ಚಾಮರಾಜನಗರ | ಶಾಲೆಯ ಹೆಸರು ಬದಲಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

  • 30 ವರ್ಷಗಳ ಹಿಂದೆ ಸ್ಥಳಾಂತರಗೊಂಡಿದ್ದ ಶಾಲೆ
  • ಗುರುತಿನ ಪ್ರಶ್ನೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು

ಶಾಲೆಯ ಹೆಸರು ಬದಲಾಯಿಸುವಂತೆ ಒತ್ತಾಯಿಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. 

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಬಗೆರೆ ಹೊಸದೊಡ್ಡಿ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಗುರುವಾರ, ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯ ಹೊರಗಿದ್ದ ಫಲಕವನ್ನು ಬದಲಾಯಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. 

ಶಾಲೆಯಲ್ಲಿ 1 ಮತ್ತು 5 ನೇ ತರಗತಿಯ ನಡುವೆ ಓದುತ್ತಿರುವ ಒಟ್ಟು 11 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರಿದ್ದಾರೆ.

ಸ್ಥಳೀಯರ ಪ್ರಕಾರ, ದಾಖಲಾತಿ ಕಳಪೆಯಾಗಿದೆ ಎಂಬ ಕಾರಣಕ್ಕಾಗಿ 30 ವರ್ಷಗಳ ಹಿಂದೆ ಶಾಲೆಯನ್ನು ಮೈಸೂರಪ್ಪನ ದೊಡ್ಡಿಯಿಂದ ಅರಬಗೆರೆ ಹೊಸದೊಡ್ಡಿಗೆ ಸ್ಥಳಾಂತರಿಸಲಾಗಿತ್ತು. ಮೈಸೂರಪ್ಪನ ದೊಡ್ಡಿ ಮತ್ತು ಅರಬಗೆರೆ ಹೊಸದೊಡ್ಡಿ ನಡುವಿನ ಅಂತರ 2.5 ಕಿ.ಮೀ. ಇದ್ದು, ಶಾಲೆ ಸ್ಥಳಾಂತರಗೊಂಡರೂ ಮೈಸೂರಪ್ಪನ ದೊಡ್ಡಿ ಶಾಲೆ ಎಂದು ಹೆಸರು ಮುಂದುವರೆಸಲಾಗಿತ್ತು. ಗ್ರಾಮಸ್ಥರ ಪ್ರಯತ್ನ ಫಲ ನೀಡದ ಕಾರಣ ವಿದ್ಯಾರ್ಥಿಗಳು ಜೂನ್ 2ರಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಆರಂಭಿಸಿದ್ದರು.

ಇದೀಗ, ಶಾಲೆಯ ಫಲಕದಲ್ಲಿ ಹೆಸರು ಬದಲಿಸಲಾಗಿದೆ. ಆದರೂ, ಶಿಕ್ಷಣ ಮತ್ತು ಕಂದಾಯ ಇಲಾಖೆ ದಾಖಲೆಗಳಲ್ಲಿಯೂ ಹೆಸರು ಬದಲಾವಣೆಗಾಗಿ ಒತ್ತಾಯಿಸಲು ಹಾಗೂ ಮುಂದಿನ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಶುಕ್ರವಾರ ಸಭೆ ಕರೆದಿದ್ದಾರೆ. 

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಸ್ಥಳೀಯ ಅರಣ್ಯ ಸಮಿತಿ ಅಧ್ಯಕ್ಷ ಎನ್ ಕೃಷ್ಣಮೂರ್ತಿಅವರು 30 ವರ್ಷಗಳ ಹಿಂದೆ ಶಾಲೆಯನ್ನು ಸ್ಥಳಾಂತರಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. “ಮೈಸೂರಪ್ಪನ ದೊಡ್ಡಿಯ ಯಾವ ಮಕ್ಕಳೂ ಈ ಶಾಲೆಯಲ್ಲಿ ದಾಖಲಾತಿ ಪಡೆದಿಲ್ಲ. ಈ ಶಾಲೆ ಅರಬಗೆರೆ ಹೊಸದೊಡ್ಡಿ ಗ್ರಾಮದಲ್ಲಿದೆ ಎಂದು ಕಂದಾಯ ದಾಖಲೆಗಳು ಸ್ಪಷ್ಟವಾಗಿವೆ. ಆದರೂ ಅಧಿಕಾರಿಗಳು ಶಾಲೆಯ ಹೆಸರನ್ನು ಬದಲಾಯಿಸಿಲ್ಲ,’’ ಎಂದು ವಿವರಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಹಿಜಾಬ್ ವಿವಾದ | ಆರು ವಿದ್ಯಾರ್ಥಿನಿಯರ ಅಮಾನತು ಹಿಂಪಡೆದ ಮಂಗಳೂರು ಕಾಲೇಜು

"ಇದು ಗುರುತಿನ ಪ್ರಶ್ನೆಯಾಗಿದೆ. ಅದಕ್ಕಾಗಿ ನಾವು ಶಾಲೆಯ ಹೆಸರನ್ನು ಬದಲಾಯಿಸಲು ಬಯಸುತ್ತೇವೆ" ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಚಾಮರಾಜನಗರ ಡಿಡಿಪಿಐ ಎಸ್.ಎನ್ ಮಂಜುನಾಥ್ ಅವರು ಬ್ಲಾಕ್ ಶಿಕ್ಷಣಾಧಿಕಾರಿಗಳೊಂದಿಗೆ ವಿದ್ಯಾರ್ಥಿಗಳು ಸಭೆ ನಡೆಸಿದ ಬಳಿಕ, ತರಗತಿಗಳಿಗೆ ಹಾಜರಾಗಲು ಆರಂಭಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app