಗಿತ್ತು. ಇನ್ನೊಂದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಿದ್ದರೂ ಅವುಗಳನ್ನು ಸರಿಪಡಿಸುವ ಗೋಜಿಗೆ ಆಸ್ಪತ್ರೆ ಅಧಿಕಾರಿಗಳು ಹೋಗದಿರುವುದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 25ರಿಂದ 30 ರೋಗಿಗಳು ಪ್ರತಿದಿನ ಡಯಾಲಿಸಿಸ್ ಮಾಡಿಕೊಳ್ಳಲು ಆಸ್ಪತ್ರೆಗೆ ಬರುತ್ತಿದ್ದಾರೆ. ಇವರೆಲ್ಲರೂ ಮಧ್ಯಮ ಕುಟುಂಬದಿಂದ ಬಂದಿದ್ದು, ಆರ್ಥಿಕವಾಗಿ ಬಹಳ ಹಿಂದೆ ಉಳಿದವರಾಗಿದ್ದಾರೆ. ಒಬ್ಬ ರೋಗಿಯು ವಾರಕ್ಕೆ ಎರಡರಿಂದ ಮೂರು ದಿನ ಭೇಟಿ ನೀಡಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ. ಘಟಕ ಸ್ಥಬ್ದಗೊಂಡಿದ್ದರಿಂದ ಡಯಾಲಿಸಿಸ್ ಮಾಡಿಕೊಳ್ಳಲಾಗದೆ ರೋಗಿಗಳು ಪರದಾಟಪಡುವಂತಾಗಿದೆ.
ಈ ಸುದ್ದಿ ಓದಿದ್ದೀರಾ?: ಮಂಡ್ಯ | ಕಬ್ಬು ಬೆಳೆಗಾರರರ ಹೋರಾಟಕ್ಕೆ ಮಳವಳ್ಳಿ ರೈತರ ಬೆಂಬಲ
"ಆಸ್ಪತ್ರೆಗೆ ಬರುವ ರೋಗಿಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಹೋಗುವಂತೆ ವೈದ್ಯರು ಸೂಚಿಸುತ್ತಿದ್ದಾರೆ. ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ಸುಮಾರು 40 ಕೀಲೋಮೀಟರ್ ದೂರವಿದೆ. ಪ್ರಯಾಣ ದರವೂ ಹೆಚ್ಚಾಗಿದೆ. ಅಲ್ಲಿಗೆ, ಹೋದರೆ ಹೊಸದಾಗಿ ರಿಪೋರ್ಟ್ ಮಾಡಿಸಬೇಕು. ಅಲ್ಲದೆ, ಅಲ್ಲಿಗೆ ಹೋಗಿ ಡಯಾಲಿಸಿಸ್ ಮಾಡಿಕೊಂಡು ತಡರಾತ್ರಿ ಮನೆಗೆ ಮರಳುವುದು ರೋಗಿಗಳ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ" ಎಂದು ರೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
"ಒಂದು ಸಣ್ಣ ಸಮಸ್ಯೆಯನ್ನು ಪರಿಹರಿಸಲಾಗದೆ, ಇಷ್ಟು ದಿನ ಎಳೆದಾಡಿ ರೋಗಿಗಳ ಜೀವನದಲ್ಲಿ ಆಟವಾಡುತ್ತಿದ್ದಾರೆ" ಎಂದು ರೋಗಿಗಳ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆ ಸಮಸ್ಯೆ ಕುರಿತು ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮಂಜುನಾಥ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದ್ದು, ಅವರಿಂದ ಯಾವುದೇ ಉತ್ತರ ಸಿಗಲಿಲ್ಲ.