ಈದ್ಗಾ ವಿವಾದ| ಹುಬ್ಬಳ್ಳಿಯ ಹಾದಿ ಹಿಡಿಯುತ್ತಿದೆಯೇ ಬೆಂಗಳೂರು ಚಾಮರಾಜಪೇಟೆ ಮೈದಾನ ವಿವಾದ!

  • ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು: ಆರ್ ಅಶೋಕ
  • 1952ರಲ್ಲಿ ಪ್ರಾರಂಭವಾದ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಮೈದಾನದ ಮಾಲೀಕ ತಾನೇ, ಅದು ಇನ್ಯಾರಿಗೂ ಸೇರಿಲ್ಲ ಎಂದು ಸ್ವತಃ ಸರ್ಕಾರವೇ ಹೇಳಿದ ಮೇಲೆಯೂ ವಿವಾದ ತಣ್ಣಗಾಗಿಲ್ಲ.

ಚಾಮರಾಜನಗರ ಈದ್ಗಾ ಮೈದಾನದ ವಿವಾದ ಸಾಗುತ್ತಿರುವ ಹಾದಿ ನೋಡಿದರೆ, 35 ವರ್ಷಗಳ ಹಿಂದಿನ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದ ನೆನಪಾಗದೇ ಇರದು. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದ ಮಾಲೀಕತ್ವದ ವಿಷಯದಲ್ಲಿ ಕೂಡ ಆಗ ಇದೇ ರೀತಿಯಲ್ಲಿ ಎರಡು ಕೋಮುಗಳ ನಡುವೆ ವಾಗ್ವಾದವೇರ್ಪಟ್ಟಿತ್ತು. ವಾಗ್ವಾದ, ಸಂಘರ್ಷಕ್ಕೆ ತಿರುಗಿ, ಬೀದಿ ಹೋರಾಟ ನಡೆದು, ಮಾರಾಮಾರಿಗಳೇ ನಡೆದು ದೇಶವ್ಯಾಪಿ ಸುದ್ದಿಯಾಗಿತ್ತು. 

ಆ ಜಾಗವು ಅಲ್ಲಿನ ಅಂಜುಮನ್ ಎ- ಇಸ್ಲಾಂ ಸಂಸ್ಥೆಗೆ ಸೇರಿದ್ದು ಎಂದು ಮುಸ್ಲಿಮರು ಮತ್ತು ಅದು ಸಾರ್ವಜನಿಕ ಮೈದಾನ ಎಂದು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದವು. ಆ ಹಿನ್ನೆಲೆಯಲ್ಲಿ ಆರಂಭವಾದ ವಾಗ್ವಾದ ಕೊನೆಗೆ ಪೊಲೀಸರ ಲಾಠಿ ಪ್ರಹಾರ, ಹಿಂದೂ ಮುಸ್ಲಿಂ ಗಲಭೆ ಮತ್ತು ನಿಷೇಧಾಜ್ಞೆ, ಕರ್ಫ್ಯೂನಲ್ಲಿ ಅಂತ್ಯವಾಗಿತ್ತು. 1992ರಲ್ಲಿ ಆಗಸ್ಟ್‌ 15ರಂದು ಹಿಂದೂಪರ ಸಂಘಟನೆಗಳು ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಮುಂದಾಗಿದ್ದವು. ಈ ಘಟನೆ ಸಂಘರ್ಷಕ್ಕೆ ಕಾರಣವಾಗಿದ್ದು, ಪೊಲೀಸರು ಲಾಠಿ ಪ್ರಹಾರ ಕೂಡಾ ನಡೆಸಿದ್ದರು. ಗಲಭೆಯಲ್ಲಿ ಆರು ಮಂದಿ ಜೀವ ಕಳೆದುಕೊಂಡಿದ್ದರು.

ಆ ಸಂಘರ್ಷಕ್ಕೆ ದಶಕಗಳ ಮುಂಚೆ, ಅಂಜುಮನ್ ಎ- ಇಸ್ಲಾಂ ಸಂಸ್ಥೆಯರಿಗೆ ಯಾವುದೇ ಕಟ್ಟಡ ನಿರ್ಮಿಸಲು ಅವಕಾಶ ಕೊಡಬಾರದು. ಸಾರ್ವಜನಿಕರಿಗೆ ಈ ಮೈದಾನ ಉಪಯೋಗಿಸಲು ಹಕ್ಕು ಇದೆ ಎಂದು 1972ರಲ್ಲಿ ಹುಬ್ಬಳ್ಳಿ ಮುನ್ಸಿಪಲ್ ಕೋರ್ಟ್‌ನಲ್ಲಿ ಬಿ ಎಸ್ ಶೆಟ್ಟರ್ ಹಾಗೂ ಮಾಜಿ ಶಾಸಕ ಎಂ ಜಿ ಜರತಾರಘರ ಮೊದಲಾದವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

1972ರಲ್ಲಿ ಹುಬ್ಬಳ್ಳಿ ಮುನ್ಸಿಪಲ್ ಕೋರ್ಟ್‌ನಿಂದ ಪ್ರಾರಂಭವಾದ ಮೈದಾನದ ವಿವಾದದ ಕುರಿತು ಕಾನೂನು ಸಮರ 2010ರ ಜ.13ರಂದು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡುವವರೆಗೂ ಮುಂದುವರೆದಿತ್ತು. ಸತತವಾಗಿ 38 ವರ್ಷ ಈ ಈದ್ಗಾ ಮೈದಾನದ ವಿವಾದ ನಡೆದಿತ್ತು.

ಹುಬ್ಬಳ್ಳಿ ಈದ್ಗಾ ಮೈದಾನದ ಹಿನ್ನೆಲೆ

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಹೃದಯ ಭಾಗದಲ್ಲಿರುವ ಈದ್ಗಾ ಮೈದಾನವನ್ನು 1921ರಲ್ಲಿ ಹುಬ್ಬಳ್ಳಿ ನಗರಸಭೆಯವರು ಅಂಜುಮನ್ ಎ- ಇಸ್ಲಾಂ ಸಂಸ್ಥೆಗೆ ಭೋಗ್ಯಕ್ಕೆ ನೀಡಿತ್ತು. ಭೋಗ್ಯ ಕರಾರಿನ ಪ್ರಕಾರ ದಿನಕ್ಕೆ ಎರಡು ಬಾರಿ ಪ್ರಾರ್ಥನೆ ವರ್ಷಕ್ಕೆ ಒಂದು ರೂಪಾಯಿ ಬಾಡಿಗೆ ಒಪ್ಪಂದದೊಂದಿಗೆ ಸಂಸ್ಥೆಗೆ ವಹಿಸಿದ್ದರು.

Image
ಹುಬ್ಬಳ್ಳಿಯ ಈದ್ಗಾ ಮೈದಾನ
ಹುಬ್ಬಳ್ಳಿಯಲ್ಲಿರುವ ಈದ್ಗಾ ಮೈದಾನ

ಹುಬ್ಬಳ್ಳಿ ನಗರಸಭೆ ಶಿಫಾರಸಿನ ಮೇರೆಗೆ 1961ರಲ್ಲಿ ಸರ್ಕಾರವು ಅಂಜುಮನ್ ಎ- ಇಸ್ಲಾಂನವರಿಗೆ ಅಂಗಡಿ ಕಟ್ಟಲು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಹಿಂದುಪರ ಸಂಘಟಣೆಗಳು ಪಿಐಎಲ್ ಹಾಕಿದ್ದವು.

ಪ್ರಕರಣ ನ್ಯಾಯಾಲಯದ ಕಟಕಟೆಯಲ್ಲಿರುವಾಗಲೇ 1992ರ ಆಗಸ್ಟ್ 15ರಂದು ಬಿಜೆಪಿ ಪ್ರತಿಭಟನೆ ನಡೆಸಿತು. ಆ ವೇಳೆ ಬಿ ಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್, ಅನಂತಕುಮಾರ್‌, ಪ್ರಲ್ಹಾದ್‌ ಜೋಶಿ ಮೊದಲಾದವರ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಸಂಘ ಪರಿವಾರ ಮುಂದಾಗಿತ್ತು. ಇದು ಸಂಘರ್ಷಕ್ಕೆ ಮುನ್ನುಡಿಯಾಯಿತು.

ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಸಂಘಟನೆಯನ್ನು ಬಲಪಡಿಸಲು ಮತ್ತು ರಾಜಕೀಯ ಪ್ರಾಬಲ್ಯ ಸಾಧಿಸಲು ಒಂದು ಅವಕಾಶವಾಗಿ ಒದಗಿಬಂದಿತ್ತು. ಅದೇ ಹೊತ್ತಿಗೆ ಹುಬ್ಬಳ್ಳಿ ಧಾರವಾಡವೂ ಸೇರಿದಂತೆ, ಉತ್ತರ ಕರ್ನಾಟಕದ ಹಿಂದು ಮುಸ್ಲಿಂ ಸಾಮರಸ್ಯಕ್ಕೆ ಮತ್ತು ಸಹಬಾಳ್ವೆಗೆ ಶಾಶ್ವತ ಪೆಟ್ಟು ಕೊಟ್ಟಿತ್ತು.

ಇದೀಗ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಕೂಡಾ ಹುಬ್ಬಳ್ಳಿಯ ಈದ್ಗಾ ಹಾದಿಯಲ್ಲಿಯೇ ಸಾಗುತ್ತಿರುವಂತಿದೆ.

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ

1952ರಿಂದ ಪ್ರಾರಂಭವಾದ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ಇಲ್ಲಿಯವರೆಗೂ ಮುಗಿದಿಲ್ಲ. ಮೈದಾನದಲ್ಲಿ ಆಟ ಆಡಲು, ಪ್ರಾರ್ಥನೆ ಸಲ್ಲಿಸಲು ಹಾಗೂ ಹಿಂದೂ ಹಬ್ಬಗಳ ಆಚರಣೆಗೆ ಅವಕಾಶ ನೀಡಿ ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದವು.

ಈ ಹಿನ್ನೆಲೆಯಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಮೈದಾನವನ್ನು ಆಟದ ಮೈದಾನ ಎಂದು ಘೋಷಿಸಿತ್ತು.

ಚಾಮರಾಜಪೇಟೆ ಈದ್ಗಾ ಮೈದಾನದ ಇತಿಹಾಸ

ಹಲವು ದಶಕಗಳಿಂದ ಈದ್ಗಾ ಮೈದಾನದ ಮಾಲೀಕತ್ವದ ವಿವಾದವಿದೆ. ಈ ಹಿಂದೆ ಮೈಸೂರಿನ ರಾಜಮನೆತನದ ಒಡೆಯರ್ ಕುಟುಂಬದಿಂದ 10 ಎಕರೆಗೂ ಹೆಚ್ಚು ಭೂಮಿಯನ್ನು ಮುಸ್ಲಿಂ ಸಮುದಾಯಕ್ಕೆ ಸ್ಮಶಾನಕ್ಕಾಗಿ ಹಾಗೂ ಈದ್ಗಾಗಾಗಿ ನೀಡಲಾಗಿತ್ತು. 1965ರಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಈದ್ಗಾ ಮೈದಾನವನ್ನು ತನ್ನ ವಶದಲ್ಲಿ ಮುಂದುವರಿಯುವಂತೆ ನೋಡಿಕೊಂಡಿತ್ತು.

ಈದ್ಗಾಗಾಗಿ ಮುಸ್ಲಿಮರಿಗೆ ಬದಲಿ ಜಾಗ

"ಗೋರಿಪಾಳ್ಯದಲ್ಲಿ ಮುಸ್ಲಿಮರಿಗೆ ಸರ್ಕಾರ ಬದಲಿ ಜಾಗವನ್ನು ನೀಡಿತ್ತು. ಮುಸ್ಲಿಂ ಸಮುದಾಯದವರು ಬಡಾ ಈದ್ಗಾ ಜಾಗವನ್ನು ಉಪಯೋಗಿಸುತ್ತಿದ್ದಾರೆ. ಜತೆಗೆ ಚಾಮರಾಜಪೇಟೆಯ ಈ ಬಿಬಿಎಂಪಿ ಆಟದ ಮೈದಾನವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ" ಎಂಬುದು ಹಿಂದುಪರ ಸಂಘಟನೆಗಳ ಆರೋಪವಾಗಿದೆ.

ಮೈದಾನ ಕಂದಾಯ ಇಲಾಖೆಗೆ ಸೇರಿದ್ದು: ಆರ್ ಅಶೋಕ

ಈ ನಡುವೆ ಮೈದಾನದ ವಿವಾದದ ಕುರಿತು ಇತ್ತೀಚೆಗೆ ಹೇಳಿಕೆ ನೀಡಿರುವ ಕಂದಾಯ ಸಚಿವ ಆರ್‌ ಅಶೋಕ್‌, "ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು, ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆಯಬೇಕಿದ್ದರೂ ಕಂದಾಯ ಇಲಾಖೆಯ ಅನುಮತಿ ಪಡೆಯಬೇಕು" ಎಂದು ಹೇಳಿದ್ದಾರೆ.

ವಿವಾದದ ಮಧ್ಯೆಯೇ ಶಾಸಕರ ಹೇಳಿಕೆ

ಈ ನಡುವೆ, "ಈದ್ಗಾ ಮೈದಾನದಲ್ಲಿ ಸ್ವಾತಂತ್ಯ್ರೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಹಬ್ಬಗಳನ್ನು ಆಚರಿಸಬಹುದು. ಆದರೆ, ಹಿಂದೂ ಹಬ್ಬಗಳ ಆಚರಣೆಗೆ ಅವಕಾಶ ಇಲ್ಲ” ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಅವರ ಈ ಹೇಳಿಕೆ ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಚುನಾವಣೆ| ವಾರ್ಡ್‌ವಾರು ಮೀಸಲಾತಿ ವಿರುದ್ಧ ಸಿಡಿದೆದ್ದ ವಿಪಕ್ಷಗಳು!

ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಎಸ್ ಭಾಸ್ಕರನ್ ಈ ದಿನ.ಕಾಮ್ ಜತೆಗೆ ಮಾತನಾಡಿ, ”ಚಾಮರಾಜಪೇಟೆ ಆಟದ ಮೈದಾನ ಜನಬಳಕೆಯಲ್ಲಿ ಈದ್ಗಾ ಮೈದಾನವಾಗಿ ಬದಲಾಗಿದೆ. ಈ ಮೈದಾನಕ್ಕೆ ʼಜಯಚಾಮರಾಜೇಂದ್ರ ಒಡೆಯರ್ ಮೈದಾನʼ ಎಂದು ಹೆಸರಿಡಲು ಮನವಿ ಮಾಡಲಾಗಿತ್ತು. ಈಗಾಗಲೇ ಅಧಿಕೃತವಾಗಿ ಹೆಸರು ಒಪ್ಪಿಗೆಯಾಗಿದೆ” ಎಂದರು.

“ಈ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು, ಎಂದು ಸರ್ಕಾರ ನಿರ್ಧರಿಸಿದೆ. ಹಿಂದೂಗಳ ಎಲ್ಲ ಹಬ್ಬಗಳನ್ನು ಆಚರಣೆ ಮಾಡಬೇಕು ಎಂಬುದು ನಮ್ಮ ಆಸೆ. ಆದರೆ, ಶಾಸಕ ಜಮೀರ್ ಅಹ್ಮದ್ ಅವರು ಸ್ವಾತಂತ್ರ್ಯ ದಿನಾಚರಣೆ ಮಾಡಿ, ಆದರೆ ಹಿಂದೂ ಹಬ್ಬ ಮಾಡಬಾರದು ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ಈ ವರ್ಷ ಮೈದಾನದಲ್ಲಿ ಗಣಪತಿ ಉತ್ಸವವನ್ನು ಮಾಡೇ ಮಾಡುತ್ತೇವೆ” ಎಂದು ಅವರು ಹೇಳಿದರು.

"ನವೆಂಬರ್ 15ರೊಳಗೆ ಮೈದಾನದಲ್ಲಿರುವ ಗೋಡೆಯನ್ನು ನೆಲಸಮ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತೇವೆ. ಅವರು ಕೂಡಾ ಮನವಿಗೆ ಸ್ಪಂದಿಸದಿದ್ದರೇ, ನಾವೇ ನೆಲಸಮ ಮಾಡುತ್ತೇವೆ. ಈಗಾಗಲೇ ಮುಸ್ಲಿಮರಿಗೆ ಬದಲಿ ಈದ್ಗಾ ಮೈದಾನವನ್ನು ನೀಡಿದ್ದಾರೆ. ಸರ್ಕಾರ ಈ ಕುರಿತು ಸುದ್ದಿಗೋಷ್ಠಿ ಮಾಡಿ ಜನರಿಗೆ ವಾಸ್ತವಾಂಶ ತಿಳಿಸಬೇಕು” ಎಂದರು.

ಈ ಕುರಿತಂತೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ, ”ಚಾಮರಾಜಪೇಟೆ ಮೈದಾನ ಸರ್ಕಾರದ ಮಾಲೀಕತ್ವಕ್ಕೆ ಬಂದಿರುವುದು ಖುಷಿಯ ವಿಚಾರ. ಜಮೀರ್ ಅಹ್ಮದ್ ಅವರು ಚಾಮರಾಜಪೇಟೆಯ ಶಾಸಕರಾಗಿ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿರುವುದು ಬೇಸರದ ಸಂಗತಿ. ಹಿಂದೂ ಹಬ್ಬಗಳ ಆಚರಣೆಗೆ ಅವಕಾಶ ನೀಡದಿದ್ದರೇ, ಪ್ರತಿಭಟನೆ ಮಾಡುತ್ತೇವೆ” ಎಂದು ಹೇಳಿದರು.

ಒಟ್ಟಾರೆ, ಸರ್ಕಾರ ಮೈದಾನದ ಜಾಗ ತನ್ನದು. ತನ್ನ ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮವನ್ನು ಅಲ್ಲಿ ಯಾರೂ ನಡೆಸಲಾಗದು ಎಂದು ಸ್ಪಷ್ಟಪಡಿಸಿದ ಬಳಿಕವೂ ಎರಡೂ ಕಡೆಯಿಂದ ಪರಸ್ಪರ ವ್ಯತಿರಿಕ್ತ ಹೇಳಿಕೆಗಳು ಸದ್ದು ಮಾಡುತ್ತಿವೆ. ಆಗಸ್ಟ್‌ 15ರ ಸುವರ್ಣ ಸ್ವಾತಂತ್ರ್ಯ ದಿನದ ಧ್ವಜಾರೋಹಣಕ್ಕೆ ಒಂದು ಬಣ ಸಜ್ಜಾಗಿದ್ದರೆ, ಮತ್ತೊಂದು ಬಣ ಆ ಜಾಗದಲ್ಲಿ ರಾಷ್ಟ್ರೀಯ ಹಬ್ಬ ಆಚರಣೆಗೆ ತಮ್ಮ ಆಕ್ಷೇಪವೇನಿಲ್ಲ. ಅಲ್ಲಿ ಒಂದು ಕೋಮಿಗೆ ಸೇರಿದ ಹಬ್ಬ- ಉತ್ಸವಕ್ಕೆ ಅವಕಾಶ ನೀಡಬಾರದು ಎಂದಿದೆ. 

ಬರಲಿರುವ ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಈ ಹೇಳಿಕೆ, ಪ್ರತಿ ಹೇಳಿಕೆಗಳು ಪಡೆದುಕೊಳ್ಳಬಹುದಾದ ಸ್ವರೂಪದ ಬಗ್ಗೆ ಜನಸಾಮಾನ್ಯರಲ್ಲಿ ಆತಂಕ ಮನೆಮಾಡಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್