ಚಾಮರಾಜನಗರ| ಹೆಗ್ಗೋಠಾ ಅಸ್ಪೃಶ್ಯತೆ ಆಚರಣೆ ಪ್ರಕರಣ: ಮೇಲ್ಜಾತಿ ವ್ಯಕ್ತಿ ವಿರುದ್ಧ ಎಫ್ಐಆರ್

Dalit Lives Matter
  • ತಲೆ ಮರೆಸಿಕೊಂಡಿರುವ ಆರೋಪಿ ಮಹದೇವಪ್ಪ 
  • ದಲಿತ ಮಹಿಳೆ ನೀರುಕುಡಿದದ್ದಕ್ಕೆ ಶುದ್ಧೀಕರಣ ಪ್ರಕರಣ

ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ನೀರು ಕುಡಿದ ಕಾರಣಕ್ಕೆ ಕಿರು ನೀರು ಸರಬರಾಜು ಟ್ಯಾಂಕ್‌ನ ನೀರು ಖಾಲಿ ಮಾಡಿ, ಸ್ವಚ್ಛಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹೆಗ್ಗೋಠಾರ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಮುಖಂಡ ಗಿರಿಯಪ್ಪ ಎಂಬುವರು ನೀಡಿರುವ ದೂರು ಆಧರಿಸಿ, ಅದೇ ಗ್ರಾಮದ ವೀರಶೈವ ಮುಖಂಡ ಮಹದೇವಪ್ಪ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅದರೆ, ಆರೋಪಿ ತಲೆಮರೆಸಿಕೊಂಡಿದ್ದಾನೆ.

ಗಿರಿಯಪ್ಪ ನೀಡಿರುವ ದೂರಿನಲ್ಲಿ, "ನವೆಂಬರ್‌ 18ರಂದು ಹೆಗ್ಗೋಠಾರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಯುವಕನ ಮದುವೆಗೆ ಬಂದಿದ್ದ ಶಿವಮ್ಮ ಮಧ್ಯಾಹ್ನ ಊಟ ಮುಗಿಸಿ ಹೋಗುವಾಗ ಕೃಷ್ಣರಾಯ ದೇವಸ್ಥಾನದ ಬಳಿಯ ನೀರಿನ ಟ್ಯಾಂಕ್‌ಗೆ ಹೋಗಿ ನೀರು ಕುಡಿದಿದ್ದರು. ಇದನ್ನು ಗಮನಿಸಿದ ವೀರಶೈವ ಮುಖಂಡ ಮಹದೇವಪ್ಪ, "ನೀನು ಯಾವ ಜನಾಂಗದ ಮಹಿಳೆ?" ಎಂದು ಪ್ರಶ್ನಿಸಿದಾಗ, ಶಿವಮ್ಮ, ತಾನು ಪರಿಶಿಷ್ಟ ಜಾತಿ ಎಂದು ಹೇಳಿದ್ದಾರೆ. ಬಳಿಕ ಮಹದೇವಪ್ಪ, "ಇದು ವೀರಶೈವರಿಗೆ ಸೇರಿದ ನೀರಿನ ಟ್ಯಾಂಕ್. ನೀವು ದಲಿತರು. ಇಲ್ಲಿಗೆ ಬಂದು ನೀರು ಕುಡಿದು ನಮ್ಮ  ನೀರಿನ ಟ್ಯಾಂಕ್‌ಗಳನ್ನು ಮಲಿನ ಮಾಡಿದ್ದೀರಾ" ಎಂದು ಗಲಾಟೆ ಮಾಡಿ ಜಾತಿ ನಿಂದನೆ ಮಾಡಿದ್ದಾನೆ" ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಹೆಗ್ಗೋಠಾರ ಗ್ರಾಮದ ದಲಿತರಿಗೆ ದೇವಸ್ಥಾನ – ಹೊಟೇಲಿಗೂ ಪ್ರವೇಶ ನಿಷಿದ್ಧ!

ಎಲ್ಲ ಸಮುದಾಯದ ಮುಖಂಡರ ಸಭೆ

ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಮುಖಂಡರ ಜೊತೆಗೆ ಸಮಾಲೋಚನೆ ನಡೆಸಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್‌, ತಹಶೀಲ್ದಾರ್‌ ಐ ಇ ಬಸವರಾಜು, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180