
- ಕೋಳಿ ತಲೆ ಮತ್ತು ಕೋಳಿ ಮೊಟ್ಟೆಯನ್ನು ಹುತ್ತಕ್ಕೆ ಹಾಕಿ ನಾಗಾರಾಧನೆ
- ಕೊಯ್ದ ಕೋಳಿಯಿಂದ ಅಡುಗೆ ಮಾಡಿ, ಎಡೆ ಮಾಡುವ ಸಂಪ್ರದಾಯ
ಸುಬ್ರಹ್ಮಣ್ಯ ಷಷ್ಠಿ ಹಬ್ಬದ ದಿನ ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡುವುದು ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಹುತ್ತಕ್ಕೆ ಕೋಳಿ ಬಲಿ ನೀಡಿ, ರಕ್ತ ಎರೆದು ಕೋಳಿ ಮೊಟ್ಟೆ ಹಾಕಿ ವಿಭಿನ್ನ ರೀತಿಯಲ್ಲಿ ನಾಗಾರಾಧನೆ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ.
ಮಲ್ಲಯ್ಯನಪುರ ಗ್ರಾಮದಲ್ಲಿ ಷಷ್ಠಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಕೂಡ ಹುತ್ತದ ಮುಂದೆ ಕೋಳಿ ಕೊಯ್ದು, ರಕ್ತವನ್ನು ಹುತ್ತಕ್ಕೆ ಎರೆಯಲಾಯಿತು. ಕೋಳಿ ತಲೆ ಮತ್ತು ಕೋಳಿ ಮೊಟ್ಟೆಯನ್ನು ಹುತ್ತಕ್ಕೆ ಹಾಕಿ ನಾಗಾರಾಧನೆ ಮಾಡಿದರು.
ಷಷ್ಠಿ ಹಬ್ಬದ ದಿನ ಮನೆ ಮಂದಿಯೆಲ್ಲಾ ಸ್ನಾನಮಾಡಿ ಮಾಡಿ, ಒಂದು ಹೊತ್ತು ಉಪವಾಸ ಇರುತ್ತಾರೆ. ನಂತರ ಹುತ್ತಕ್ಕೆ ಕೋಳಿ ರಕ್ತ ಎರೆದು ಕೋಳಿಮೊಟ್ಟೆ ಮತ್ತು ಕೋಳಿಯ ತಲೆಯನ್ನು ಹಾಕಿ ಪೂಜೆ ಮಾಡುತ್ತಾರೆ.
'ಹುತ್ತಕ್ಕೆ ಕೋಳಿ ರಕ್ತ ಎರೆದು ಕೋಳಿಮೊಟ್ಟೆ ಹಾಕಿ ನಾಗಪೂಜೆ ಮಾಡಿದರೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾವುಗಳು ತಮಗೆ ಕಾಣಿಸುವುದಿಲ್ಲ ಮತ್ತು ಅವುಗಳಿಂದ ತಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ' ಎಂಬುದು ಅಲ್ಲಿನ ಜನರ ನಂಬಿಕೆ.

ಮಲ್ಲಯ್ಯನಪುರ ಗ್ರಾಮದ ಗೃಹಿಣಿ ಭಾಗ್ಯ, ಸುದ್ದಿಗಾರರೊಂದಿಗೆ ಮಾತನಾಡಿ, “ಹೊಲ, ಜಮೀನಲ್ಲಿ ತಿರುಗಾಡುವಾಗ ಮತ್ತು ಮನೆ ಹತ್ತಿರ ಹಾವುಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ದೇವರಲ್ಲಿ ನಾವು ಹರಕೆ ಮಾಡಿಕೊಳ್ಳುತ್ತೇವೆ. ಅದರಂತೆ ಷಷ್ಠಿ ಹಬ್ಬದ ದಿನ ಒಂದು ಹೊತ್ತು ಉಪವಾಸ ಇದ್ದು, ಪೂಜೆ ಮಾಡಿ ಹುತ್ತಕ್ಕೆ ಕೋಳಿ ಬಲಿ ಕೊಡುತ್ತೇವೆ. ಜೊತೆಗೆ ಹಾಲು, ಮೊಟ್ಟೆ, ಸಕ್ಕರೆಯನ್ನು ಎರೆಯುತ್ತೇವೆ. ಕೊಳಿ ಕೊಯ್ದು ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಅಡುಗೆ ಮಾಡಿ ಎಡೆ ಮಾಡುತ್ತೇವೆ” ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಎಸ್ಟಿ/ಎಸ್ಸಿ ಸಮುದಾಯಕ್ಕೆ ಸಿಎಂ ಗಾದಿ: ಮಠಾಧೀಶರ ಒತ್ತಾಯ
“ತಲೆತಲಾಂತಗಳಿಂದಲೂ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಹಾವು ಕಾಣಿಸಿಕೊಂಡಾಗ ಹರಕೆ ಮಾಡಿಕೊಳ್ಳುತ್ತೇವೆ. ಈ ರೀತಿ ಮಾಡುವುದರಿಂದ ನಮಗೆ ಹಾವುಗಳು ಕಾಣಿಸಿಕೊಳ್ಳುವುದಿಲ್ಲ” ಎಂದಿದ್ದಾರೆ.