ಚಾಮರಾಜನಗರ | ಪೊಲೀಸರ ಮೇಲೆ ಗಣೇಶೋತ್ಸವ ಸಂಘಟಕರಿಂದ ಹಲ್ಲೆ: ಐವರ ಬಂಧನ

Chamarajanagara
  • ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ, ಡಿಜೆ ಬಳಕೆ
  • 15 ಜನರ ಮೇಲೆ ಎಫ್ಐಆರ್ ದಾಖಲೆ

‘ಧ್ವನಿವರ್ಧಕ ಬಳಸಬೇಡಿ’ ಎಂದ ಪೊಲೀಸರ ಮೇಲೆ ಗಣೇಶೋತ್ಸವದ ಸಂಘಟಕರು ಕಲ್ಲು ತೂರಾಟ ನಡೆಸಿರುವ ಘಟನೆ ಚಾಮರಾಜನಗರದ ಉಪ್ಪಾರದಲ್ಲಿ ಭಾನುವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿಲಾಗಿದೆ.

ಹಲ್ಲೆಯಲ್ಲಿ ಸಬ್ಇನ್ಪೆಕ್ಟರ್ ಮಹದೇವ ಸೇರಿದಂತೆ ಮೂವರು ಪೊಲೀಸರಿಗೆ ತೀವ್ರ ಗಾಯಗಳಾಗಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ 15 ಜನರ ವಿರುದ್ಧ ಎಫ್ಐಆರ್ ದಾಖಲಿಸಿಲಾಗಿದೆ. ಮೂವರು ಪ್ರಮುಖ ಆರೋಪಿಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ. 

ಕೆ.ಟಿ ನಾಗಶೆಟ್ಟಿ ನೇತೃತ್ವದಲ್ಲಿ ಉಪ್ಪಾರ ಪೇಟೆಯ ಮಂಟೇಸ್ವಾಮಿ ದೇವಾಲಯದ ಬಳಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗಿತ್ತು. ಭಾನುವಾರ ರಾತ್ರಿ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಸರ್ಜನೆ ಸಂದರ್ಭ ಭದ್ರತೆ ಒದಗಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು. 

ರಾತ್ರಿ 10.30ರ ನಂತರವೂ ಗಣೇಶೋತ್ಸವ ಸಂಘಟಕರು ಜೋರಾಗಿ ಧ್ವನಿವರ್ಧಕ ಬಳಸಿ, ನೃತ್ಯ ಮಾಡುತ್ತಿದ್ದರು. ಇದನ್ನು ಗಮನಿಸಿದ ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಟೆಕ್ಟರ್ ಮಹದೇವ್, ಧ್ವನಿವರ್ಧಕವನ್ನು ಆಫ್‌ ಮಾಡುವಂತೆ ಮನವಿ ಮಾಡಿದ್ದಾರೆ. "ಸುಪ್ರಿಂಕೋರ್ಟ್ ನಿಯಮದ ಪ್ರಕಾರ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ, ಡಿಜೆ ಬಳಸುವಂತಿಲ್ಲ. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಸಲು ನಾವು ಅನುಮತಿ ನೀಡಿಲ್ಲ. ತಕ್ಷಣ ಧ್ವನಿವರ್ಧಕ ನಿಲ್ಲಿಸಿ" ಎಂದು ಸಂಘಟಕರಿಗೆ ಹೇಳಿದ್ದಾರೆ. ಇದರಿಂದ ಉದ್ರಿಕ್ತಗೊಂಡ ಸಂಘಟಕರು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಪಾಲಿಕೆ ಚುನಾವಣೆ ನಡೆದು ವರ್ಷ ಕಳೆದರೂ ಸಿಗದ ಅಧಿಕಾರ: ಸಮಸ್ಯೆಗಳಿಗಿಲ್ಲ ಪರಿಹಾರ

ಘಟನೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ ಐಎಸ್ಐ ಶಿವಶಂಕರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಪೊಲೀಸರ ಮನವಿಗೆ ಕೆ.ಟಿ ನಾಗಶೆಟ್ಟಿ ‘ಉಡಾಫೆ ಮಾಡಿದ್ದು, ನಾವು ಧ್ವನಿವರ್ಧಕ ಹೇಗಾದರೂ ಹಾಕಿಕೊಳ್ಳುತ್ತೇವೆ. ಅದನ್ನು ಕೇಳಲು ನೀವ್ಯಾರು. ಪೊಲೀಸರ ಮಾತಿಗೆ ಯಾರು ಕಿವಿಕೊಡಬೇಡಿ. ನೀವು ನೃತ್ಯ ಮಾಡುವುದನ್ನು ಮುಂದುವರಿಸಿ. ಮುಂದೆ ಏನಾದರೂ ನಾನು ನೋಡಿಕೊಳ್ಳುತ್ತೇನೆಂದು' ದರ್ಪ ಮರೆದಿದ್ದಾರೆ" ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

"ನಾಗಶೆಟ್ಟಿಯ ಮಗ ಮಹೇಂದ್ರ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹೀಗೆಲ್ಲ ನಡೆದುಕೊಂಡಿರುವುದರ ಬಗ್ಗೆ ಪ್ರಶ್ನಿಸಿದಾಗ ಸಬ್ ಇನ್ಪೆಕ್ಟರ್ ಮಹದೇವ್ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಅವರ ತಲೆಗೆ ಜೋರಾಗಿ ಪೆಟ್ಟಾಗಿದೆ. ಮಹೇಶ್, ನಾಗೇಶ್, ಮುರುಗೇಶ್, ರಮೇಶ್ ಸೇರಿದಂತೆ ಸುಮಾರು 15 ಜನರ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಕಲ್ಲು ತೂರಾಟದಲ್ಲಿ ನನಗೆ ಹಾಗೂ ನನ್ನ ಜೀಪು ಚಾಲಕ ಬಸವರಾಜ್ ಅವರಿಗೂ ಗಾಯಗಳಾಗಿವೆ” ಎಂದು ಪಿಎಸ್ಐ ಶಿವಶಂಕರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app