ಚಾಮರಾಜನಗರ | ವಸತಿ ನಿಲಯಗಳಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ, ಪರಿಶೀಲನೆ

Chamarajanagara
  • ವಿದ್ಯಾರ್ಥಿನಿಯರ ಜೊತೆ ಸಮಾಲೋಚನೆ ನಡೆಸಿದ ನ್ಯಾಯಮೂರ್ತಿ
  • ವಸತಿ ನಿಲಯದ ವ್ಯವಸ್ಥೆ ಬಗ್ಗೆ ಪರಿಶೀಲನೆ

ಚಾಮರಾಜನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಕ್ಕೆ ರಾಜ್ಯದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೆಟ್ರಿಕ್‌ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯಕ್ಕೂ ಭೇಟಿ ನೀಡಿ, ವಿದ್ಯಾರ್ಥಿನಿಯರ ಜೊತೆ ಸಮಾಲೋಚನೆ ನಡೆಸಿದ್ದಾರೆ. ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಆಹಾರ, ಕುಡಿಯುವ ನೀರಿನ ವ್ಯವಸ್ಥೆಗಳ ಕುರಿತು ಚರ್ಚಿಸಿದ್ದಾರೆ. 

ವಸತಿ ನಿಲಯದಲ್ಲಿ ಕೋಣೆಗಳ ಸಂಖ್ಯೆ ಕಡಿಮೆಯಿದ್ದು, ಒಂದೇ ಕೋಣೆಯಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಇರಬೇಕಾಗಿರುವ ಪರಿಸ್ಥಿತಿಯನ್ನು ಗಮನಿಸಿದ ನ್ಯಾಯಮೂರ್ತಿಗಳು, ಕೋಣೆಗಳನ್ನು ವಿಸ್ತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವಸತಿ ನಿಲಯದಲ್ಲಿ ಶೌಚಾಲಯಗಳ ಸಮಸ್ಯೆ ಇರುವುದನ್ನು ವಿದ್ಯಾರ್ಥಿನಿಯರು ಲೋಕಾಯುಕ್ತ ನ್ಯಾಯಮೂರ್ತಿಗಳ ಗಮನಕ್ಕೆ ತಂದಿದ್ದಾರೆ.

ವೃತ್ತಿಪರ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ನಿಲಯವಿದೆ. ಅಲ್ಲಿಗೆ ಕೆಲವು ವಿದ್ಯಾರ್ಥಿನಿಯರನ್ನು ಸ್ಥಳಾಂತರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದ್ದಾರೆ. 15 ದಿನದೊಳಗೆ ಸ್ಥಳಾಂತರ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚಿಕ್ಕಮಗಳೂರು | ನಾಲ್ಕು ಚಕ್ರದ ವಾಹನವಿದ್ದ ಕಾರಣಕ್ಕೆ ಪಡಿತರ ಚೀಟಿ ವಜಾ: ಖಂಡನೆ

ವಸತಿ ನಿಲಯದ ಅಡುಗೆ ಕೋಣೆಯನ್ನೂ ಪರಿಶೀಲಿಸಿದ ಅವರು, ಆಹಾರ ತಯಾರಿಸುವಾಗ ಯಾವೆಲ್ಲ ಶುಚಿತ್ವ ಕ್ರಮಗಳನ್ನು ಪಾಲಿಸಲಾಗುತ್ತದೆ. ಎಷ್ಟು ಪೋಷಕಾಂಶಯುಕ್ತ ಆಹಾರ ನೀಡಲಾಗುತ್ತಿದೆ ಎಂಬುದರ ಕುರಿತು ವಿಚಾರಿಸಿದ್ದಾರೆ.

ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೂ ಭೇಟಿ ನೀಡಿದ ನ್ಯಾಯಮೂರ್ತಿಗಳು, ವಿದ್ಯಾರ್ಥಿನಿಯರ ಬಳಿ ಸಮಾಲೋಚನೆ ನಡೆಸಿ ಕುಂದುಕೊರತೆಗಳ ಬಗ್ಗೆ ಆಲಿಸಿದ್ದಾರೆ. ಸ್ಯಾನಿಟರಿ ಪ್ಯಾಡ್‌ಗಳನ್ನು ಹಂಚುವ ಹಾಗೂ ವಿಲೇವಾರಿ ಮಾಡುವ ಬಗ್ಗೆ ಗಮನ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ನಂತರ ವಿದ್ಯಾರ್ಥಿನಿಯರಿಗೆ ನೀಡುವ ಆಹಾರ ಪದಾರ್ಥವನ್ನು ಪರೀಕ್ಷಿಸಿದರು. ಅಡುಗೆ ಕೋಣೆಯಲ್ಲಿ ಶೇಖರಿಸಿಟ್ಟಿದ್ದ ಅಕ್ಕಿ, ಬೇಳೆ ಇನ್ನಿತರ ಪದಾರ್ಥಗಳನ್ನು ಪರಿಶೀಲನೆ ಮಾಡಿದ್ದಾರೆ.

ಲೋಕಾಯುಕ್ತ ನ್ಯಾಯಾಧೀಶರಾದ ಚೆನ್ನಕೇಶವರೆಡ್ಡಿ ಮುಕ್ತಿಯಾರ್, ಮೈಸೂರು ವಿಭಾಗದ ಕರ್ನಾಟಕ ಲೋಕಾಯುಕ್ತ ಎಸ್‌ಪಿ ಎಸ್ ಸುರೇಶ್ ಬಾಬು, ಲೋಕಾಯುಕ್ತ ಡಿವೈಎಸ್.ಪಿ ಕೃಷ್ಣಯ್ಯ ಒಡೆಯರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಮತ್ತಿತ್ತರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್