
- ಅಂಬೇಡ್ಕರ್ ಬೌದ್ಧ ಧರ್ಮದ ದೀಕ್ಷೆ ಪಡೆದ ಸ್ಥಳ
- ಸಮಾಜ ಕಲ್ಯಾಣ ಇಲಾಖೆಯಿಂದ ಬಸ್ ವ್ಯವಸ್ಥೆ
ಡಾ ಬಿ ಆರ್ ಅಂಬೇಡ್ಕರ್ ಬೌದ್ಧ ಧರ್ಮದ ದೀಕ್ಷೆ ಪಡೆದ ಮಹಾರಾಷ್ಟ್ರದ ನಾಗ್ಪುರ ‘ದೀಕ್ಷಾ ಭೂಮಿ’ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳ ಬಸ್ಸುಗಳಿಗೆ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಚಾಲನೆ ನೀಡಿದರು.
‘ನಾಗಪುರ ದೀಕ್ಷಾ ಭೂಮಿ’ ಯಾತ್ರೆಯನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದು, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ, ಅಂಬೇಡ್ಕರ್ ತತ್ವ ಸಿದ್ಧಾಂತಗಳ ಬಗ್ಗೆ ತಿಳುವಳಿಕೆಯಿರುವ ವ್ಯಕ್ತಿಗಳನ್ನು ಈ ಯಾತ್ರೆಗೆ ಆಯ್ಕೆ ಮಾಡಲಾಗಿದೆ. ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರಾ ಬಸ್ಗಳಿಗೆ ಚಾಲನೆ ನೀಡಲಾಯಿತು.
ಮಹಾರಾಷ್ಟ್ರದ ನಾಗ್ಪುರದಲ್ಲಿ ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮದ ದೀಕ್ಷೆ ಪಡೆದಿದ್ದರು. ಆದ್ದರಿಂದಲೇ ಈ ಭೂಮಿಯನ್ನು ‘ದೀಕ್ಷಾ ಭೂಮಿ’ ಎಂದು ಕರೆಯಲಾಗಿದೆ. ಇದು ಭಾರತದ ಬೌದ್ಧ ಧರ್ಮದ ಯಾತ್ರಾ ಕೇಂದ್ರವಾಗಿ ಪರಿಗಣಿಸಲ್ಪಟ್ಟಿದೆ. ಅಕ್ಟೋಬರ್ 2ನೇ ವಾರ ನಡೆಯುವ ‘ಧಮ್ಮ ಪ್ರವರ್ತನಾ ದಿನ’ ಕಾರ್ಯಕ್ರಮಕ್ಕೆ ದೇಶದ ನಾನಾ ರಾಜ್ಯಗಳಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಾರೆ. ಕರ್ನಾಟಕದಿಂದಲೂ ಬಹಳಷ್ಟು ಜನರು ಭಾಗವಹಿಸುತ್ತಾರೆ.
ಈ ಸುದ್ದಿ ಓದಿದ್ದೀರಾ?: ಚಿಕ್ಕಬಳ್ಳಾಪುರ | ದಲಿತ ಯುವಕನ ಜತೆ ಮಗಳು ನಾಪತ್ತೆ: ಮನನೊಂದು ಯುವತಿಯ ಪಾಲಕರು ಆತ್ಮಹತ್ಯೆ
2014ರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಾಗಪುರಕ್ಕೆ ಭೇಟಿ ಮಾಡಲು ಅನುಕೂಲವಾಗುವಂತೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರೈಲು ಅಥವಾ ಬಸ್ಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಸಂಚಾರಕ್ಕೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, “ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಹಾರಾಷ್ಟ್ರದ ನಾಗ್ಪುರದ ದೀಕ್ಷಾ ಭೂಮಿ ಯಾತ್ರೆಗೆ ತೆರಳಲು ಅಂಬೇಡ್ಕರ್ ಅನುಯಾಯಿಗಳಿಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶಿಸಿತ್ತು. ಈ ಪ್ರಕಾರ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಿದ್ದು, 267 ಅರ್ಜಿ ಸಲ್ಲಿಕೆಯಾಗಿದೆ. ಈ ಪೈಕಿ 243 ಮಂದಿಯನ್ನು ಕಳುಹಿಸಿಕೊಡಲಾಗಿದೆ. ಸರ್ಕಾರದ ವತಿಯಿಂದ ಯಾತ್ರೆಗೆ ಅನುದಾನ ನೀಡಲಾಗಿದೆ” ಎಂದರು.
ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ದಲಿತ ಸಂಘಟನೆಗಳ ಮುಖಂಡರಾದ ಕೆ.ಎಂ.ನಾಗರಾಜು, ಸಿ.ಎಂ.ಕೃಷ್ಣಮೂರ್ತಿ, ಸುಭಾಷ್ ಮಾಡ್ರಳ್ಳಿ ಮತ್ತಿತರರಿದ್ದರು.