ಚಾಮರಾಜನಗರ | ಬುಡಕಟ್ಟು ಜನರಿಗೆ ಉದ್ಯೋಗ ನೀಡಿದ ಕಾಡಿನ ಕಳೆ ‘ಲಂಟಾನ'

Chamarajanagara
  • ಅರಣ್ಯಕ್ಕೆ ಅಪಾಯಕಾರಿಯಾದ ಲಂಟಾನ ಕಳೆ
  • ಲಂಟಾನ ಗಿಡದಿಂದ ಹಲವು ಬಗೆಯ ಪೀಠೋಪಕರಣ ತಯಾರಿ

ಕಾಡಿನ ಕಳೆ ಎಂದೇ ಹೆಸರುವಾಸಿಯಾದ ‘ಲಂಟಾನಾ’ ಗಿಡದಿಂದ ಪೀಠೋಪಕರಣ ತಯಾರಿಸುವ ವಿನೂತನ ಪ್ರಯೋಗಕ್ಕೆ ಅರಣ್ಯ ಇಲಾಖೆ ಕೈ ಹಾಕಿದೆ. ಇದಕ್ಕಾಗಿ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ (ಬಿಆರ್‍‌ಟಿ) ಪ್ರದೇಶದಲ್ಲಿ ವಾಸಿಸುತ್ತಿರುವ ಸೋಲಿಗ ಸಮುದಾಯದ 45 ಜನರಿಗೆ ತರಬೇತಿ ನೀಡಲು ನಿರ್ಧರಿಸಿದೆ.

"ಮಹಿಳೆಯರು ಸೇರಿದಂತೆ 45 ಬುಡಕಟ್ಟು ಸದಸ್ಯರನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಬುಟ್ಟಿಗಳು, ಪೆಟ್ಟಿಗೆಗಳು, ಪುಸ್ತಕದ ಕಪಾಟುಗಳು, ಸೋಫಾ ಸೆಟ್‌ಗಳು, ಟೇಬಲ್‌ಗಳು, ಪಾದರಕ್ಷೆಗಳ ಸ್ಟ್ಯಾಂಡ್‌ಗಳು ಹಾಗೂ ಹೂವಿನ ಬುಟ್ಟಿಗಳನ್ನು ಲಂಟಾನ ಬಳಸಿ ತಯಾರಿಸಲು ತರಬೇತಿ ನೀಡಲಾಗುತ್ತಿದೆ" ಎಂದು ಅರಣ್ಯ ಇಲಾಖೆ ತಿಳಿಸಿದೆ.

"ಕರಕುಶಲ ತಜ್ಞ ಪಾಪಣ್ಣ ಅವರನ್ನು ತರಬೇತಿ ನೀಡಲು ಇಲಾಖೆ ನೇಮಿಸಲಾಗಿದೆ. ಚಾಮರಾಜನಗರ ತಾಲೂಕಿನ ಮೀಸಲು ಅರಣ್ಯ ಪ್ರದೇಶದಲ್ಲಿರುವ ಕುಗ್ರಾಮ ‘ಬೆಲ್ಲಟ’ದಲ್ಲಿ ಪೀಠೋಪಕರಣ ತಯಾರಿಕಾ ತರಬೇತಿಯನ್ನು ಪ್ರಾರಂಭಿಸಲಾಗಿದೆ" ಎಂದು ಇಲಾಖೆ ಹೇಳಿದೆ.

“ಪೀಠೋಪಕರಣಗಳನ್ನು ‘ಟ್ರೈಬಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ’ (ಟಿಆರ್‌ಐಎಫ್‌ಇಡಿ) ಸಹಕಾರದೊಂದಿಗೆ ಬೆಂಗಳೂರು ಮತ್ತು ಇತರ ನಗರಗಳ ಮಾಲ್‌ಗಳಲ್ಲಿ ಮಾರಾಟ ಮಾಡಲಾಗುವುದು” ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಹೇಳಿರುವುದಾಗಿ ‘ಟೈಮ್ಸ್‌ ಆಫ್‌ ಇಂಡಿಯಾ’ ಉಲ್ಲೇಖಿಸಿದೆ.

ಈ ಸುದ್ದಿ ಓದಿದ್ದೀರಾ?: ಉತ್ತರ ಕನ್ನಡ | ಹೊಸ ಪ್ರಭೇದದ ಏಡಿಗೆ ‘ಘಟಿಯಾನ ದ್ವಿವರ್ಣ’ ಎಂದು ನಾಮಕರಣ

“ಈ ತರಬೇತಿಯು ಸ್ಥಳೀಯ ಆದಿವಾಸಿಗಳಿಗೆ ಉದ್ಯೋಗ ಅವಕಾಶ ನೀಡಲು ಸಹಾಯವಾಗಿದೆ. ಅರಣ್ಯ ಇಲಾಖೆಯಿಂದ ತರಬೇತಿಯಲ್ಲಿರುವವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಜೊತೆಗೆ ಪೀಠೋಪಕರಣಗಳ ಮಾರಾಟ ಮಾಡಿ ಗಳಿಸುವ ಲಾಭದಲ್ಲಿ ಅವರಿಗೂ ಪಾಲು ನೀಡಲಾಗುತ್ತದೆ” ಎಂದು ಹೇಳಿದ್ದಾರೆ.

“ಲಂಟಾನ ಗಿಡವು ಅರಣ್ಯಕ್ಕೆ ಅಪಾಯಕಾರಿಯಾಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿರುವ ಎಲ್ಲ ಬುಡಕಟ್ಟು ಗ್ರಾಮಗಳ ಜನರಿಗೂ ಈ ತರಬೇತಿ ನೀಡಬೇಕು. ಕಳೆ ನಿರ್ಮೂಲನೆಯ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ” ಎಂದು ಚಾಮರಾಜನಗರ ಸೋಲಿಗ ಗಿರಿಜನ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಸಿ ಮಹದೇವ ಹೇಳಿದ್ದಾರೆ.

ಅರಣ್ಯಕ್ಕೆ ಅಪಾಯಕಾರಿ ಕಳೆ ಲಂಟಾನ

Image
Lantana

ವಿಶ್ವದ ಹತ್ತು ಅತ್ಯಂತ ಆಕ್ರಮಣಕಾರಿ ಸಸಿ ಪ್ರಭೇದಗಳಲ್ಲಿ ‘ಲಂಟಾನಾ’ ಕೂಡ ಒಂದು. ಬಿಆರ್‍‌ಟಿ ಹುಲಿ ಸಂರಕ್ಷಿತ ಪ್ರದೇಶದ ಶೇಕಡ 40ರಷ್ಟು ಪ್ರದೇಶವನ್ನು ಈ ಗಿಡಗಳು ಆಕ್ರಮಿಸಿಕೊಂಡಿದೆ. ಇವುಗಳಿಂದ ಇತರ ಗಿಡಗಳಿಗೆ ತೊಂದರೆಯಾಗುತ್ತಿದ್ದು, ಇವುಗಳನ್ನು ನಿರ್ಮೂಲನೆ ಮಾಡುವುದೇ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ.

ಲಂಟಾನ ಕಳೆಯು ಅರಣ್ಯದಲ್ಲಿ ಹೆಚ್ಚು ಜಾಗವನ್ನು ಆಕ್ರಮಿಸುತ್ತದೆ. ಮಣ್ಣಿನ ಗುಣವನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. ಕಾಡು ಪ್ರಾಣಿಗಳಿಗೆ ಈ ಗಿಡವು ವಿಷಕಾರಿಯಾಗಿದೆ. ಇತರ ಮೇವಿನ ಗಿಡಗಳ ಜಾಗವನ್ನು ಲಂಟಾನ ಆವರಿಸಿರುವುದರಿಂದ ಕಾಡು ಪ್ರಾಣಿಗಳಿಗೆ ಮೇವಿನ ಕೊರತೆ ಉಂಟಾಗುತ್ತದೆ. ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಹರಡಲೂ ಇವುಗಳು ಕಾರಣವಾಗುತ್ತದೆ.

ಈ ಅಪಾಯಗಳನ್ನು ಮನಗಂಡ ಅರಣ್ಯ ಇಲಾಖೆ, ಬಿಳಿಗಿರಿ ರಂಗನಾಥ ಅರಣ್ಯ ಪ್ರದೇಶದ 20,000 ಹೆಕ್ಟೇರ್‌ಗಳಲ್ಲಿ ಹರಡಿರುವ ಕಳೆಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. ಸ್ಥಳೀಯ ಬುಡಕಟ್ಟು ಜನರ ಜೀವನೋಪಾಯಕ್ಕಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಈ ಗಿಡಗಳನ್ನು ಬಳಸಿಕೊಳ್ಳಲು ಮುಂದಾಗಿದೆ.

ಅರಣ್ಯ ಪ್ರದೇಶದಲ್ಲಿ ಈ ಕಳೆ ತೆಗೆಯಲು ಅರಣ್ಯ ಇಲಾಖೆ ಸರ್ಕಾರೇತರ ಸಂಸ್ಥೆಗೆ (ಎನ್‌ಜಿಓ) ಟೆಂಡರ್ ನೀಡಿದೆ. ಎನ್‌ಜಿಒ ಕಿತ್ತುಹಾಕಿದ ಲಂಟಾನಾವನ್ನು ಕಟ್ಟುಗಳನ್ನಾಗಿ ಮಾಡಿ ನಂತರ ಕುದಿಸಿ ಅದರ ತೊಗಟೆಯನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ ಎಂದು ಅರಣ್ಯ ಅಧಿಕಾರಿ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180