ಚಾಮರಾಜನಗರ | ಅರಣ್ಯ ಇಲಾಖೆಯಿಂದ ರೈತರಿಗೆ ಕಿರುಕುಳ: ನಿರಂತರ ಧರಣಿ ನಡೆಸುತ್ತಿರುವ ರೈತರು

  • ಕಳೆದ 16 ದಿನಗಳಿಂದ ನಡೆಯುತ್ತಿರುವ ಪ್ರತಿಭಟನಾ ಧರಣಿ
  • 4,000 ಎಕರೆ ಪ್ರದೇಶದಲ್ಲಿ ಬೇಸಾಯ ಮಾಡುತ್ತಿರುವ ರೈತರು

ಕಳೆದ 50-60 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡುತ್ತಿಲ್ಲ. ಅವರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಿರಿಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಮತ್ತು ಕೊಳ್ಳೆಗಾಲ ತಾಲೂಕಿನ ರೈತರು ಕೊಳ್ಳೆಗಾಲದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾಕಾರರು ಕಳೆದ 16 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. "ತಾಲೂಕಿನ ಕಾಡಂಚಿನ ರೈತರಿಗೆ ನಿರಂತರವಾಗಿ ಅರಣ್ಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರಿಗೆ ಸಾಗುವಳಿ ಪತ್ರ ನೀಡಬೇಕು" ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, "ಕೊಳ್ಳೇಗಾಲ ತಾಲೂಕಿನ ಪಾಳ್ಯ ಹೋಬಳಿಯ ಶಿಲುವೈಪುರ, ಸಿ.ಆರ್ ನಗರ, ಪಾಸ್ಕಲ್ ನಗರ, ರಾಶಿದೊಳಿ ತಾಂಡಾ, ಟಿ.ಜಿ ದೊಡ್ಡಿ (ಆಲದ ಮರದ ದೊಡ್ಡಿ) ಶಾಂತಿ ನಗರ (ಕರಾಚಿ ಕಟ್ಟೆ), ಹಳೇ ಕೋಟೆ, ಬೂದುಗಟ್ಟೆ ದೊಡ್ಡಿ - ಗ್ರಾಮಗಳು ಅರಣ್ಯ ಇಲಾಖೆ ವ್ಯಾಪ್ತಿಯ ಸತ್ತೇಗಾಲ ಸರ್ವೇ ನಂಬರ್ 174 ರಲ್ಲಿವೆ. ಇಲ್ಲಿನ ಗ್ರಾಮಗಳ ರೈತರು ಮತ್ತು ಗ್ರಾಮಸ್ಥರು ಲಂಬಾಣಿ, ಭೋವಿ, ಆದಿ ಕರ್ನಾಟಕ ಮತ್ತು ಅಲ್ಪ ಸಂಖ್ಯಾತ ವರ್ಗದ ಜನಾಂಗಕ್ಕೆ ಸೇರಿದವರಾಗಿರುತ್ತಾರೆ. 1970ರಲ್ಲಿ ಇನಾಂ ರದ್ದಿಯಾತಿ ಕಾಯಿದೆ ಜಾರಿಗೆ ತರುವ ಪೂರ್ವದಿಂದಲೂ ಇಲ್ಲಿಯೇ ವ್ಯವಸಾಯ ಮಾಡಿಕೊಂಡು ಬಂಡಿದ್ದಾರೆ. ಆದರೂ, ಅವರಿಗೆ ಸಾಗುವಳಿ ಪತ್ರ ನೀಡದೆ ಸರ್ಕಾರ ಕಡೆಗಣಿಸಿದೆ" ಎಂದು ಆರೋಪಿಸಿದ್ದಾರೆ. 

"ಅಲ್ಲದೆ, ಸದರಿ ಭೂಮಿಯನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುವ ಸಮಯದಲ್ಲು ಕೂಡ ಕೃಷಿ ಚಟುವಟಿಕೆ ನಡೆಸುತ್ತಿದ್ದ ರೈತರ ಗಮನಕ್ಕೆ ತರದೆ, ರೈತರ ಕುರಿತು ಸರ್ಕಾರಕ್ಕೆ ಮಾಹಿತಿ ನೀಡದೆ, ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಅನ್ಯಾಯ ಮಾಡಲಾಗಿದೆ" ಎಂದು ಅವರು ದೂರಿದ್ದಾರೆ. 

"1991-92ರಲ್ಲಿ ಬಗರ್ ಹುಕುಂ ಕಾಯಿದೆ ನಮೂನೆ 50-53ರಲ್ಲಿ ಸಾಗುವಳಿ ಕೋರಿ ಅರ್ಜಿ ಸಲ್ಲಿಸಲಾಗಿದೆ. 1992-93ರಲ್ಲಿ ಕಂದಾಯ ಇಲಾಖೆಯು ಸಾತ್ತೆಗಾಲ ಜಾಗೀರಿ ಸರ್ವೇ ನಂಬರ್ 174 ರಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ಜಮೀನನ್ನು ಸರ್ವೇ ಮಾಡಿ ನಕ್ಷೆಯನ್ನು ತಯಾರಿಸಿದೆ. ಆದರೆ, ಇದುವರೆಗೂ ಕೂಡ ನಮಗೆ ಸಾಗುವಳಿ ಪತ್ರ ಕೊಟ್ಟಿಲ್ಲ. ಸರ್ವೇ ನಂಬರ್ 174ರಲ್ಲಿ 12,760 ಎಕರೆ ಪೈಕಿ ಸುಮಾರು 4,000 ಎಕರೆ ಪ್ರದೇಶದಲ್ಲಿ ರೈತರು 50 ರಿಂದ 65 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ" ಎಂದು ಅವರು ವಿವರಿಸಿದ್ದಾರೆ. 

"ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. 12,760 ಎಕರೆ ಪೈಕಿ 945 ಎಕರೆ ಜಮೀನನ್ನು ಮೀಸಲು ಅರಣ್ಯ ಪ್ರದೇಶ ಮಾಡಿರುವುದಾಗಿ ತಿಳಿಸಿದ್ದಾರೆ. ರೈತರ ಒಂದು ಸಾವಿರ ಎಕರೆ ಕೃಷಿ ಭೂಮಿಯನ್ನು ಕಸಿದುಕೊಂಡಿದ್ದಾರೆ" ಎಂದು ಕಡಿಕಾರಿದ್ದಾರೆ. 

"ಇಲಾಖೆಯವರು ಕಸಿದುಕೊಂಡಿರುವ ಭೂಮಿಯಲ್ಲಿ ರೈತರು ಕೃಷಿ ಮಾಡಲು ಬಿಡದೆ, ಅರಣ್ಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಕಳೆದ ಎರೆಡುವರೆ ವರ್ಷಗಳಿಂದ ಬೂದಕಟ್ಟೆ ದೊಡ್ಡಿಯ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಜನಾಂಗದ ರೈತರು ವ್ಯವಸಾಯ ಮಾಡುತ್ತಿದ್ದ ಭೂಮಿಯನ್ನು ಬಲವಂತವಾಗಿ ದೌರ್ಜನ್ಯದಿಂದ ಕಸಿದುಕೊಂಡು ರೈತರನ್ನು ಬೀದಿ ಪಾಲು ಮಾಡಿದ್ದಾರೆ" ಎಂದು ಆಕ್ರೋಶ ನಾಗೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯವರು ಕಸಿದುಕೊಂಡ ಭೂಮಿಯನ್ನು ವಾಪಸ್ ನೀಡುವಂತೆ ಕಳೆದ 16 ದಿನಗಳಿಂದ (01/08/2022) ಸತತವಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ತಕ್ಷಣವೇ ಸ್ಪಂದಿಸಿ 50 ರಿಂದ 65 ವರ್ಷಗಳಿಂದ ವಾಸ ಮಾಡಿಕೊಂಡು ಬಂದಿರುವ ಗ್ರಾಮಸ್ಥರು-ರೈತರನ್ನು ಭೇಟಿ ಮಾಡಿ, ನೈಜ ಪರಿಸ್ಥಿತಿಯನ್ನು ಅವಲೋಕಿಸಿ ವ್ಯವಸಾಯದ ಭೂಮಿಯನ್ನು ವೀಕ್ಷಿಸಿ, ಪರಿಶೀಲನೆ ನಡೆಸಬೇಕು. ಗಡಿ ರೇಖೆಯನ್ನು ಪುನರ್ ಪರಿಶೀಲನೆ ಮಾಡಿ ರೈತರ ಭೂಮಿಯನ್ನು ಬಿಟ್ಟು ಉಳಿದ ಪ್ರದೇಶವನ್ನು ಅರಣ್ಯ ಗಡಿರೇಖೆ ಪ್ರದೇಶವನ್ನಾಗಿ ಗುರುತಿಸಬೇಕು. ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರವನ್ನು ತಕ್ಷಣವೇ ಕಲ್ಪಿಸಬೇಕು" ಎಂದು ಅವರು ಒತ್ತಾಯಿಸಿದರು. 

ರೈತ ಸಂಘದ ಯುವ ಮುಖಂಡ ಪ್ರಸನ್ನ ಏನ್ ಗೌಡ ಮಾತನಾಡಿ, "ಧರಣಿ ನಿರತರ ಮೇಲೆ ಕೇಸ್ ದಾಖಲು ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಸಾಕಷ್ಟು ಎದುರಿಸಿದ್ದೇವೆ. ಇದಕ್ಕೆಲ್ಲ ನಾವು ಬಗ್ಗುವುದಿಲ್ಲ. ಕೇಸ್ ಹಾಕಿ ಜೈಲು ಕಳಿಸಿದ್ರೆ ಅಲ್ಲೇ ಚಳುವಳಿ ಮಾಡ್ತೀವಿ" ಎಂದು ಗುಡುಗಿದರು.

ಧರಣಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಮಹೇಶ್ ಪ್ರಭು, ಶ್ಯಾಮ್ ಸೇರಿದಂತೆ ಸುಮಾರು 800ಕ್ಕೂ ಹೆಚ್ಚು ರೈತ-ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್